ಜಿಲ್ಲಾ ಖಜಾಂಚಿ ಜಯತೀರ್ಥ ದೇಸಾಯಿ, ರಾಜ್ಯ ಪರಿಷತ್ ಸದಸ್ಯರಾಗಿ ಮಹಮ್ಮದ್ ಆಸೀಫ್ ಅಲಿ ಆಯ್ಕೆ
ಡಿ.ಡಿ.ನ್ಯೂಸ್. ಕೊಪ್ಪಳ
ಡಿ.ಡಿ.ನ್ಯೂಸ್. ಕೊಪ್ಪಳ :
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಾಯಕ ಆಡಳಿತಾಧಿಕಾರಿ ನಾಗರಾಜ ಆರ್. ಜುಮ್ಮನ್ನವರ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದ್ದು, ನ. 29ರ ಬಳಿಕ ಅಧಿಕೃತ ಘೋಷಣೆ ಮಾಡಲಾಗುತ್ತದೆ.
ಅಧ್ಯಕ್ಷ, ಖಜಾಂಚಿ ಹಾಗೂ ರಾಜ್ಯ ಪರಿಷತ್ತ ಸದಸ್ಯ ಈ ಮೂರೂ ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಗೆ ಬುಧವಾರ ಕೊನೆಯ ದಿನವಾಗಿತ್ತು. ಪ್ರತಿ ಸ್ಥಾನಕ್ಕೆ ತಲಾ ಒಂದು ನಾಮಪತ್ರ ಮಾತ್ರ ಸಲ್ಲಿಕೆಯಾಗಿರುವ ಕಾರಣ ಮತದಾನ ಪ್ರಕ್ರಿಯೆ ನಡೆಯುವುದಿಲ್ಲ. ನಾಮಪತ್ರ ಸಲ್ಲಿಕೆ ಅವಧಿ ಮುಗಿಯುತ್ತಿದ್ದಂತೆಯೇ ಸರ್ಕಾರಿ ನೌಕರರು ನಗರದ ಅಶೋಕ ವೃತ್ತದಲ್ಲಿ ಸಂಜೆ ಸಂಭ್ರಮಾಚರಣೆ, ಹಾಗೂ ಪರಸ್ಪರ ಶುಭಾಶಯ ವಿನಿಯಮ ಮಾಡಿಕೊಳ್ಳುತ್ತಿರುವುದು ಕಂಡುಬಂದಿತು.
ನಾಗರಾಜ ಜುಮ್ಮನ್ನವರ 2013ರಲ್ಲಿ ಮೊದಲ ಬಾರಿಗೆ ಅಧ್ಯಕ್ಷರಾಗಿ ಮೊದಲ ಭಾರಿಗೆ ಆಯ್ಕೆಯಾಗಿದ್ದರು. ಈಗಿನ ಅವಧಿ ಐದು ವರ್ಷಗಳದ್ದಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಹಿಂದಿನ ಎರಡೂ ಬಾರಿ ಮತದಾನ ಎದುರಿಸಿದ್ದ ಜುಮ್ಮನ್ನವರ ಈ ಬಾರಿ ಮೂರನೇ ಅವಧಿಗೆ ಅವಿರೋಧವಾಗಿ ಅಧ್ಯಕ್ಷರಾಗಿ ಹ್ಯಾಟ್ರಿಕ್ ಸಾಧನೆ ಮಾಡುವ ಮೂಲಕ ಜಿಲ್ಲೆಯಲ್ಲಿ ನೌಕರರ ಸಂಘದ ಮೇಲೆ ಮತ್ತೇ ತಮ್ಮ ಬೀಗಿಹಿಡಿತವನ್ನು ಸಾಧಿಸಿದ್ದಾರೆ.
ಜಲಸಂಪನ್ಮೂಲ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಜಯತೀರ್ಥ ದೇಸಾಯಿ ಅವರು ಜಿಲ್ಲಾ ಖಜಾಂಚಿಯಾಗಿ ಹಾಗೂ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಮಹಮ್ಮದ್ ಆಸೀಫ್ ಅಲಿ ಅವರು ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು, ಅಧಿಕೃತ ಘೋಷಣೆಯನ್ನು ಚುನಾವಣೆಯ ಪ್ರಕ್ರಿಯೆ ಮುಗಿದ ಮೇಲೆ ಮಾಡಲಾಗುತ್ತದೆ.
ಈಗಾಗಲೇ ವಿವಿಧ ಇಲಾಖೆಗಳಿಂದ 66 ಜನ ನಿರ್ದೇಶಕರನ್ನು ಆಯ್ಕೆ ಮಾಡಲು ಪ್ರಕ್ರಿಯೆ ಮುಗಿದಿದ್ದು ಇದರಲ್ಲಿ 44 ನೌಕರರು ಅವಿರೋಧವಾಗಿ ಆಯ್ಕೆಯಾದರೆ, 21 ಜನ ಸದಸ್ಯರಿಗಾಗಿ ಮತದಾನದ ಮೂಲಕ ಆಯ್ಕೆ ನಡೆದಿತ್ತು. ಎಪಿಎಂಸಿ ವಲಯದಿಂದ ತ್ರಿಕ ಕಾರಣದಿಂದ ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ನಿರ್ದೇಶಕರಾಗಿ ಆಯ್ಕೆಯಾದ ಒಟ್ಟು 65 ಜನ ನೌಕರರು ಹಾಗೂ ಜಿಲ್ಲೆಯ ಎಲ್ಲ ತಾಲ್ಲೂಕುಗಳ ನೂತನ ಅಧ್ಯಕ್ಷರುಗಳು ಜಿಲ್ಲಾಧ್ಯಕ್ಷ, ಜಿಲ್ಲಾ ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಆಯ್ಕೆಗೆ ಮತದಾನ ಮಾಡಬೇಕಿತ್ತು. ಆದರೆ ಈಗ ತಲಾ ಒಂದು ನಾಮಪತ್ರವಷ್ಟೇ ಸಲ್ಲಿಕೆಯಾಗಿವೆ ಎಂದು ಸಂಘದ ಜಿಲ್ಲಾ ಚುನಾವಣಾಧಿಕಾರಿ ಗೋಪಾಲರಾವ್ ಮಾನ್ವಿ ತಿಳಿಸಿದ್ದು, ಮೂರು ಸ್ಥಾನಗಳಿಗೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದ್ದು, ಅವುಗಳ ಪರಿಷ್ಕರಣೆ ಗುರುವಾರ ನಡೆಯಲಿದೆ. ಉಮೇದುವಾರಿಕೆ ವಾಪಸ್ ಪಡೆದುಕೊಳ್ಳಲು ನ. 29ರ ತನಕ ಕೊನೆಯ ದಿನವಾಗಿದೆ. ಬಳಿಕ ಅಧಿಕೃತವಾಗಿ ಫಲಿತಾಂಶ ತಿಳಿಸಲಾಗುತ್ತದೆ.
ಜಿಲ್ಲೆಯ ಸರ್ಕಾರಿ ನೌಕರರು ನನ್ನ ಮೇಲೆ ಭರವಸೆಯಿಟ್ಟು, ಸಂಘದ ಹಾಗೂ ನೌಕರರ ಹಿತದೃಷ್ಠಿಯಿಂದ ಸತತ ಮೂರನೇ ಬಾರಿಗೆ ಅಧ್ಯಕ್ಷರಗಿ ಆಯ್ಕೆ ಮಾಡುವ ಮೂಲಕ ಸೇವೆಯನ್ನು ಮಾಡಲು ಅವಕಾಶ ಕೊಟ್ಟಿದ್ದು, ಇನ್ನಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ, ಎಲ್ಲಾ ನೌಕರರ ಆಶೆಯದಂತೆ ರಾಜ್ಯದಲ್ಲಿ ಮಾದರಿಯಾಗಿ, ಅವರ ಬೇಡಿಕೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ಕೆಲಸ ಮಾಡುವೆ. ನಾಗರಾಜ ಆರ್. ಜುಮ್ಮನ್ನವರ ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ಜಿಲ್ಲಾಧ್ಯಕ್ಷರು