ಡಿ. ಡಿ. ನ್ಯೂಸ್. ಕೊಪ್ಪಳ
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಅವರು ಇಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಇ- ಮೇಲ್ ಮೂಲಕ ರಾಜಿನಾಮೆ ಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಅವರು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ.
ಈ ಕುರಿತು ಮಾಹಿತಿ ನೀಡಿದ ಸಂಗಣ್ಣ ಕರಡಿ, ಲೋಕಸಭೆ ಸ್ಪೀಕರ್ ಆಗಿದ್ದ ಓಂ ಬಿರ್ಲಾ ಅವರಿಗೆ ಇ-ಮೇಲ್ ಮೂಲಕ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.
ಬಿಜೆಪಿ ಸಂಸದರಾಗಿದ್ದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ನೀಡದೆ ಕೊಪ್ಪಳದಿಂದ ಬಿಜೆಪಿ ಈ ಭಾರಿ ಡಾ. ಬಸವರಾಜ ಕ್ಯಾವಟರ್ ಅವರಿಗೆ ಟಿಕೆಟ್ ನೀಡಿತ್ತು. ಇದರಿಂದ ಅವರು ಪಕ್ಷದ ರಾಜ್ಯ ನಾಯಕರ ವಿರುದ್ಧ ಸಿಡಿದೆದ್ದಿದ್ದರು. ಬಿ.ಎಸ್. ಯಡಿಯೂರಪ್ಪ, ಪ್ರಲ್ಹಾದ ಜೋಶಿ, ಬಸವರಾಜ ಬೊಮ್ಮಾಯಿ, ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಸಂಗಣ್ಣ ಕರಡಿ ಜೊತೆ ಮಾತುಕತೆ ನಡೆಸಿ ಮನವೊಲಿಕೆಗೆ ಪ್ರಯತ್ನಿಸಿದ್ದರು. ಆದರೆ ಅವರು ಕಾಂಗ್ರೆಸ್ ಸೇರ್ಪಡೆಗೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಲು ಎ.17ರಂದು ಸಮಯ ನಿಗದಿಯಾಗಿದ್ದು, ಅವರ ಭೇಟಿ ಬಳಿಕ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇನೆ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಕೂಡ ನನ್ನ ಜೊತೆ ಮಾತನಾಡಿದ್ದಾರೆ. ಅಲ್ಲದೆ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ ಎಂದು ಬಿಜೆಪಿ ಸಂಸದ ಸಂಗಣ್ಣ ಕರಡಿ ಈ ಮೊದಲು ಹೇಳಿದ್ದರು.
ಇದನ್ನು ಓದಿ: ಲೋಕಸಭೆ ಚುನಾವಣೆ: ‘ಮೋದಿ ಅಲೆ ಇಲ್ಲ, ಭ್ರಮೆಯಲ್ಲಿರಬೇಡಿ’ ಎಂದ ಬಿಜೆಪಿ ಅಭ್ಯರ್ಥಿ