ನರೇಗಾ ಯೋಜನೆಯಡಿ ಮೂಲಭೂತ ಸೌಕರ್ಯಗಳ ಸಮಗ್ರ ಅಭಿವೃದ್ಧಿಗೆ ಕೊಪ್ಪಳ ತಾಲ್ಲೂಕಿನ ಮೊರನಾಳ ಗ್ರಾಮದ ಅಭಿವೃದ್ಧಿಗೆ 5.13 ಕೋಟಿ ರೂ. ಅನುದಾನ ಹಾಗೂ ಕಾಮನೂರು ಗ್ರಾಮದ ಅಭಿವೃದ್ಧಿಗೆ 4.62 ಕೋಟಿ ರೂ. ಅನುದಾನ
ಡಿ.ಡಿ. ನ್ಯೂಸ್. ಕೊಪ್ಪಳ
ಡಿ.ಡಿ.ನ್ಯೂಸ್. ಕೊಪ್ಪಳ :
ನರೇಗಾ ಯೋಜನೆಯಡಿ ಮೂಲಭೂತ ಸೌಕರ್ಯಗಳ ಸಮಗ್ರ ಅಭಿವೃದ್ಧಿಗೆ ಕೊಪ್ಪಳ ತಾಲ್ಲೂಕಿನ ಮೊರನಾಳ ಮತ್ತು ಕಾಮನೂರು ಗ್ರಾಮಗಳನ್ನು ದತ್ತು ಗ್ರಾಮಗಳನ್ನಾಗಿ ಆಯ್ಕೆ ಮಾಡಿದ್ದು, ನ.30 ಶನಿವಾರದಂದು ಕಾಮಗಾರಿಗಳಿಗೆ ಅಡಿಗಲ್ಲು ಸಮಾರಂಭ ಜರುಗಲಿದೆ.
ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಸದ ಕೆ.ರಾಜಶೇಖರ ಬಸವರಾಜ ಹಿಟ್ನಾಳ್ ಅವುರು, ಕಳೆದ ತಿಂಗಳು ನಡೆದ ದಿಶಾ ಸಮಿತಿ ಸಭೆಯಲ್ಲಿ ಚರ್ಚಿಸಿದಂತೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೊಪ್ಪಳ ವಿಧಾನಸಭಾ ಕ್ಷೇತ್ರದ ಬೆಟಗೇರಿ ಗ್ರಾಮ ಪಂಚಾಯತಿಯ ಮೋರನಾಳ ಗ್ರಾಮ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಲೇಬಗೇರಿ ಗ್ರಾಮ ಪಂಚಾಯತಿಯ ಕಾಮನೂರು ಗ್ರಾಮಗಳನ್ನು ದತ್ತು ಗ್ರಾಮಗಳನ್ನಾಗಿ ಆಯ್ಕೆ ಮಾಡಿಕೊಂಡಿದೆ. ಎಂದರು.
ದತ್ತು ಗ್ರಾಮದ ಅಭಿವೃದ್ಧಿಗಾಗಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 2024-25ನೇ ಸಾಲಿನಲ್ಲಿ ಈಗಾಗಲೇ ಕ್ರಿಯಾ ಯೋಜನೆ ಸಿದ್ಧಪಡಿಸಿ ಜಿಲ್ಲಾ ಪಂಚಾಯತಿಯಿಂದ ಅನುಮೋದನೆ ಪಡೆಯಲಾಗಿದ್ದು ನ.30ರಂದು ಮೊರನಾಳ ಗ್ರಾಮದಲ್ಲಿ ಬೆಳಿಗ್ಗೆ 11 ಗಂಟೆಗೆ ಮತ್ತು ಅದೇ ದಿನದಂದು ಮಧ್ಯಾಹ್ನ 4 ಗಂಟೆಗೆ ಕಾಮನೂರು ಗ್ರಾಮದಲ್ಲಿ ಅಡಿಗಲ್ಲು ಸಮಾರಂಭವು ಜರುಗಲಿದೆ ಎಂದು ಹೇಳಿದರು.
ಈ ಸಮಾರಂಭದಲ್ಲಿ ಪರಮಪೂಜ್ಯ ಗವಿಮಠ ಶ್ರೀಗಳಾದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಶಾಸಕರು, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯತಿಯ ಸರ್ವ ಸದಸ್ಯರು, ಜನಪ್ರತಿನಿಧಿಗಳು, ಜಿಲ್ಲಾ ಮತ್ತು ತಾಲೂಕ ಮಟ್ಟದ ಅಧಿಕಾರಿಗಳು, ಗ್ರಾಮಸ್ಥರು, ಗೃಹಲಕ್ಷ್ಮಿ ಫಲಾನುಭವಿಗಳು, ಸಂಜೀವಿನಿ ಸ್ವಸಹಾಯ ಸಂಘದ ಮಹಿಳೆಯರು, ನರೇಗಾ ಯೋಜನೆಯ ಫಲಾನುಭವಿಗಳು ಸೇರಿದಂತೆ ಆಯಾ ಗ್ರಾಮಗಳ ಜನರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮೊರನಾಳ ಗ್ರಾಮದ ಅಭಿವೃದ್ಧಿಗೆ 5.13 ಕೋಟಿ ರೂ. ಅನುದಾನ ಹಾಗೂ ಕಾಮನೂರು ಗ್ರಾಮದ ಅಭಿವೃದ್ಧಿಗೆ 4.62 ಕೋಟಿ ರೂ. ಅನುದಾನದಡಿಯಲ್ಲಿ ಗ್ರಾಮಗಳ ಸರ್ವಾಂಗಿಣ ಅಭಿವೃದ್ಧಿ ಪಡಿಸಲು ಯೋಜಿಸಿದ್ದು, ಸಮುದಾಯ ಸಜಭಾಗಿತ್ವವು ಬಹು ಮುಖ್ಯವಾಗಿದೆ, ಮಾದರಿ ಗ್ರಾಮಗಳನ್ನಾಗಿ ಮಾಡುವ ಮೂಲಕ ನರೇಗಾ ಯೋಜನೆಯಡಿ ಇಂತಹ ಕಾರ್ಯಗಳನ್ನು ಮಾಡಲು ಸಾಧ್ಯವೆಂಬುದನ್ನು ಸಾದರಪಡಿಸುವ ಯೋಜನೆ ಇದೆ ಎಂದು ತಿಳಿಸಿದರು.
ಕರೆ ಅಭಿವೃದ್ಧಿ, ವೈಯಕ್ತಿಕ ಕೃಷಿ ಹೊಂಡ ಕಾಮಗಾರಿ, ಬದು ನಿರ್ಮಾಣ, ದನದ ದೊಡ್ಡಿ, ಕುರಿ-ಮೇಕೆ ಸಾಕಾಣಿಕೆ ಶೆಡ್, ಶಾಲಾ ಕಂಪೌಂಡ್, ಶಾಲಾ ಶೌಚಾಲಯ, ಶಾಲಾ ಆಟದ ಮೈದಾನ, ಶಾಲಾ ಮಳೆ ನೀರಿನ ಕೊಯ್ಲು, ಶಾಲಾ ಅಡುಗೆ ಕೋಣೆ, ಗ್ರಾಮೀಣ ಗೋದಾಮು, ಹೊಸ ಅಂಗನವಾಡಿ ಕಟ್ಟದ ನಿರ್ಮಾಣ, ರಸ್ತೆ ಕಾಮಗಾರಿಗಳು, ಚರಂಡಿ ಕಾಮಗಾರಿಗಳು, ಸ್ಮಶಾನ ಅಭಿವೃದ್ಧಿ ಕಾಮಗಾರಿಗಳು ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸದಸ್ಯರಾದ ಸರಸ್ವತಿ ಇಟ್ಟಂಗಿ ಹಾಗೂ ಅಂಬಣ್ಣ, ನಗರಸಭೆ ಸದಸ್ಯರಾದ ರಾಜಶೇಖರ ಆಡೂರ, ಗಣ್ಯರಾದ ಕೃಷ್ಣ ಇಟ್ಟಂಗಿ ಇತರರು ಇದ್ದರು.
ಪ್ರತಿ ಹಳ್ಳಿಗಳು ಸ್ವಾವಲಂಬಿಗಳಾಗಬೇಕೆಂಬುವುದು ಗಾಂಧೀಜಿಯವರ ಕನಸಾಗಿತ್ತು. ಭಾರತದ ಭವಿಷ್ಯವು ಹಳ್ಳಿಗಳಲ್ಲಿ ಅಡಗಿದೆ ಎಂದು ಅವರು ನಂಬಿದ್ದರು. ರಾಜಕೀಯ ಮತ್ತು ಆರ್ಥಿಕ ಪ್ರಜಾಪ್ರಭುತ್ವವನ್ನು ತಳಮಟ್ಟದಲ್ಲಿ ಪ್ರಾರಂಭಿಸಲು ಅತ್ಯಂತ ಸೂಕ್ತವಾದ ಸಾಧನವೆಂದರೆ ಪಂಚಾಯತ್ ರಾಜ್ ವ್ಯವಸ್ಥೆ, “ಸರಳ ಜೀವನ ಮತ್ತು ಉನ್ನತ ಚಿಂತನೆಯ ಮೂಲವನ್ನು ಆಧರಿಸಿ ಹಳ್ಳಿಗಳನ್ನು ಗ್ರಾಮ ಪಂಚಾಯಿತಿಗಳು ನಿಯಂತ್ರಿಸಿದರೆ ಭಾರತಕ್ಕೆ ಲಾಭವಾಗುತ್ತದೆ ಎಂಬ ಗಾಂಧೀಜಿಯವರ ನಂಬಿಕೆಯನ್ನು ಬಲಪಡಿಸಲು ಈ ಎರಡು ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲಾಗುತ್ತದೆ. ರಾಜಶೇಖರ ಹಿಟ್ನಾಳ, ಸಂಸದರು ಕೊಪ್ಪಳ.