ಸಹಕಾರಿ ಪ್ರಕಾಶನ , ಸಾಹಿತಿಗಳಿಗೆ ಆರೋಗ್ಯ ವಿಮೆ,ಶತಮಾನೋತ್ಸವ ಆಚರಿಸುತ್ತಿರುವ ಶಾಲೆಗಳ ರಕ್ಷಣೆ, ಪುಸ್ತಕ ಸಂಸ್ಕೃತಿ ರಕ್ಷಣೆ ,ಗಡಿ ಬಾಗದಲ್ಲಿ ಕನ್ನಡ ನುಡಿ ರಕ್ಷಣೆ ಕುರಿತು ನಿರ್ಣಯ ಕೈಗೊಳ್ಳಲು ಒತ್ತಾಯ
ಡಿ. ಡಿ.ನ್ಯೂಸ್. ಕರ್ನಾಟಕ
ಡಿ.ಡಿ.ನ್ಯೂಸ್.ಕರ್ನಾಟಕ
ಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತೀಯ ಸಮ್ಮೇಳನದಲ್ಲಿ ಕನ್ನಡ ನಾಡು,ನುಡಿಯ ಅಭ್ಯುದಯಕ್ಕೆ ಪೂರಕವಾಗುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಭೇರ್ಯ ರಾಮ ಕುಮಾರ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಮಹೇಶ್ ಜೋಷಿ ಅವರಿಗೆ ವಿವರವಾದ ಪತ್ರ ಬರೆದಿರುವ ಅವರು ಎಲ್ಲ ತಾಲೂಕುಗಳಲ್ಲಿ ಸಾಹಿತ್ಯ ಭವನ,ಗಡಿ ಜಿಲ್ಲೆಯ ಶಾಲೆಗಳಿಗೆ ಕನ್ನಡ ಶಿಕ್ಷಕರ ನೇಮಕ,ಪುಸ್ತಕ ಸಂಸ್ಕೃತಿಗೆ ಒತ್ತು , ಶತಮಾ ನ ತುಂಬಿದ ಶಾಲೆಗಳ ಪುನರುತ್ಥಾನ, ,ಸಾಹಿತಿಗಳಿಗೆ ಆರೋಗ್ಯ ವಿಮೆ, ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಕಡ್ಡಾಯ ಬಳಕೆ, ಜಿಲ್ಲಾ ಕೇಂದ್ರದಲ್ಲಿ ಸಾಹಿತಿಗಳ ವನ ನಿರ್ಮಾಣ ಕುರಿತು ನಿರ್ಣಯ ಅಂಗೀಕರಿಸಲು
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಷಿ ಅವರನ್ನು ಕೋರಿದ್ದಾರೆ.
ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ಮಂಡ್ಯದಲ್ಲಿ ನಡೆಯಲಿರುವ 87 ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ,ಜನಪದ ಚಿಂತಕ ಡಾ. ಗೊ ರು ಚನ್ನಬಸಪ್ಪ ಅವರ ಆಯ್ಕೆ ಮಾಡಿರುವುದು ಅತ್ಯಂತ ಸ್ವಾಗತಾರ್ಹ.ಹಿರಿಯ ಸಾಹಿತ್ಯ ಹಾಗೂ ಜನಪದ ಸಾಧಕರಿಗೆ ಸಾಹಿತ್ಯ ಪರಿಷತ್ ನೀಡಿರುವ ಅತ್ಯಮೂಲ್ಯ ಗೌರವ ಇದಾಗಿದೆ.ಇದಕ್ಕಾಗಿ ಸಾಹಿತ್ಯ ಪರಿಷತ್ತಿಗೆ ಕೃತಜ್ಞತೆಗಳು ಎಂದು ತಿಳಿಸಿರುವ ಅವರು
ಕನ್ನಡ ನಾಡು ನುಡಿಯ ಸಮಗ್ರ ಅಭ್ಯು ದಯಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ ಈ ಸಂದರ್ಭದಲ್ಲಿ ಕನ್ನಡ ನಾಡು ನುಡಿಯ ಅಭಿವೃದ್ಧಿಗಾಗಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಬೇಕೆಂದು ಕೋರಿದ್ದಾರೆ.
ರಾಜ್ಯದಲ್ಲಿ ಶತಮಾನ ತುಂಬಿದ ನೂರಾರು ಸರ್ಕಾರಿ ಕನ್ನಡ ಶಾಲೆಗಳು ಅವಸಾನದ ಅಂಚಿನಲ್ಲಿವೆ. ಈ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳು ಆತಂಕದಿಂದಲೇ ತರಗತಿಯಲ್ಲಿ ಕುಳಿತುಕೊಳ್ಳ ಬೇಕಾದ ಪರಿಸ್ಥಿತಿ ಇದೆ.ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು.ಈ ಶಾಲೆಗಳ ದುರಸ್ತಿಗೆ ಅಥವಾ ಪುನರ್ನಿರ್ಮಾಣ ಮಾಡಲು ತುರ್ತು ಕ್ರಮ ಕೈಗೊಳ್ಳಬೇಕು.ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಹೇರಬೇಕು.
. ಮಹಾರಾಷ್ಟ್ರ, ಕೇರಳ, ತಮಿಳುನಾಡು , ಆಂಧ್ರ ಪ್ರದೇಶ ಗಡಿ ಪ್ರದೇಶದಲ್ಲಿರುವ ಬಹುತೇಕ ಸರ್ಕಾರಿ ಶಾಲೆಗಳಿಗೆ ಆಯಾ ರಾಜ್ಯಗಳು ಕನ್ನಡ ಶಿಕ್ಷಕರ ನೇಮಕ ಮಾಡುತ್ತಿಲ್ಲ.ಇದರಿಂದಾಗಿ ಗಡಿ ಪ್ರದೇಶಗಳ ಕನ್ನಡಿಗರ ಮಕ್ಕಳು ಕನ್ನಡ ಕಲಿಕೆ ಇಂದ ವಂಚಿತರಾಗುತ್ತಿದ್ದಾರೆ.ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಆಯಾ ರಾಜ್ಯ ಸರ್ಕಾರಗಳಿಗೆ ಪತ್ರ ಬರೆದು ಗಡಿ ಜಿಲ್ಲೆಗಳ ಸರ್ಕಾರಿ ಶಾಲೆಗಳಿಗೆ ಕನ್ನಡ ಭಾಷಾ ಶಿಕ್ಷಕರ ನೇಮಕ ಮಾಡುವಂತೆ ಒತ್ತಾಯಿಸಬೇಕು.
. ನೆರೆ ರಾಜ್ಯಗಳಾದ ತಮಿಳು ನಾಡು,ಕೇರಳ,ಮಹಾರಾಷ್ಟ್ರ,ಆಂಧ್ರ ಪ್ರದೇಶ ,ರಾಷ್ಟ್ರದ ರಾಜಧಾನಿ ನವ ದೆಹಲಿ ,ಗುಜರಾತ್ ,ಗೋವಾ ಸೇರಿದಂತೆ ಹಲವೆಡೆ ಸಾವಿರಾರು ಕನ್ನಡಿಗರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಇವರೆಲ್ಲರ ಸಂಘಟನೆ ಹಾಗೂ ಕನ್ನಡ ನಾಡು – ನುಡಿ ಅಭಿವೃದ್ಧಿಯ ದೃಷ್ಟಿಯಿಂದ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕನ್ನಡಿಗರು ಹೆಚ್ಚು ವಾಸಿಸುತ್ತಿರುವ ಹೊರ ರಾಜ್ಯಗಳಲ್ಲೂ ಆಚರಿಸಲು ಕನ್ನಡ ಸಾಹಿತ್ಯ ಪರಿಷತ್ತು ನಿರ್ಧರಿಸಬೇಕು.
ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳ ಪ್ರಮುಖ ರಸ್ತೆಗಳು ,ವೃತ್ತಗಳು ಹಾಗೂ ಉದ್ಯಾನ ವನಗಳಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಕವಿಗಳ ಹೆಸರು ನಾಮಕರಣ ಮಾಡಬೇಕು.ಈ ಬಗ್ಗೆ ರಾಜ್ಯಸರ್ಕಾರಕ್ಕೆ ಒತ್ತಾಯ ಹೇರಬೇಕು.
ಕನ್ನಡ ಸಾಹಿತಿಗಳು ಜನಿಸಿರುವ ಪ್ರದೇಶಗಳಲ್ಲಿ ಇರುವ ರಸ್ತೆ , ವೃತ್ತ ಗಳಿಗೆ ಅವರ ಹೆಸರು ನೀಡಬೇಕು. ಆ ಮೂಲಕ ಅವರ ಸಾಹಿತ್ಯ ಸೇವೆಗೆ ಗೌರವ ನೀಡಬೇಕು.ಸಾಹಿತಿಗಳು ವ್ಯಾಸಂಗ ಮಾಡಿರುವ ಶಾಲಾ ಕಾಲೇಜುಗಳಲ್ಲಿ ಆಯಾ ಸಾಹಿತಿಗಳ ಒಂದು ಭಾವ ಚಿತ್ರ ಹಾಗೂ ಸಮಾಜಕ್ಕೆ ಅವರ ಕೊಡುಗೆಗಳ ಬಗ್ಗೆ ವಿವರ ನೀಡುವ ಫಲಕ ಹಾಕಬೇಕು. ಈ ಬಗ್ಗೆ ಆಯಾ ಜಿಲ್ಲಾ ಹಾಗೂ ತಾಲೂಕು ಸಾಹಿತ್ಯ ಪರಿಷತ್ ಘಟಕಗಳು ಕಾರ್ಯ ರೂಪಿಸಬೇಕು.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಯೊಂದು ಜಿಲ್ಲಾ ಘಟಕಗಳು ಹಾಗೂ ತಾಲೂಕು ಘಟಕಗಳು ಆಯಾ ಜಿಲ್ಲೆಯ ಹಾಗೂ ತಾಲೂಕಿನ ಸಾಹಿತಿಗಳ ಹೆಸರು ,ವಿಳಾಸ ,ಅವರ ಕೊಡುಗೆಗಳ ಬಗ್ಗೆ ಕೈಪಿಡಿ ಪ್ರಕಟಿಸ ಬೇಕು.
ಇಂದು ಪುಸ್ತಕ ಪ್ರಕಟಣೆ ಬಹಳ ಕಷ್ಟಕರ. ಒಂದೆಡೆ ಡಿಜಿಟಲ್ ಪುಸ್ತಕಗಳ ಹಾವಳಿ.ಮತ್ತೊಂದು ಕಡೆ ಪುಸ್ತಕ ಮುದ್ರಣ ವೆಚ್ಚದ ಹೆಚ್ಚಳ. ಇದರಿಂದಾಗಿ ಲೇಖಕರು ಸಮಸ್ಯೆಗಳ ಸುಳಿಗೆ ಸಿಲುಕಿದ್ದಾರೆ.ಈ ಪರಿಸ್ಥಿತಿ ನಿವಾರಿಸಲು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಲೇಖಕರ ಸಹಕಾರ ಬ್ಯಾಂಕ್ ಆರಂಭಿಸಬೇಕು. ಆ ಮೂಲಕ ಪುಸ್ತಕ ಪ್ರಕಟಣೆಗೆ ಆರ್ಥಿಕ ಸಹಕಾರ ನೀಡಬೇಕು. ಕನ್ನಡ ಲೇಖಕರ ಪುಸ್ತಕ ಪ್ರಕಟಣೆ ಹಾಗೂ ಮಾರಾಟ ವ್ಯವಸ್ಥೆ ಕಲ್ಪಿಸಲು ಕನ್ನಡ ಸಾಹಿತ್ಯ ಪರಿಷತ್ ಸಹಕಾರಿ ಪ್ರಕಾಶನ ಸಂಸ್ಥೆ ಆರಂಭಿಸಬೇಕು.ಇದೀಗ ಕೇರಳ ರಾಜ್ಯದಲ್ಲಿ ಸಹಕಾರಿ ಪ್ರಕಾಶನ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತಿದೆ.ಅದೇ ರೀತಿ ಸಾಹಿತಿಗಳಿಗೆ ಆರೋಗ್ಯ ಸೌಲಭ್ಯ ಕಲ್ಪಿಸಲು ಆರೋಗ್ಯ ವಿಮೆ ವ್ಯವಸ್ಥೆ ಕಲ್ಪಿಸಬೇಕು.
ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯಲ್ಲಿ ಪುಸ್ತಕಗಳ ಸಗಟು ಖರೀದಿ ಯೋಜನೆಯು ಬಹಳ ನಿಧಾನ ಗತಿಗೆ ತಲುಪಿದೆ. ಲೇಖಕರಿಂದ ಪ್ರತಿವರ್ಷ ಪುಸ್ತಕ ಕೊಳ್ಳುವ ಹಾಗೂ ಆಯಾ ವರ್ಷವೇ ಪುಸ್ತಕದ ಹಣ ನೀಡುವ ಪದ್ಧತಿ ಜಾರಿಗೆ ಬರಬೇಕು.ಗ್ರಂಥಾಲಯದಲ್ಲಿ ಪುಸ್ತಕ ಸಂಸ್ಕೃತಿ ಉಳಿಯಬೇಕು. ಡಿಜಿಟಲ್ ಗ್ರಂಥಾಲಯದ ಹೆಸರಿನಲ್ಲಿ ಪುಸ್ತಕ ಸಂಸ್ಕೃತಿ ವಿನಾಶ ಸಲ್ಲದು.ಏಕೆಂದರೆ ಶೇಕಡಾ ಎಂಭತ್ತು ಭಾಗ ಓದುಗರು ಇಂದಿಗೂ ಪುಸ್ತಕ ಓದುವ ಅಭಿರುಚಿ ಹೊಂದಿದ್ದಾರೆ.ಆದ್ದರಿಂದ ಗ್ರಂಥಾಲಯ ಇಲಾಖೆ ಸಾಹಿತ್ಯ ಕೃತಿಗಳ ಕೊಳ್ಳುವಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು.ಈ ಬಗ್ಗೆ ರಾಜ್ಯಸರ್ಕಾರಕ್ಕೆ ಒತ್ತಾಯ ಮಾಡಬೇಕು
ರಾಜ್ಯದ ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ , ವಿಮಾನ ನಿಲ್ದಾಣ ಗಳಲ್ಲಿ ,ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ನ ನಾಮಫಲಕ ಗಳಲ್ಲಿ ತ್ರಿಭಾಷಾ ಸೂತ್ರ ಕಡ್ಡಾಯ ವಾಗಿ ಪಾಲನೆ ಆಗಬೇಕು. ನಾಮ ಫಲಕಗಳಲ್ಲಿ ಕನ್ನಡ ಭಾಷೆ ಕಡ್ಡಾಯ ಆಗಿರಬೇಕು.
ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನ ರೈಲ್ವೆ ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಲ್ಲಿ ಹಾಕಲಾಗಿರುವ ಸೆಲ್ಫಿ ಪಾಯಿಂಟ್ ಗಳಲ್ಲಿ ಐ ಲವ್ ಮೈಸೂರು ಎಂಬ ಬೃಹತ್ ಆಂಗ್ಲ ಅಕ್ಷರಗಳನ್ನು ಅಳವಡಿಸಲಾಗಿದೆ.ಈ ಸ್ಥಳದಲ್ಲಿ ಆಂಗ್ಲ ಅಕ್ಷರಗಳ ಜೊತೆಗೆ ನನ್ನ ಪ್ರೀತಿಯ ಮೈಸೂರು ಎಂಬ ಕನ್ನಡ ಅಕ್ಷರಗಳನ್ನೂ ಅಳವಡಿಸಬೇಕು.
ಈ ಬಗ್ಗೆ ಸಾಹಿತ್ಯ ಪರಿಷತ್ ಸೂಕ್ತ ಕ್ರಮ ಕೈಗೊಳ್ಳಬೇಕು.
ರಾಜ್ಯದ ಎಲ್ಲ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ, ಗ್ರಂಥಾಲಯಗಳಲ್ಲಿ ಜ್ಞಾನಪೀಠ ಪ್ರಶಸ್ತಿ ಹಾಗೂ ಸರಸ್ವತಿ ಸಮ್ಮಾನ ಪ್ರಶಸ್ತಿ ಪುರಸ್ಕೃತರ ಭಾವ ಚಿತ್ರಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಪುಸ್ತಕಗಳು ಎಲ್ಲಾ ಶಾಲೆಗಳಲ್ಲಿ ಹಾಗೂ ಗ್ರಂಥಾಲಯಗಳಲ್ಲಿ ದೊರೆಯುವಂತಾಗಬೇಕು.ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಒತ್ತಾಯ ಹೇರಬೇಕು
ಪ್ರತಿಯೊಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯಾ ಜಿಲ್ಲೆಗಳ ಹಿರಿಯ ಸಾಹಿತಿಗಳ ಶತಮಾನೋತ್ಸವ ಕಾರ್ಯಕ್ರಮ ಆಚರಿಸಬೇಕು. ಆಯಾ ಸಾಹಿತಿಗಳ ಹೆಸರಿನಲ್ಲಿ ಯುವ ಸಾಹಿತಿಗಳಿಗೆ ಶತಮಾನೋತ್ಸವ ಪ್ರಶಸ್ತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು
ಪ್ರತಿಯೊಂದು ತಾಲೂಕಿನಲ್ಲೂ ಕನ್ನಡ ಸಾಹಿತ್ಯ ಪರಿಷತ್ತಿಗೆ ಸ್ವಂತ ಕಟ್ಟಡ ಹಾಗೂ ಕನ್ನಡ ಕಾರ್ಯಕ್ರಮಗಳಿಗೆ ಸುಲಭ ದರದಲ್ಲಿ ನೀಡುವಂಥ ಸಭಾಂಗಣ ವ್ಯವಸ್ಥೆ ಕಲ್ಪಿಸಬೇಕು.ಇದಕ್ಕಾಗಿ ರಾಜ್ಯದ ಎಲ್ಲ ತಾಲೂಕುಗಳಲ್ಲೂ ಆಯಾ ಶಾಸಕರು ಉಚಿತ ನಿವೇಶನ ನೀಡಬೇಕು.
. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಸಾಹಿತ್ಯ ಉದ್ಯಾನವನ ಆರಂಭಿಸಬೇಕು.ಈ ಉದ್ಯಾನ ವನದಲ್ಲಿ ಆಯಾ ಜಿಲ್ಲೆಯಲ್ಲಿ ವಾಸಿಸುವ ಸಾಹಿತಿಗಳಿಂದ ಒಂದೊಂದು ಸಸಿ ನೆಡಬೇಕು.ಸದರಿ ಸಸಿಗೆ ಆಯಾ ಸಾಹಿತಿಗಳ. ಹೆಸರು ನೀಡಬೇಕು. ವಿವಿದ ಕಾರ್ಯಕ್ರಮಗಳಿಗಾಗಿ ಜಿಲ್ಲೆಗೆ ಭೇಟಿ ನೀಡುವ ಹೊರ ಜಿಲ್ಲೆಯ ಸಾಹಿತಿಗಳಿಂದಲೂ ಇಲ್ಲಿ ಅವರ ಸವಿನೆನಪಿನ ಸಸಿ ನೆಡಿಸಬೇಕು. ಆ ಸಾಹಿತಿಗಳ ಸವಿ ಸ್ಮರಣೆ ಹಾಗೂ ಪರಿಸರ ಸಂರಕ್ಷಣೆ ಈ ಎರಡೂ ಕಾರ್ಯಕ್ರಮಗಳು ಈಡೇರಿದಂತಾಗುತ್ತದೆ.ಭವಿಷ್ಯದಲ್ಲಿ ಸಾಹಿತಿಗಳ ಉದ್ಯಾನ ಪ್ರೇಕ್ಷಣೀಯ ಸ್ಥಳ ಆಗುತ್ತದೆ.
ಸುವರ್ಣ ಕರ್ನಾಟಕ ಮಹೋತ್ಸವದ ಸಂದರ್ಭದಲ್ಲಿ ಮಂಡ್ಯದಲ್ಲಿ ನಡೆಯುತ್ತಿರುವ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಈ ಎಲ್ಲಾ ವಿಚಾರಗಳ ಬಗ್ಗೆ ದ್ವನಿ ಎತ್ತಲಿ ಎಂದು ಸಾಹಿತಿ ಭೇರ್ಯ ರಾಮಕುಮಾರ್ ಒತ್ತಾಯಿಸಿದ್ದಾರೆ.