deshadoothanews

ವಿಶ್ವದೆದುರು ಬೆತ್ತಲಾದದ್ದು ಮಹಿಳೆಯರಲ್ಲ, ವಿಶ್ವಗುರು ಭಾರತ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕೊಪ್ಪಳ :

ಮಣಿಪುರದ ಅರಸ ಬಬ್ರುವಾಹನನ ತಾಯಿಗೆ ಜಾರಿಣಿ ಎಂದು ಜರಿದ ತನ್ನ ತಂದೆ ಅರ್ಜುನನ ಕತ್ತನ್ನೇ ಕತ್ತರಿಸಿದ ಬಬ್ರುವಾಹನನ ನಾಡಿನಲ್ಲಿ ಅದೇ ತಾಯಂದಿರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡುತ್ತಿದ್ದಾರೆ. ಪ್ರಸಿದ್ಧ ಬಾಕ್ಸಿಂಗ್ ಆಟಗಾರ್ತಿಯರಾದ ಎಂ.ಸಿ‌. ಮೇರಿಕೋಮ್ ಮತ್ತು ಎಲ್. ಸರಿತಾದೇವಿ ಹಾಗೂ ಮಣಿಪುರ ರಾಜ್ಯದ ಉಕ್ಕಿನ ಮಹಿಳೆ ಎನ್ನಿಸಿಕೊಂಡ ಐರೊಮ್ ಶರ್ಮಿಳಾ ಚಾನು ಹಾಗೂ ಮೀರಾಬಾಯಿ ಚಾನು ರಂಥಹ ದೇಶಕ್ಕೆ ಕೀರ್ತಿ ತಂದು ಕೊಟ್ಟ ಹೆಮ್ಮೆಯ ಮಹಿಳೆಯರು ಇರುವ ನಾಡಿನಲ್ಲಿಯೇ ಮಹಿಳೆ ಸಾಮೋಹಿಕ ಅತ್ಯಾಚಾರಕ್ಕೆ ಬಲಿಯಾಗುತ್ತಿದ್ದಾಳೆ.

 

ಈಶಾನ್ಯ ರಾಜ್ಯ ಮಣಿಪುರದ ಕಾಂಗ್ ಪೊಕ್ಪಿ ಜಿಲ್ಲೆಯ ಕುಕಿ ಜೋ ಎಂಬ ಬುಡಕಟ್ಟು ಸಮುದಾಯದ ಇಬ್ಬರು ಹೆಣ್ಣುಮಕ್ಕಳನ್ನ ಪೊಲೀಸರ ಕುಮ್ಮಕ್ಕಿನಿಂದ ಸಂಪೂರ್ಣ ವಿವಸ್ತ್ರಗೊಳಿಸಿ, ಮೆರವಣಿಗೆ ಮಾಡಿ, ಸಾಮೂಹಿಕ ಹತ್ಯಾಚಾರಗೈದ ವಿಡಿಯೋ ಚಿತ್ರಿಕರಿಸಿ, ವೈರಲ್ ಮಾಡಿ ವಿಕೃತಿ ಮೆರೆದಿರುವ ಮಣಿಪುರದ ಮೈತೆಯಿ ಸಮುದಾಯದ ಪುರುಷ ಮೃಗಗಳ ಹೀನ ಕೃತ್ಯ ಇಡೀ ದೇಶವನ್ನೇ ತಲ್ಲಣಗೊಳಿಸಿದೆ.
‘ದುಷ್ಕರ್ಮಿಗಳ ಗುಂಪಿಗೆ ನಮ್ಮನ್ನ ಒಪ್ಪಿಸಿ ಅತ್ಯಾಚಾರ ಮಾಡಲು ಪೊಲೀಸರೇ ದಾರಿ ಮಾಡಿಕೊಟ್ಟರು, ನಮ್ಮ ಜೊತೆಗಿದ್ದ ಇನ್ನೊಬ್ಬ 50 ವರ್ಷದ ಮಹಿಳೆಯನ್ನೂ ವಿವಸ್ತ್ರ ಗೊಳಿಸಿದ್ದರು, ನನ್ನ ಅಪ್ಪ ಮತ್ತು ಅಣ್ಣನನ್ನು ಕೊಂದಿದ್ದಾರೆ’ ಎಂದು ಸ್ವತಹ ಸಂತ್ರಸ್ಥ ಮಹಿಳೆಯೇ ಮಾದ್ಯಮಗಳ ಮುಂದೆ ಹೇಳಿಕೆ ನೀಡಿರುವುದು ನೋಡಿದರೆ ಅಲ್ಲಿನ ಕಾನೂನು ವ್ಯವಸ್ಥೆ ಎಷ್ಟರ ಮಟ್ಟಿಗೆ ಹಳ್ಳ ಹಿಡಿದಿದೆ ಎನ್ನುವುದು ಅರ್ಥವಾದಿತು. ಬೇಲಿಯೇ ಎದ್ದು ಹೊಲ ಮೆಯ್ದಾಗ ಕಾಯುವವರಾರು? ಕಾಯಬೇಕಾದವರೆ ಕೊಲ್ಲಲು ನಿಂತಿರುವಾಗ ಸ್ತ್ರೀ ಕುಲಕ್ಕೆ, ತುಳಿತಕ್ಕೊಳಗಾದ ಸಮುದಾಯಗಳಿಗೆ ನ್ಯಾಯ ಸಿಗುವುದು ಎಲ್ಲಿಂದ?

 

 

ದುರದೃಷ್ಟವೆಂದರೆ ಅತ್ಯಾಚಾರಕ್ಕೊಳಗಾದ ಒಬ್ಬ ಮಹಿಳೆಯ ಪತಿ ಮಾಜಿ ಕಾರ್ಗಿಲ್ ಯೋಧರಾಗಿದ್ದು, ಆಸ್ಸಾಂ ರೆಜಿಮೆಂಟ್ ನಲ್ಲಿ ಸುಭೆದಾರರಾಗಿ, ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದರು. ‘ಕಾರ್ಗಿಲ್ ವಾರ್ ನಲ್ಲಿ  ಭಾಗವಹಿಸಿ ಪಾಕೀಸ್ತಾನಿಯರಿಂದ ಭಾರತ ದೇಶ ಕಾಪಾಡಿದೆ. ಆದರೆ ನನ್ನ ಹೆಂಡತಿ ಮತ್ತು ಸಂಬಂಧಿಕರನ್ನು ಕಾಪಾಡಿಕೊಳ್ಳಲು ನನ್ನ ಕೈಲೆ ಆಗಲಿಲ್ಲ’ ಎಂದು ಅಸಹಾಯಕರಾಗಿ ದುಃಖದಿಂದ ವಿಡಿಯೋದಲ್ಲಿ ಹೇಳಿರುವುದು ನೋಡಿ ದೇಶವೇ ಮಿಡಿಯುತ್ತಿದೆ. ಒಬ್ಬ ಯೋಧನ ಮಡದಿಗೆ ಈ ಸ್ಥಿತಿ ಬಂದಿದೆಯೆಂದರೆ ರಾಜ್ಯ ಮತ್ತು  ಕೇಂದ್ರದ ಕಾನೂನು ವ್ಯವಸ್ಥೆ ಎಷ್ಟರ ಮಟ್ಟೀಗೆ ಹದಗೆಟ್ಟಿದೆ ಎನ್ನುವುದು ಅರ್ಥವಾದಿತು.

 

ಮಹಿಳೆಯರ ಮೇಲೆ ಹತ್ಯಾಚಾರ ನಡೆದ ದಿನವೇ ಇಂಪಾಲ ಜಿಲ್ಲೆಯ ಮತ್ತಿಬ್ಬರ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಕೊಲೆಮಾಡಿರುವುದು ಮತ್ತು ಸ್ವಾತಂತ್ರ್ಯ ಹೋರಾಟಗಾರರಾದ ಎಸ್. ಚುರಚಂದ್ ಸಿಂಗ್ ಅವರ 80 ವರ್ಷದ ಪತ್ನಿ ಇಬತೊಂಬಿ ಎಂಬುವರನ್ನು ಹಿಂಸಾಚಾರಿಗಳು ಮನೆಯೊಳಗೆ ಕೂಡಿ ಹಾಕಿ ಬೆಂಕಿ ಹಚ್ಚಿ ಸಜೀವ ಧಹನ ಮಾಡಿ ವಿಕೃತಿ ಮೆರೆದಿರುವುದು ಪೊಲೀಸ್ ಎಫ್.ಐ.ಆರ್. ನಲ್ಲಿ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಆದರೆ ಇದುವರೆಗೂ ಆರೋಪಿಗಳನ್ನು ಪೊಲೀಸರು ಬಂಧಿಸಿಲ್ಲವೆಂದು ವರದಿಯಾಗಿದೆ. ಇವೆಲ್ಲ ಬೆತ್ತಲೆ ಮೆರವಣಿಗೆಯ ವಿಡಿಯೋ ವೈರಲ್ ಆದ ನಂತರ ಒಂದೊಂದೇ ಹೀನ ಕೃತ್ಯಗಳು ಬೆಳಕಿಗೆ ಬರತೊಡಗಿವೆ.
ಮೇ. 4 ರಂದು ಈ ದುಸ್ಕೃತ್ಯ ನಡೆದಿದ್ದು, ಮೇ 18 ರಂದು ಈ ಕುರಿತು ಪ್ರಕರಣ ದಾಖಲಾಗಿದೆ.
ಆದರೆ, ಎರಡುವರೆ ತಿಂಗಳಾದರೂ ಏನೇನೂ ಕ್ರಮ ಕೈಗೊಳ್ಳದೇ ಇರುವುದು ನಾಚಿಕೆಗೇಡಿತನ‌.
 ಪ್ರಕರಣ ದಾಖಲಾಗಿ ಎರಡುವರೆ ತಿಂಗಳಾದರೂ ಕೂಡ ಆರೋಪಿಗಳನ್ನು ಬಂಧಿಸದೇ ಇರುವುದು ನೋಡಿದರೆ ಅಲ್ಲಿನ ಸರ್ಕಾರ ಆ ಕಟುಕರ ಮೇಲೆ ಮೃಧು ದೋರಣೆ ತೋರಿರುವುದು ಗುಟ್ಟಾಗೇನೂ ಉಳಿದಿಲ್ಲ. ಆದರೆ ಆ ಫೈಶಾಚಿಕ ಕೃತ್ಯದ ವಿಡಿಯೋ ಜುಲೈ 19 ರಂದು ವೈರಲ್ ಆಗಿದ್ದೇ ತಡ ದೇಶ್ಯಾಧ್ಯಂತ ಜನಾಕ್ರೋಶ ವ್ಯಕ್ತವಾಗಿದೆ. ಸ್ವತಃ ಸುಪ್ರಿಂ ಕೋರ್ಟ್ ಈ ಪ್ರಕರಣ ಕೈಗೆತ್ತಿಕೊಂಡಿದೆ. ಅಷ್ಟೆ ಅಲ್ಲದೇ ಇಡೀ ಜಗತ್ತಿಗೆ ಮಣಿಪುರದ ಬೆತ್ತಲೆ ಮೆರವಣಿಗೆಯ ವಿಡಿಯೋ ಗೊತ್ತಾಗಿದೆ‌. ಅಮೇರಿಕ ಸೇರಿದಂತೆ ವಿಶ್ವದ ಹಲವಾರು ರಾಷ್ಟ್ರಗಳು ಈ ವಿಡಿಯೋ ನೋಡಿ ಆಘಾತ ವ್ಯಕ್ತಪಡಿಸಿವೆ ಎಂದರೆ, ಇಡೀ ವಿಶ್ವದ ಎದುರು ಈಗ ವಿಶ್ವಗುರು ಭಾರತ ಬೆತ್ತಲಾಗಿದೆ.

 

*ಅಸಮರ್ಥ ಮುಖ್ಯಮಂತ್ರಿ*

 

 ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರ ರೀತಿಯ ನೂರಾರು ಪ್ರಕರಣಗಳು ನಡೆದಿವೆ, ಹಾಗಾಗಿಯೇ ಇಂಟರ್ನೆಟ್ ಕಡಿತ ಗೊಳಿಸಲಾಗಿದೆ ಎಂದು ಮಣಿಪುರದ ಮುಖ್ಯಮಂತ್ರಿ ಬಿರೇನ್ ಸಿಂಗ್ ಹೇಳಿರುವುದು ನಾಚಿಕೆಗೇಡಿತನ. ಒಬ್ಬ ಹೊಣಗೇಡಿ ಮುಖ್ಯಮಂತ್ರಿಯಿಂದ ಮಾತ್ರ ಇಂಥಹ ಮಾತುಗಳನ್ನು ನಿರೀಕ್ಷಿಸಲು ಸಾಧ್ಯ. ನೂರಾರು ಇಂಥಹ ಹೀನ ಕೃತ್ಯಗಳು ಹೊರ ಜಗತ್ತಿಗೆ ಗೊತ್ತಾಗಬಾರದು, ಒಂದುವೇಳೆ ಗೊತ್ತಾದರೆ ಬಿಜೆಪಿ ಸರ್ಕಾರದ ಮರ್ಯಾದೆ ಹೋಗುತ್ತದೆ  ಎಂಬ ಹುದ್ದೇಶದಿಂದ ಇಂಟರ್ನೆಟ್ ಬಂದ್ ಮಾಡಿರುವ ಮುಖ್ಯಂತ್ರಿಯವರ ಹೇಳಿಕೆಯಂತಯೇ ಈಗ ಒಂದೊಂದೇ ವಿಕೃತಿಯ ಸಂಗತಿಗಳು, ವಿಡಿಯೋಗಳು ಹೊರಬರುತ್ತಿರುವುದು ಅವರ ಮಾತಿಗೆ ಪುಷ್ಠಿ ನೀಡುತ್ತಿವೆ.
ಬಿರೇನ್ ಸಿಂಗ್ ಅವರು ತಮ್ಮ ರಾಜ್ಯದಲ್ಲಿನ ಹಿಂಸಾಚಾರವನ್ನು ಸಣ್ಣದಿರುವಾಗಲೇ ತಡೆಗಟ್ಡಿದ್ದರೆ ನೂರಾರು ಹಿಂಸಾತ್ಮಕ ಪ್ರಕರಣಗಳ ನಡೆಯುತ್ತಿದ್ದವೇ? ಕಿಡಿ ಸಣ್ಣದಿರುವಾಗಲೇ ಆರಿಸಲು ಮನಸ್ಸು ಮಾಡದೇ ಅದಕ್ಕೆ ಪರೋಕ್ಷವಾಗಿ ತುಪ್ಪ ಸುರಿದಿರುವ ಬಿರೇನ್ ಸಿಂಗ್ ಈಗ ಅಗ್ನಿ ಕಾಡ್ಗುಚ್ಚಿನಂತೆ ವ್ಯಾಪಿಸಿ, ಅಮಾಯಕರ, ಬಡವರ, ಬುಡಕಟ್ಟ ಸಮುದಾಯಗಳ, ಹೆಣ್ಣುಮಕ್ಕಳನ್ನು ದಹಿಸಲಾರಂಭಿಸಿದೆ. ಇದಕ್ಕೆ ಕೇಂದ್ರ ಸರ್ಕಾರದ ನಿರ್ಲ್ಯಕ್ಷತನವೂ ಕಾರಣವಾಗಿದೆ. ಈ ನಿರ್ಲ್ಯಕ್ಷತನವೇ ಈಗ ವಿಶ್ವಗುರು ಭಾರತ ವಿಶ್ವದೆದುರು ಬೆತ್ತಲೆಯಾಗುವಂತೆ ಮಾಡಿದೆ.

 

ನೂರಾರು ಪ್ರಕರಣಗಳು ನಡೆದಿವೆ ಎಂದು ರಾಜಾರೋಷ ವಾಗಿ ಹೇಳುವ ಮುಖ್ಯಮಂತ್ರಿಗಳು ಆ ನೂರಾರು ಪ್ರಕರಣಗಳ ಮೇಲೆ ಕೈಗೊಂಡಿರುವ ಕ್ರಮಗಳಾದರೂ ಏನು? ಅವುಗಳನ್ನ ತಡೆಗಟ್ಟಲು ಮಾಡಿರುವ ಪ್ರಯತ್ನಗಳಾದರೂ ಏನು? ಯಾವ ಪ್ರಯತ್ನವನ್ನೂ ಸಹ ಮಾಡದೇ, ಅಪರಾಧಿಗಳನ್ನು ರಾಜ್ಯದಲ್ಲಿ ಪೋಷಿಸುತ್ತಿರುವುದು ನೋಡಿದರೆ ಅವರೊಬ್ಬ ಅಸಮರ್ಥ ಮುಖ್ಯಮಂತ್ರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂಟರ್ನೆಟ್ ಕಡಿತಗೊಳಿಸಿ ಕೋಮುವಾದಿಗಳಿಗೆ, ಹಿಂಸಾವಾದಿಗಳಿಗೆ, ಹಲ್ಲೆಕೋರರಿಗೆ, ಹತ್ಯಾಚಾರಿಗಳಿಗೆ ಅಲ್ಲಿನ ಸರ್ಕಾರ ಕುಮ್ಮಕ್ಕು ನೀಡುವ ಮೂಲಕ ಹಿಂಸಾಚಾರ ನಡೆಸಲು ಪರೋಕ್ಷ ಬೆಂಬಲ ನೀಡುತ್ತಿದೆ. ಮೈತೇಯಿ ಸಮುದಾಯದ ನಾಯಕ ಪ್ರಮೋದ್ ಸಿಂಗ್ ಎನ್ನುವಾತನು ಮಾದ್ಯಮದ ಸಂದರ್ಶನವೊಂದರಲ್ಲಿ ‘ಅಲ್ಪಸಂಖ್ಯಾತ ಬುಡಕಟ್ಟು ಕುಕಿಗಳನ್ನು ಸಂಪೂರ್ಣವಾಗಿ ನಾಶಮಾಡುತ್ತೇವೆ. ನಾವು ಸರ್ಕಾರ ಮತ್ತು ಪೊಲೀಸರ ಬೆಂಬಲವನ್ನು ಹೊಂದಿದ್ದೇವೆ. ಕುಕಿಗಳು ಈ ಬಾರಿ ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾನೆ. ಅಂದರೆ ಈ ಜನಾಂಗಿಯ ದಂಗೆ ಸರ್ಕಾರದ ಪ್ರಾಯೋಜಿತದಿಂದಲೇ ನಡೆಯುತ್ತಿರುವುದೇ ಎಂಬ ಅನುಮಾನ ನಾಗರಿಕರಲ್ಲಿ ಮೂಡಿದೆ.

 

*ಡಬ್ಬಲ್ ಇಂಜಿನ್ ಸರ್ಕಾರದ ನಿಷ್ಕ್ರೀಯತೆ :*

 

ಭಾರತ ವಿಶ್ವಗುರುವಾಗುತ್ತಿದೆ ಎಂದು ಬರಿ ಬಾಯಿಮಾತಿನಿಂದ ಬಡಾಯಿ ಕೊಚ್ಚಿಕೊಳ್ಳುವವರು   ಒಮ್ಮೆ ಮಣಿಪುರದಲ್ಲಾಗುತ್ತಿರುವ ಅತ್ಯಾಚಾರ, ಅನಾಚಾರಗಳನ್ನು, ಹಿಂಸೆಯ ಕ್ರೌರ್ಯತೆಯನ್ನು ಒಳಗಣ್ಣಿನಿಂದ ನೋಡಬೇಕು. ನಮ್ಮ ದೇಶದಲ್ಲಿ ಮಾತೃದೇವೊಭವ ಎಂದು ಹೆಣ್ಣನ್ನು ಪೂಜಿಸುತ್ತೇವೆ ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗುತ್ತೇವೆ. ಆದರೆ ಹೆಣ್ಣನ್ನು ಭಾರತಮಾತೆ ಎಂದು ಪೂಜಿಸುವವರು  ಅದೇ ಭಾರತ ಮಾತೆಯ ಸೀರೆಯನ್ನು ಸೆಳೆಯುತ್ತಿರುವ, ಮಾನಭಂಗ ಮಾಡುತ್ತಿರುವ, ಹತ್ಯೆಗಯ್ಯುತ್ತಿರುವ, ಅಂಗಾಂಗ ಮುಟ್ಟಿ, ಹಿಚುಕಿ ವಿಕೃತಿ ಮೆರೆಯುತ್ತಿರುವ ಈ ತಾಯ್ಗಂಡರಿಗೆ ಆ ರಾಜ್ಯದಲ್ಲಿ ರಾಜಮರ್ಯಾದೆ ಸಿಕ್ಕಿದೆ.

 

ಕೇವಲ ಒಂದೇ ಒಂದು ಪೋನ್ ಕರೆಯಿಂದ ಎಷ್ಟೋ ಸಾವಿರ ಕಿಮೀ ದೂರದ ದೇಶಗಳಾದ ರಷ್ಯಾ ಉಕ್ರೇನ್ ಯುದ್ಧವನ್ನೇ ನಿಲ್ಲಿಸಿರುವುದಾಗಿ ಸುದ್ದಿ ಹಬ್ಬಿಸಿ ಪ್ರಚಾರ ಗಿಟ್ಟಿಸಿಕೊಂಡಿರುವ ಪ್ರಧಾನಿ ಮೋದಿಜೀ ಯವರು ನಮ್ಮ ದೇಶದಲ್ಲೇ, ಅಂಗೈ ಅಗಲದ ರಾಜ್ಯದಲ್ಲಿ, ಅದು ತಮ್ಮದೇ ಬೀಜೆಪಿ ಪಕ್ಷದ ಆಡಳಿತ ಇರುವ ರಾಜ್ಯದಲ್ಲಿ ಸುಮಾರು  ಮೂರು ತಿಂಗಳಿನಿಂದ ಹೊತ್ತಿ ಹುರಿಯುತ್ತಿರುವ ದ್ವೇಷಾಗ್ನಿಯನ್ನು ನಂದಿಸಲು ಆಗದೇ ಇರುವುದು ನಾಚಿಕೆಗೇಡಿತನ. ಮಹಿಳೆಯರ ಮೆರವಣಿಗೆ ಮತ್ತು ಸಾಮೂಹಿಕ ಹತ್ಯಾಚಾರದ ಕೃತ್ಯಕ್ಕೆ ಸುಪ್ರಿಂ ಕೋರ್ಟ್ ರಾಜ್ಯ ಮತ್ತು ಕೇಂದ್ರಕ್ಕೆ ಛೀಮಾರಿ ಹಾಕಿದೆಯಂದರೆ, ಡಬ್ಬಲ್ ಇಂಜಿನ್ ಸರ್ಕಾರದ ನಿಷ್ಕ್ರೀಯತೆ ಅರ್ಥವಾದಿತು.

 

ಕಳೆದ ಮೂರು  ತಿಂಗಳಿನಿಂದ ಮಣಿಪುರ ಹೆಣಪುರವಾಗಿದೆ. ಎರಡು ಕೋಮಿನ ನಡುವೆ, ಎಸ್ಟಿ ಮೀಸಲಾತಿ ವಿಚಾರದಲ್ಲಿ ಅಕ್ಷರಶ ಸ್ಮಶಾನವಾಗಿ ಹೋಗಿದೆ. ಮಿಲಿಟರಿಯವರನ್ನೇ ಗುಂಡಿಕ್ಕಿ ಹತ್ಯೆ ಮಾಡಿರುವಂತ ಘಟನೆಗಳು ನಡೆದಿವೆ. ಊರಿಗೂರೇ ಬೇಂಕಿಯಲ್ಲಿ ಭಷ್ಮವಾಗಿವೆ. ಈ ಜನಾಂಗಿಯ ದಳ್ಳುರಿಯಲ್ಲಿ ಬಡವರ, ಬುಡಕಟ್ಟು ಹೆಣ್ಣುಮಕ್ಕಳ ಮೇಲೆ ಹತ್ಯಾಚಾರಗಳಾಗಿವೆ, ಹತ್ಯೆಗಳಾಗಿವೆ. 200 ಕ್ಕೂ ಹೆಚ್ಚು ಚರ್ಚುಗಳು, 17 ಕ್ಕೂ ಹೆಚ್ಚು ದೇವಾಲಯಗಳು, ನೂರಾರು ಮನೆಗಳು ಭಷ್ಮವಾಗಿವೆ. 187 ಕ್ಕೂ ಹೆಚ್ಚು
ಬಾಲಮಕ್ಕಳು, ವೃದ್ಧರು ಯುವಕರು, ಯುವತಿಯರ ಮಾರಣಹೋಮಗಳಾಗಿವೆ. ಸುಮಾರು ಲಕ್ಷದಷ್ಟು ಜನ ನಿರಾಶ್ರಿತರಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸುಮಾರು 6500 ಎಫ್.ಐ.ಆರ್ ಗಳು ದಾಖಲಾಗಿವೆ. ಇಷ್ಟೆಲ್ಲ ಆಗಿದ್ದರೂ ಕೂಡ ಒಂದು ದಿನವೂ ಕೂಡ ಮಣಿಪುರದ ಬಗ್ಗೆ ಪ್ರಧಾನಿಯವರು ತುಟಿ ಬಿಚ್ಚಿ ಮಾತಾಡದೇ ಇರುವುದು ಮತ್ತು ಗಲಬೆ ಹತ್ತಿಕ್ಕುವ ಪ್ರಯತ್ನ ಮಾಡದೇ ಇರುವುದು, ಗಲಬೆ ಮಿತಿ ಮೀರಲು  ಮತ್ತು ಸ್ತ್ರೀಯರ ಅತ್ಯಾಚಾರಗಳು ಹೆಚ್ಚಾಗಲು ಕಾರಣವಾಯಿತು‌. ರಾಜ್ಯದಲ್ಲಿ ಶಾಂತಿ ಸ್ಥಾಪಿಸುವಲ್ಲಿ ಮುಖ್ಯಮಂತ್ರಿ ಮತ್ತು ಪ್ರಧಾ‌ನ ಮಂತ್ರಿಗಳು ಹಾಗೂ ಕೇಂದ್ರ ಗೃಹ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ. ಮೂರು ತಿಂಗಳಿಂದ ಅಲ್ಲಿಯ ರೋಷಾಗ್ನಿ ಆರದೇ ಇರುವುದು ನೋಡಿದರೆ ನಿಜಕ್ಕೂ ಕೇಂದ್ರ ಗೃಹ ಇಲಾಖೆ ಜೀವಂತ ಇದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.
ಗಲಬೆ ಸೃಷ್ಟಿಯಾಗಿ ಮೂರು ತಿಂಗಳ ನಂತರ,  ವಿಡಿಯೋ ವೈರಲ್ ಆದಮೇಲೆ ಇಡೀ ದೇಶಾದ್ಯಂತ ಜನಾಕ್ರೋಶ ವ್ಯಕ್ತವಾಗಿದೆ. ಸುಪ್ರಿಂ ಕೋರ್ಟ್ ಮದ್ಯೆ ಪ್ರವೇಸಿಸಿ, ಪ್ರಕರಣವನ್ನು ಕೈಗೆತ್ತಿಕೊಂಡ ನಂತರವೇ  ಪ್ರಧಾನಿ ಮೋದಿಯವರು ಕೇವಲ 38 ಸೆಕೆಂಡ್ ತುಟಿ ಮಿಸುಕಾಡಿಸಿದ್ದಾರೆ. ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ಮಾತನಾಡಿದ್ದಾರೆ. ಆದರೆ ಮಣಿಪುರದಲ್ಲಿ ಹೊತ್ತಿ ಉರಿಯುವ ಹಿಂಸಾಚಾರದ ಬೆಂಕಿ ನಂದಿಸುವ ಕುರಿತು ಮಾತನಾಡದೇ ಇರುವುದು ವಿಪರ್ಯಾಸ.

 

60 ವಿಧಾನಸಭೆ, 2 ಲೋಕಸಭೆ, 1 ರಾಜ್ಯಸಭೆ ಇರುವ ಮಣಿಪುರದಲ್ಲಿ ಸುಮಾರು 3  ಕೋಟಿ ಜನಸಂಖ್ಯೆ ಹೊಂದಿರುವ ಒಂದು ಸಣ್ಣ ರಾಜ್ಯದ. ಕೋಮುದಳ್ಳುರಿಯನ್ನು ಹತ್ತಿಕ್ಕಲು 56 ಇಂಚಿನ ಎದೆಗೆ ಸಾಧ್ಯವಿಲ್ಲವೇ? ಕೇವಲ ರಾಜಕೀಯ ಹಿತಾಸಕ್ತಿಗಾಗಿ ಪ್ರಜೆಗಳ ಬಲಿಪಶು ಮಾಡುತ್ತಿರುವುದು ಬಿಜೆಪಿಯ ರಾಜ ನೀತಿಯೇ? ಎಂದು ದೇಶ ವಾಸಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಭರಿತರಾಗಿ ಕೇಳುತ್ತಿದ್ದಾರೆ.

 

*ಭೇಟಿ  ಬಚಾವೋ ಭೇಟಿ ಪಡಾವೋ ಈಗ ಭೇಟಿ ಜಲಾವೋ ಆಗಿದೆ :*

 

ಭೇಟಿ ಬಚಾವೋ ಭೇಟಿ ಪಡಾವೋ ಎಂದು ಹೇಳುತ್ತಿರುವ ಮೋದಿಯವರು ಹೆಣ್ಣುಮಕ್ಕಳ ರಕ್ಷಣೆಯಲ್ಲಿ ವಿಫಲರಾಗಿದ್ದಾರೆ. ವಾಸ್ತವವಾಗಿ ಭೇಟಿಯ ಮೇಲೆ ದೇಶದಲ್ಲಿ ನಡೆಯುವ ದೌರ್ಜನ್ಯ ದಬ್ಬಾಳಿಕೆ ಹತ್ಯೆ, ಹತ್ಯಾಚಾರದಂತ ಪ್ರಕರಣಗಳು ನಡೆದಾಗ ಕಂಡೂ ಕಾಣದಂತೆ ವರ್ತಿಸಿ, ಮೌನ ವಹಿಸುವುದರಿಂದ ದೌರ್ಜನ್ಯಕೋರರು ಬಚಾವ್ ಆಗುತ್ತಿದ್ದಾರೆ‌. ‘ಮೌನಂ ಸಮ್ಮತಿ’ ಎನ್ನುವ ಹಾಗೆ ಪ್ರಧಾನಿಯವರ ಮೌನದಿಂದಲೇ ದೇಶದಲ್ಲಿನ  ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು  ಗಣನೀಯ ಏರಿಕೆಯಾಗಿದೆ. ಬಿಲ್ಕಿಸ್ ಬಾನು ಅತ್ಯಾಚಾರಿಗಳ ಬಿಡುಗಡೆ, ಹತ್ರಾಸ್, ಉನ್ನಾವೊ ಅತ್ಯಾಚಾರ, ಗುಜರಾತ್ ದಂಗೆಯಲ್ಲಿ ಗರ್ಭಿಣಿ ಹೆಂಗಸಿನ ಭ್ರೂಣವನ್ನು ತ್ರಿಶೂಲದಿಂದ ಚುಚ್ಚಿ ಎತ್ತಿ ಹಿಡಿದಿದ್ದು, ಕುಸ್ತಿ ಕ್ರೀಡೆಯಲ್ಲಿ ದೇಶಕ್ಕೆ ಕೀರ್ತಿ ತಂದ ಮಹಿಳಾ ಕುಸ್ತಿಪಟುಗಳ ಮೇಲೆ ಬಿಜೆಪಿ ಸಂಸದ ನಡೆಸಿದ ಲೈಂಗಿಕ ದೌರ್ಜನ್ಯ ಇಂತಹ ಸಾವಿರಾರು ಪ್ರಕರಣಗಳು ನಡೆದು ಹೋಗಿವೆ‌. ಇವುಗಳ ವಿರುದ್ಧ ಪ್ರಧಾ‌ನಿಯವರು ಮಾತನಾಡದೇ ಇರುವುದೇ ಮಣಿಪುರದಂತ ಘಟನೆಗಳು ಹೆಚ್ಚಾಗಲು ಕಾರಣವಾಗಿವೆ. ಇವುಗಳನ್ನೆಲ್ಲ ನೋಡಿದರೆ ಭೇಟಿ ಬಚಾವೋ ಈಗ ಬೇಟಿ ಜಲಾವೋ ಎಂದು ಬದಲಾದಂತಿದೆ.
*ರಾಷ್ಟ್ರಪತಿಯವರು ಮಧ್ಯ ಪ್ರವೇಶಿಸಿ ಸರ್ಕಾರ ವಜಾಗೊಳಿಸಲಿ :*

 

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಬುಡಕಟ್ಟು ಸಮುದಾಯದವರು. ಮಣಿಪುರದ ಬುಡಕಟ್ಟು ಮಹಿಳೆಯರ ವಿಡಿಯೋ ಕುರಿತು ಒಂದು ಮಾತು ಆಡದೇ ಇರುವುದು, ವಿಕೃತಿಯನ್ನು ಖಂಡಿಸದೇ ಇರುವುದು ದುರಂತ. ರಾಷ್ಟ್ರಪತಿಯವರು ಯಾವುದೇ ಒಂದು ಪಕ್ಷಕ್ಕೆ ಸೀಮಿತರಾಗದೇ  ಕೇಂದ್ರ ಸರ್ಕಾರದ ಕೈಗೊಂಬೆಯಾಗದೇ ಮಣಿಪುರದಲ್ಲಿ ಅಶಾಂತಿ ಸೃಷ್ಟಿಸಿರುವ ಕ್ರಿಮಿಗಳಕ ವಿರುದ್ಧ ಹಾಗೂ, ಶಾಂತಿ ಕಾಪಾಡಲು ವಿಫಲವಾಗಿರುವ ಅಲ್ಲಿನ ಬಿಜೆಪಿ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಬೇಕು.  ಸಂವಿಧಾನದಲ್ಲಿ ಸೆಕ್ಸೆನ್ – 355 ನೇ ವಿಧಿ ಹೇಳುವಂತೆ ಪ್ರತಿಯೊಂದು ರಾಜ್ಯದಲ್ಲಿ ಶಾಂತಿ ಸ್ಥಾಪಿಸುವುದು ಮತ್ತು ಕಾಪಾಡುವುದು ಕೇಂದ್ರ ಸರ್ಕಾರದ ಜವಾಬ್ಧಾರಿಯಾಗಿರುತ್ತದೆ. ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆ ಮತ್ತು ಭದ್ರತೆಯನ್ನು ಸ್ಥಾಪಿಸಲು ಮುಖ್ಯಮಂತ್ರಿ ಬೀರೆಂದ್ರ ಸಿಂಗ್ ರಿಂದಲೂ, ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದಲೂ ಹಾಗೂ ಗೃಹಮಂತ್ರಿ ಅಮಿತ್ ಶಾ ರಿಂದಲೂ ಸಾಧ್ಯವಾಗಿಲ್ಲ. ಸದ್ಯ  ಮಣಿಪುರದ ಸರ್ಕಾರವನ್ನು ವಜಾಗೊಳಿಸಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಏರಬೇಕಾದ ಕೆಲಸ ತುರ್ತಾಗಿ ಆಗಬೇಕಾಗಿದೆ.

 

 

*ಬಸವರಾಜ ಎನ್. ಬೋದೂರು*
ಜಿ. ಕೊಪ್ಪಳ
Leave A Reply

Your email address will not be published.