ಅಂಚೆ ಮತದಾನ ಪ್ರಕ್ರಿಯೆ: ಖುದ್ದು ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾ ಚುನಾವಣಾಧಿಕಾರಿಗಳು
ಡಿ ಡಿ ನ್ಯೂಸ್. ಕೊಪ್ಪಳ
ಡಿ ಡಿ ನ್ಯೂಸ್. ಕೊಪ್ಪಳ
ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಆಯ್ಕೆ ಮಾಡಿಕೊಂಡಿರುವ ೮೦ ವರ್ಷ ಮೇಲ್ಪಟ್ಟ ವಯೋಮಾನದ ಮತ್ತು ವಿಕಲಚೇತನ ನೋಂದಾಯಿತ ಮತದಾರರಿಂದ ನಡೆದ ಅಂಚೆ ಮತದಾನ ಪ್ರಕ್ರಿಯೆಯನ್ನು ಪರಿಶೀಲಿಸಲು ಜಿಲ್ಲಾ ಚುನಾವಣಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಏಪ್ರೀಲ್ ೨೯ರಂದು ಕೊಪ್ಪಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕೊಪ್ಪಳ ನಗರದ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿದರು.
ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ ನೋಂದಾಯಿತ ಮತದಾರರ ಮನೆಗಳಿಗೆ ಮತದಾನ ಸಿಬ್ಬಂದಿಯು ಅಗತ್ಯ ಮತಪತ್ರದೊಂದಿಗೆ ಹಾಗೂ ಇತರೇ ದಾಖಲಾತಿಗಳೊಂದಿಗೆ ಭೇಟಿ ನೀಡಿ ಮತದಾರರಿಗೆ ಅಂಚೆ ಮತದಾನ ಪತ್ರ ವಿತರಿಸುವ, ಮತದಾನದ ಕಾರ್ಯ ವಿಧಾನದ ಬಗ್ಗೆ ಮಾಹಿತಿ ಕೊಡುವ ಕಾರ್ಯವಾಗಬೇಕು. ಮತದಾರರ ಆಯ್ಕೆಯ ಮೇಲೆ ಯಾರೋಬ್ಬರೂ ಪ್ರಭಾವ ಬೀರಬಾರದು ಮತ್ತು ಮತದಾನದ ಗೌಪ್ಯತೆ ಕಾಪಾಡಬೇಕು ಎನ್ನುವ ನಿಯಮಪಾಲನೆ ಮಾಡಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳು ಸೆಕ್ಟರ್ ಅಧಿಕಾರಿಗಳಿಗೆ ಹಾಗೂ ಮತಗಟ್ಟೆ ಸಿಬ್ಬಂದಿಗೆ ಸೂಚಿಸಿದರು.
ಏಪ್ರೀಲ್ ೨೯ರಂದು ಸಂಜೆ ಸಂಜೆ ೦೪ ಗಂಟೆವರೆಗೆ ಕುಷ್ಟಗಿ ಕ್ಷೇತ್ರದಲ್ಲಿ ೪೮೬ ಮತದಾರರ ಪೈಕಿ ೧೪೧, ಕನಕಗಿರಿ ಕ್ಷೇತ್ರದಲ್ಲಿ ೩೯೭ ಮತದಾರರ ಪೈಕಿ ೧೭೮, ಗಂಗಾವತಿ ಕ್ಷೇತ್ರದಲ್ಲಿ ೨೧೫ ಮತದಾರರ ಪೈಕಿ ೧೪೮, ಯಲಬುರ್ಗಾ ಕ್ಷೇತ್ರದಲ್ಲಿ ೪೨೩ ಮತದಾರರ ಪೈಕಿ ೧೩೪, ಕೊಪ್ಪಳ ಕ್ಷೇತ್ರದಲ್ಲಿ ೭೮೨ ಮತದಾರರ ಪೈಕಿ ೧೨೮ ಜನರು ಅಂತ ಮತದಾನ ಮಾಡಿದ್ದಾರೆ ಎಂದು ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಮತದಾರರಲ್ಲಿ ಮನವಿ: ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-೨೦೨೩ ಹಿನ್ನಲೆಯಲ್ಲಿ ಏಪ್ರೀಲ್ ೨೯ರಿಂದ ಆರಂಭಗೊಂಡು ಮೇ ೦೬ರವರೆಗೆ ಮತದಾನ ಸಿಬ್ಬಂದಿ ಮನೆಮನೆಗೆ ತೆರಳಿ ಮತದಾನ ಪಡೆಯುವ ಪ್ರಕ್ರಿಯೆ ನಡೆಯುತ್ತಿದ್ದು
ಕೊಪ್ಪಳ ಜಿಲ್ಲೆಯಲ್ಲಿ ೮೦ ವರ್ಷ ಮೇಲ್ಪಟ್ಟ ವಯೋಮಾನದ ಹಾಗೂ ವಿಕಲಚೇತನ ನೋಂದಾಯಿತ ಮತದಾರರು ತಪ್ಪದೇ ಮತ ಚಲಾಯಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ಮನವಿ ಮಾಡಿದ್ದಾರೆ. ಮತದಾನ ಮಾಡಲು ಸಾಧ್ಯವಿಲ್ಲದವರು ನೆರವು ತೆಗೆದುಕೊಳ್ಳಲು ಅವಕಾಶವಿದೆ ಎಂದು ಅವರು ತಿಳಿಸಿದ್ದಾರೆ.