ಡಿ ಡಿ ನ್ಯೂಸ್. ಕೊಪ್ಪಳ :
ಗಂಗಾವತಿ ತಾಲೂಕಿನ ಆನೆಗುಂದಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜೂನ್ 26ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಅಲಕನಂದಾ ಮಳಗಿ ಅವರ ಅಧ್ಯಕ್ಷತೆಯಲ್ಲಿ ಆರೋಗ್ಯ, ಆಶಾ ಕಾರ್ಯಕರ್ತೆಯರ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಡಿ.ಹೆಚ್.ಓ ಅವರು ಮಾತನಾಡಿ, ಜಿಲ್ಲೆಯಲ್ಲಿ ಅಲ್ಲಲ್ಲಿ ಸಂಶಯಾಸ್ಪದ ವಾಂತಿ-ಬೇಧಿ ಪ್ರಕರಣಗಳು ವರದಿಯಾಗುತ್ತಿದ್ದು, ಗ್ರಾಮದಲ್ಲಿ ಕುಡಿಯುವ ನೀರಿನ ಮೂಲಗಳ ಪೈಪ್‌ಲೈನ್ ಸೋರಿಕೆ ಹಾಗೂ ಕುಡಿಯುವ ನೀರಿನ ಶುದ್ಧಿಕರಣದ ಬಗ್ಗೆ ಎಲ್ಲರೂ ಗಂಭೀರತೆಯಿಂದ ಕೆಲಸ ಮಾಡಬೇಕು. ಪ್ರಕರಣಗಳು ಉಂಟಾದರೆ ಜಿಲ್ಲಾ ಹಾಗೂ ತಾಲೂಕಾ ಮಟ್ಟಕ್ಕೆ ವರದಿ ಮಾಡಬೇಕು. ಯಾವುದೇ ಗ್ರಾಮದಲ್ಲಿ ವಾಂತಿ-ಬೇಧಿ ಪ್ರಕರಣ ಕಂಡು ಬಂದರೆ ತಕ್ಷಣ ಸ್ಪಂದಿಸಿ, ಚಿಕಿತ್ಸೆ ನೀಡಿ, ತೀವ್ರತೆ ಕಂಡುಬಂದರೆ ಮೇಲ್ಮಟ್ಟದ ಆಸ್ಪತ್ರೆಗೆ ನಿರ್ದೇಶನ ಮಾಡಬೇಕು. ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ಆರೋಗ್ಯ ಸೇವನೆಯನ್ನು ನೀಡಲು ಕ್ರಮ ವಹಿಸಿ ಎಂದು ಸೂಚನೆ ನೀಡಿದರು.
![]()
ಕುದಿಸಿ ಆರಿಸಿ ನೀರು ಕುಡಿಯುವ ಬಗ್ಗೆ ಹಾಗೂ ಶೌಚಾಲಯ ಬಳಕೆ ಮತ್ತು ಕೈತೊಳೆಯುವ ವಿಧಾನಗಳ ಕುರಿತು ಸಾರ್ವಜನಿಕರಿಗೆ ಮೇಲಿಂದ ಮೇಲೆ ಅರಿವು ಮೂಡಿಸಿ. ಗ್ರಾಮ ಪಂಚಾಯತ್ ಕಾರ್ಯಾಲಯಗಳಿಗೆ ಗ್ರಾಮಗಳ ಸ್ವಚ್ಛತೆ ಹಾಗೂ ಕುಡಿಯುವ ನೀರಿನ ಬಗ್ಗೆ ಮೇಲಿಂದ ಮೇಲೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಕಾರ್ಯದರ್ಶಿಗಳಿಗೆ ಲಿಖಿತ ರೂಪದಲ್ಲಿ ಮಾರ್ಗದರ್ಶನ ನೀಡಬೇಕು. ಪ್ರಸ್ತುತ ದಿನದಲ್ಲಿ ಮಳೆಗಾಲ ಪ್ರಾರಂಭವಾಗಿರುವುದರಿಂದ ಸೊಳ್ಳೆಗಳ ಉಪಟಳ ಹೆಚ್ಚಾಗಿ ಸೋಂಕಿತ ಸೊಳ್ಳೆಗಳಿಂದ ಡೆಂಗ್ಯೂ, ಚಿಕನ್‌ಗುನ್ಯಾ, ಮಲೇರಿಯಾ ಹಾಗೂ ಆನೆಕಾಲುರೋಗ ಹರಡಬಹುದು. ಆದ್ದರಿಂದ ಮನೆಯ ಸುತ್ತ-ಮುತ್ತಲೂ ಸ್ವಚ್ಛತೆ ಕಾಪಾಡುವ ಬಗ್ಗೆ ಸಾರ್ವಜನಿಕರಿಗೆ ಮನವರಿಕೆ ಮಾಡಬೇಕು ಎಂದು ತಿಳಿಸಿದರು.
ಗಂಗಾವತಿ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ.ಶರಣಪ್ಪ ಸಿ ಅವರು ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಾದ ಆರ್.ಸಿ.ಹೆಚ್ ಕಾರ್ಯಕ್ರಮ, ಕುಟುಂಬ ಕಲ್ಯಾಣ ಕಾರ್ಯಕ್ರಮ, ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ, ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ, ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಉಪಕೇಂದ್ರವಾರು ವರದಿ ವೀಕ್ಷಣೆ ಮಾಡಿ ಈ ವರ್ಷದ ಗುರಿ-ಸಾಧನೆ ಕುರಿತು ತಿಳಿಸಿದರು.
ಸಭೆಯಲ್ಲಿ ವೈದ್ಯಾಧಿಕಾರಿಗಳಾದ ಡಾ.ನವೀನಕುಮಾರ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವಿಜಯಪ್ರಸಾದ ಸೇರಿದಂತೆ ಸಹಾಯಕ ಆರೋಗ್ಯ ಅಧಿಕಾರಿಗಳು, ಪ್ರಾಥಮಿ ಆರೋಗ್ಯ ಸುರಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಸಿಬ್ಬಂದಿ ಉಪಸ್ಥಿತರಿದ್ದರು.