Deshadootha Kannada Daily Newspaper | ದೇಶದೂತ ಕನ್ನಡ ದಿನಪತ್ರಿಕೆ | ಕೊಪ್ಪಳ ಜಿಲ್ಲೆ ದಿನಪತ್ರಿಕೆ ಸುದ್ದಿ | Latest koppal News

ಡಿಎಚ್‌ಓ, ಡಿಎಸ್ಓ ಅವರಿಂದ ಮುಂದುವರೆದ ಕ್ಷೇತ್ರ ಭೇಟಿ

ಡಿ ಡಿ ನ್ಯೂಸ್. ಕೊಪ್ಪಳ

ಡಿ ಡಿ ನ್ಯೂಸ್. ಕೊಪ್ಪಳ :
ಯಲಬುರ್ಗಾ ತಾಲೂಕಿನ ವಜ್ರಬಂಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಸಾಲಬಾವಿ ಗ್ರಾಮದಲ್ಲಿ ಸಂಶಯಾಸ್ಪದ ವಾಂತಿ-ಭೇದಿ ಪ್ರಕರಣ ಕಂಡು ಬಂದ ಪ್ರಯುಕ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಅಲಕನಂದಾ ಮಳಗಿ ‌ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ನಂದಕುಮಾರ ಅವರು ಇತ್ತೀಚೆಗೆ ಸಾಲಬಾವಿಗೆ ಭೇಟಿ ನೀಡಿದರು.
ಗ್ರಾಮದಲ್ಲಿ ಪ್ರಾರಂಭಿಸಿದ ತುರ್ತ ಚಿಕಿತ್ಸಾ ಕೇಂದ್ರದಲ್ಲಿ ದಾಖಲಾದ ರೋಗಿಗಳ ಬಗ್ಗೆ ವೈದ್ಯಾಧಿಕಾರಿಗಳ ಜೊತೆ ಚರ್ಚಿಸಿ, ಯಾರಿಗಾದರು ವಾಂತಿ-ಭೇದಿ ಉಂಟಾಗಿ ಚಿಕಿತ್ಸಾ ಕೇಂದ್ರಕ್ಕೆ ಬಂದರೆ, ಚಿಕಿತ್ಸೆ ನೀಡುವುದರ ಜೊತೆಗೆ ಮಾಹಿತಿ ನೀಡಬೇಕು. ತೀವ್ರತರ ವಾಂತಿ-ಭೇದಿ ಉಂಟಾಗಿ ರೋಗಿಗಳು ಬಂದರೆ ಪ್ರಥಮ ಚಿಕಿತ್ಸೆ ನೀಡಿ, ಮೇಲ್ಮಟ್ಟದ ಆಸ್ಪತ್ರೆಗೆ ನಿರ್ದೇಶನ(ರೇಪರ್) ಮಾಡುವಂತೆ ಸೂಚಿಸಿದರು.
ಮನೆ ಮನೆಗೆ ಭೇಟಿ: ಗ್ರಾಮದ ಕುಡಿಯುವ ನೀರಿನ ಮೂಲಗಳನ್ನು ಪರಿಶೀಲಿಸಿ, ವಾಂತಿ-ಭೇದಿ ಉಂಟಾದ ಮನೆ ಮನೆಗೆ ಭೇಟಿ ನೀಡಿ, ಸ್ವಚ್ಛತೆ ಕಾಪಾಡುವಂತೆ ಸಾರ್ವಜನಿಕರಿಗೆ ತಿಳಿಸಿದರು.
ಬಳಿಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹತ್ತಿರ ಕೈತೊಳೆಯುವ ವಿಧಾನಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಡಿಎಚ್‌ಓ ಅವರು ಮಾತನಾಡಿ, ಶೌಚಾಲಯ ಬಳಸಿದ ನಂತರ, ಊಟಕ್ಕೂ ಮೊದಲು, ಕೆಲಸ ಮಾಡಿದ ನಂತರ, ಮಕ್ಕಳ ಶೌಚ ಸ್ವಚ್ಛ ಮಾಡಿದ ನಂತರ ಕಡ್ಡಾಯವಾಗಿ ಸೋಪು ಬಳಸಿ ಕೈತೊಳೆದುಕೊಳ್ಳಬೇಕು. ಎಲ್ಲರೂ ತಮ್ಮ ತಮ್ಮ ಮನೆಗಳಲ್ಲಿ ಕುದಿಸಿ ಆರಿಸಿದ ನೀರು ಕುಡಿಯಬೇಕು. ಮನೆಯ ಸುತ್ತ-ಮುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಬಯಲಿನಲ್ಲಿ ಮಲವಿಸರ್ಜನೆ ಮಾಡಬಾರದು. ಶೌಚಾಲಯವನ್ನೇ ಬಳಸಬೇಕು ಅಂದಾಗ ಮಾತ್ರ ವಾಂತಿ-ಭೇದಿ ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಇದೆ ವೇಳೆ ಸೋಪು ಬಳಸಿ ಕೈತೊಳೆಯುವ ಬಗ್ಗೆ ಪ್ರಾತೇಕ್ಷಿಕವಾಗಿ ಅರಿವು ಮೂಡಿಸಿದರು.
ಡಿಎಸ್ಓ ಅವರು ಗ್ರಾಮದ ಹೋಟೆಲ್ ಹಾಗೂ ಶಾಲೆಗಳಿಗೆ ಭೇಟಿ ನೀಡಿ, ಸ್ವಚ್ಛತೆ ಬಗ್ಗೆ ವೀಕ್ಷಣೆ ಮಾಡಿದರು. ಕುಡಿಯುವ ನೀರನ್ನು ಟ್ಯಾಂಕರ ಮೂಲಕ ಸರಬರಾಜು ಮಾಡಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.
ಗ್ರಾಮದ ಚರಂಡಿ ಹತ್ತಿರ ಬ್ಲೀಚಂಗ್‌ಪೌಡರ ಗ್ರಾಮ ಪಂಚಾಯಿತಿ ಸಿಬ್ಬಂದಿಗಳ ಸಹಕಾರದಿಂದ ಹಾಕಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿಗಳು, ತಾಲೂಕಾ ಪಂಚಾಯತ್ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಆರೋಗ್ಯ ಶಿಕ್ಷಣಾಧಿಕಾರಿಗಳು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
Leave A Reply

Your email address will not be published.