ಡಿ.ಡಿ. ನ್ಯೂಸ್. ಯಲಬುರ್ಗಾ :
ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಸಮಾಜದ ಏಳ್ಗೆಗಾಗಿ ದುಡಿದ ದಾಸ ಶ್ರೇಷ್ಠ ಕನಕದಾಸರು ರಚಿಸಿದ ಕೃತಿಗಳು ಹಾಗೂ ಸಮಾಜಕ್ಕೆ ನೀಡಿದ ಕೊಡುಗೆ ಬಗ್ಗೆ ವಿದ್ಯಾರ್ಥಿಗಳು ಹಾಗೂ ಜನ ಸಾಮಾನ್ಯರಿಗೆ ತಿಳುವಳಿಕೆ ಮೂಡಿಸುವ ಅವಶ್ಯಕತೆ ಇದೆ ಎಂದು ಜಿ.ಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ ಹೇಳಿದರು.
ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಕುಡಗುಂಟಿ ಮತ್ತು ಚಿಕ್ಕಮ್ಯಾಗೇರಿ ಗ್ರಾಮದ ಹಾಲುಮತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ 537ನೇ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಕನಕದಾಸರು ಅಸಂಖ್ಯಾತ ಕೀರ್ತನೆ, ಮುಂಡಿಗೆ, ನಳ ಚರಿತ್ರೆ ಹಾಗೂ ಮೋಹನ ತರಂಗಿಣಿಯಂಥ ಮಹಾನ್ ಕಾವ್ಯ ರಚಿಸಿ, ಸಮಾಜದ ಅವ್ಯವಸ್ಥೆಯ ವಿರುದ್ಧ ಗಟ್ಟಿ ಧ್ವನಿ ಎತ್ತಿದ ಮಹಾನ್ ಸಂತರು. ಕನಕದಾಸರು ರಚಿಸಿದ ಎರಡು ಮಹಾನ್ ಕಾವ್ಯಗಳು ಅವರ ಕಾವ್ಯ ಶಕ್ತಿಗೆ ಹಿಡಿದ ಕೈಗನ್ನಡಿಯಾಗಿವೆ. ಅವರ ಕೀರ್ತನೆಗಳು ಪ್ರಸಿದ್ಧಿಯಾಗಿದ್ದು, ಸಾಹಿತ್ಯದಲ್ಲಿ ಸಾಮಾಜಿಕ ಸಮಾನತೆಯ ತುಡಿತವನ್ನು ಕಾಣಬಹುದಾಗಿದೆ ಎಂದು ಬಣ್ಣಿಸಿದರು.
ನಿವೃತ್ತ ಶಿಕ್ಷಕ ಸಕ್ರಪ್ಪ ಕುಂಟ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್, ವಾಲ್ಮೀಕಿ ಹಾಗೂ ಕನಕದಾಸರಂಥ ಮಹಾನ್ ವ್ಯಕ್ತಿಗಳು ನಾನಾ ಜಾತಿಯಲ್ಲಿ ಜನ್ಮ ತಾಳಿದ ಮಾತ್ರಕ್ಕೆ ಅವರನ್ನು ಆಯಾ ಜಾತಿಗಳಿಗೆ ಸೀಮಿತಗೊಳಿಸುವುದು ಸಲ್ಲ. ಸಮಾಜದಲ್ಲಿ ಶೋಷಿತ, ಹಿಂದುಳಿದವರ ಹಾಗೂ ಬಡವರ ಧ್ವನಿಯಾಗಿ ಶ್ರಮಪಟ್ಟಿದ್ದಾರೆ. ಆ ಮೂಲಕ ಅವರೆಲ್ಲ ಮಹಾನ್ ವ್ಯಕ್ತಿಗಳಾಗಿ ಹೊರಹೊಮ್ಮಿದ್ದಾರೆ. ಹಾಗಾಗಿ ಅವರನ್ನು ಜಾತಿಗಳಿಗೆ ಸೀಮಿತಗೊಳಿಸುವುದು ಸರಿ ಅಲ್ಲ. ಅಂತಹ ಮಹನೀಯರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ನಿವೃತ್ತ ಶಿಕ್ಷಕರಾದ ಸೂಗಿರಪ್ಪ ಬಳಿಗಾರ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಅವರ ಆಪ್ತ ಸಹಾಯಕ ದೇವೇಂದ್ರ ಹೆಚ್. ಕುರಿ, ಗ್ರಾಪಂ ಸದಸ್ಯರಾದ ಯಮನೂರಪ್ಪ ಕುರಿ, ಶರಣಪ್ಪ ಕರಡದ, ಕನಕ ಯುವ ಸೇನೆಯ ತಾಲೂಕು ಅಧ್ಯಕ್ಷ ಶರಣು ಚಿಲವಾಡ್ಗಿ, ಎಸ್ಡಿಎಂಸಿ ಅಧ್ಯಕ್ಷರಾದ ಯಮನೂರಸಾಬ ನಧಾಪ್, ಈರಪ್ಪ ಸಂಗನಾಳ, ಮುಖಂಡರಾದ ಹನುಮಂತರಾಯ ದೇಸಾಯಿ, ಬಾಗೇಶ ಬಿಂದ್ಗಿ ಇತರಿದ್ದರು.
ಮೆರವಣಿಗೆ: ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲಿ ಕುಡಗುಂಟಿ ಮತ್ತು ಚಿಕ್ಕಮ್ಯಾಗೇರಿ ಗ್ರಾಮದ ಹಾಲುಮತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ 537ನೇ ಕನಕದಾಸರ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಭಾವಚಿತ್ರ ಹಾಗೂ ತಾಯಂದಿರ ಕುಂಭಗಳ ಮೆರವಣಿಗೆಗೆ ಹಾಲುಮತ ಸಮಾಜದ ಅಧ್ಯಕ್ಷ ವೀರನಗೌಡ ಬಳೂಟಗಿ, ಜಿಪಂ, ಮಾಜಿ ಸದಸ್ಯ ಈರಪ್ಪ ಕುಡಗುಂಟಿ, ತಾ.ಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ, ಎಪಿಎಂಸಿ ಮಾಜಿ ಸದಸ್ಯ ಕರಿಯಪ್ಪ ಗುರಿಕಾರ, ನಿವೃತ್ತ ಶಿಕ್ಷಕ ಸಕ್ರಪ್ಪ ಕುಂಟ್ರ, ಗ್ರಾ.ಪಂ ಮಾಜಿ ಸದಸ್ಯರಾದ ಹಂಪಯ್ಯ ಸ್ವಾಮಿ ಹಿರೇಮಠ, ಫಕೀರಪ್ಪ ಇಟಗಿ ಇತರರು ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಚಾಲನೆ ನೀಡಿದರು. ಡೊಳ್ಳು ಹಾಗೂ ವಿವಿಧ ವಾದ್ಯ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಸಾಗಿತು.