ಡಿ. ಡಿ. ನ್ಯೂಸ್. ಗದಗ
ಮಕ್ಕಳಿಗಾಗಿ ಪದ್ಯ ಬರೆಯುವುದಿರಲಿ… ಗದ್ಯ ಬರೆಯುವುದಿರಲಿ… ನಾವು ಹಿರಿಯರಾದ್ದರಿಂದ ಬಾಲ್ಯದ ಸಂದರ್ಭಕ್ಕೆ ಹಿಮ್ಮರಳಿ ನೋಡಬೇಕಾಗುತ್ತದೆ. ಬಾಲ್ಯದ ಅನುಭವಗಳನ್ನು ಆಹ್ವಾನಿಸಿಕೊಂಡು ಸಂಭ್ರಮಿಸುವ, ಅಲ್ಲಿಯ ಕಷ್ಟ ಸುಖಗಳನ್ನೆಲ್ಲ ಗ್ರಹಿಸುವ ಭಾವ ನಮ್ಮಲ್ಲಿ ಇರಬೇಕಾಗುತ್ತದೆ. ಅಂತಹ ಭಾವ ನಮ್ಮಲ್ಲಿ ಉಳಿದು ಬೆಳೆದಿದ್ದರೆ ಮಕ್ಕಳಿಗಾಗಿ ಬರೆಯುವುದು ಸುಲಭ. ಯಾವುದೇ ಸಾಹಿತ್ಯಿಕ ಅಭಿವ್ಯಕ್ತಿ ಇರಲಿ ಅದು ನಮ್ಮ ಧೋರಣೆಯನ್ನು, ಆಸಕ್ತಿಯನ್ನು, ಪ್ರೀತಿ ಹಾಗೂ ಅರಿವಿನ ವಿಸ್ತಾರವನ್ನು ಸೂಚಿಸುತ್ತಿರುತ್ತದೆ. ಅಂದರೆ ಅಭಿವ್ಯಕ್ತಿ ನಮ್ಮ ಆಸಕ್ತಿಯ ತುಡಿತವಾಗಿ ಪ್ರಕಟಗೊಳ್ಳುತ್ತಿರುತ್ತದೆ. ಏನೋ ಬರೆಯಬೇಕೆಂದು ಬರೆಯುವುದಕ್ಕೆ ಇಳಿಯದೆ ನಮ್ಮ ಅಂತರಾಳದ ತುಡಿತವಾಗಿ ವ್ಯಕ್ತವಾದಾಗ ಹೆಚ್ಚು ಕಲಾತ್ಮಕವಾಗಿ ಓದುಗರನ್ನು ಆಪ್ತವಾಗಿ ಸೆಳೆಯುತ್ತದೆ. ಇಂತಹ ಕಲಾತ್ಮಕತೆಯ ಯಶಸ್ಸು ಒಂದೇ ಬಾರಿಗೆ ನಮಗೆ ಸಿದ್ಧಿಸುತ್ತದೆ ಎಂದು ನಾನು ಹೇಳಲಾರೆ. ಆದರೆ ಯಾವುದೇ ಅಭಿವ್ಯಕ್ತಿಯ ಮಾಧ್ಯಮದಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಳ್ಳುವುದೆಂದರೆ… ಅದರ ಯಶಸ್ಸಿಗೆ ಏನೆಲ್ಲಾ ಅಗತ್ಯವಿದೆಯೋ ಆ ವಿಸ್ತಾರಕ್ಕೆ ತೆರೆದುಕೊಳ್ಳುವುದೇ ಆಗಿರುತ್ತದೆ.
ಮಕ್ಕಳಿಗಾಗಿ ಬರೆಯುವಾಗ ಆಗಲೇ ಹೇಳಿದ ಹಾಗೆ “ನಾವು ಬಾಲ್ಯಕ್ಕೆ ಮರಳಿ ಅಲ್ಲಿನ ಕಿಟಕಿ ತೆರೆದು ಅದರ ಬೆಳಕಿನಲ್ಲಿ ನೋಡಬೇಕು” ಎನ್ನುವ ಡಾ.ಆನಂದ ಪಾಟೀಲರ ಮಾತು ಮತ್ತೆ ನೆನಪಾಗುತ್ತದೆ. ಮಕ್ಕಳ ನಗು, ಅವರ ಪ್ರೀತಿ, ಸಿಟ್ಟು, ಮುಗ್ಧತೆ, ಚೈತನ್ಯ ಶೀಲತೆಗಳೆಲ್ಲ ನಮಗೆ ಅರ್ಥವಾಗಬೇಕು. ಅಂತಹ ಅರಿವಿನೊಂದಿಗೆ ಈಗಾಗಲೇ ಬರೆದಿರುವ ಅನೇಕ ಹಿರಿಯ ಲೇಖಕರ ಪುಸ್ತಕಗಳ ಓದೂ ಬಹು ಮುಖ್ಯ. ಇವನ್ನೆಲ್ಲಾ ಹಂಬಲಿಸಿ ಧ್ಯಾನಿಸುತ್ತಾ ಹೊಸ ಬೆಳಕನ್ನು ಪಡೆಯಬೇಕು ಎಂಬುದು ನನ್ನ ಅನಿಸಿಕೆ.
ಕನ್ನಡ ಮಕ್ಕಳ ಸಾಹಿತ್ಯದಲ್ಲಿ ಪದ್ಯಗಳೇ ಹೆಚ್ಚು ತುಂಬಿರುವುದನ್ನು ನಾವು ಕಾಣುತ್ತೇವೆ. ಪದ್ಯವಾಗಲಿ ಗದ್ಯವಾಗಲಿ ಅದು ಆಕರ್ಷಕ ರೀತಿಯಲ್ಲಿ ಬಂದಾಗ ಓದುಗರಿಗೆ ಸಂಭ್ರಮವೇ. ಇತ್ತೀಚೆಗೆ ಅನೇಕ ಪ್ರತಿಭಾವಂತರು ಮಕ್ಕಳಿಗಾಗಿ ಹೊಸ ಉಣಿಸನ್ನು ನೀಡುತ್ತಿರುವುದೆಲ್ಲ ನಮ್ಮ ಸಂತಸ ಹೆಚ್ಚಿಸಿದೆ. ಇದನ್ನೆಲ್ಲ ಯಾಕೆ ಹೇಳಿದೆನೆಂದರೆ ಭುವನೇಶ್ವರಿ ಅಂಗಡಿಯವರ ಮಕ್ಕಳ ಕವನ ಸಂಕಲನವನ್ನು ನಾನಿಲ್ಲಿ ಮೊದಲ ಓದಿನೊಂದಿಗೆ ಆಪ್ತವಾಗಿ ಒಂದಿಷ್ಟು ಬರೆಯಲು ಎತ್ತಿಕೊಂಡಿದ್ದೇನೆ. ಭುವನೇಶ್ವರಿ ಅಂಗಡಿ ಅವರು ಪ್ರೌಢಶಾಲಾ ಶಿಕ್ಷಕಿಯಾಗಿದ್ದಾರೆ. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಸಾಹಿತ್ಯದಲ್ಲಿ ಆಸಕ್ತಿ. ಈಗಾಗಲೇ ಐದು ಕೃತಿಗಳನ್ನು ಪ್ರಕಟಿಸಿ ಓದುಗರಿಗೆ ಪರಿಚಿತರಾಗಿರುವ ಇವರು ಅಂಕಣಕಾರರೂ ಹೌದು.
ಮಕ್ಕಳಿಗೆ ಆಟ ಅತ್ಯಂತ ಪ್ರೀತಿ ಅನ್ನೋದು ನಮಗೆಲ್ಲ ಗೊತ್ತು. ಆಟವೆಂದರೆ ಮಕ್ಕಳು ಕೇಳುವ ಸ್ವಾತಂತ್ರ್ಯಕ್ಕೆ, ಸ್ನೇಹದ ಭಾವಕ್ಕೆ, ಸೋಲು ಗೆಲುವಿನ ಖುಷಿಗೆ, ಉತ್ಸಾಹದ ಚೈತನ್ಯಕ್ಕೆಲ್ಲ ಉಣಿಸನ್ನು ನೀಡುವ ಕ್ರಿಯೆ. ಇದೆಲ್ಲ ಮಕ್ಕಳ ಮೂಲ ಸ್ವಭಾವವೂ ಹೌದು. ಹಾಗಾಗಿಯೇ ಮಕ್ಕಳಿಗೆ ಬರೆಯುವಾಗ ಅದರಲ್ಲಿ ಆಟದ ಸಂಭ್ರಮ ಇದ್ದೇ ಇರುತ್ತದೆ. ಇಲ್ಲಿ ಭುವನೇಶ್ವರಿ ಅವರು ‘ಒಲ್ಯಪ್ಪೋ ನಾ ಒಲ್ಯ’ ಪದ್ಯದಲ್ಲಿ ಮಗು ಏನೆಲ್ಲಾ ಬೇಡ ಎಂದು ತಿರಸ್ಕರಿಸುತ್ತದೆ ಎಂಬುದನ್ನು ಹೇಳುತ್ತಾ ಹೋಗುತ್ತಾರೆ. ಕಣ್ಣು ನೋವು ಬರುವಷ್ಟು ಓದು, ಭಾರವಾದ ಪಾಟಿ ಚೀಲ, ಕೈ ನೋಯುವಷ್ಟು ಬರಹ ಎಲ್ಲಾ ನನಗೆ ಬೇಡ ಎನ್ನುತ್ತದೆ. ನಿಜ, ಮಕ್ಕಳ ಬೇಕು ಬೇಡಗಳೇನು? ಅವರಿಗೆ ಆಪ್ತವಾಗುವ ಪುಸ್ತಕಗಳು ಯಾವವು? ಮಗು ಹೇಗೆ ಖುಷಿಖುಷಿಯಾಗಿ ಬರೆಯಲು ಸಾಧ್ಯ? ಎಂಬುದನ್ನೆಲ್ಲ ಆಲೋಚಿಸದೇ ಕೇವಲ ಪರೀಕ್ಷಾ ಸಿದ್ಧತೆಗಳಿಗಾಗಿ ಓದಿದ್ದನ್ನೇ ಓದಿಸುವುದು, ಬರೆದಿದ್ದನ್ನೇ ಬರೆಯಲು ಹೇಳುವುದು, ಭಾರವಾದ ಸ್ಕೂಲ್ ಬ್ಯಾಗನ್ನು ಬೆನ್ನಿಗೆ ಹೇರಿಸುವುದೆಲ್ಲ ಮಾಡುತ್ತಿರುತ್ತೇವೆ. ಪದ್ಯದಲ್ಲಿ ಮಗುವಿನ ಅಂತರಂಗದ ಭಾವ ವ್ಯಕ್ತವಾಗಿದೆ. ಹಾಗಾಗಿಯೇ ಮಗು ಪದ್ಯದ ಕೊನೆಯಲ್ಲಿ
‘ಕೈಯಿ ಮೈಯಿ ನೋವಾದ್ರು
ಆಟ ಆಡಾಕ ಬರ್ತೀನಿ
ಆಡಿ ಹಾಡಿ ನೆಗೆದು ಕುಣಿದು
ನಗು ನಗುತ ಇರ್ತೀನಿ’
ಎಂದು ಹೇಳಿರುವುದು ಅವರಿಗೆ ನೀಡುವ ಬೋಧನೆ ಹೇಗಿರಬೇಕೆಂಬುದನ್ನೂ ಸೂಚ್ಯವಾಗಿ ಹೇಳುತ್ತದೆ.
ಮಕ್ಕಳು ಎಲ್ಲರನ್ನೂ ಪ್ರೀತಿಸುತ್ತಾ ಹಿರಿಯರನ್ನೂ ಮಕ್ಕಳಾಗಿಸುತ್ತಾ ಖುಷಿ ಹಂಚುವುದನ್ನು ನೋಡುತ್ತೇವೆ. ಹಾಗಾಗಿಯೇ ಅಜ್ಜ-ಅಜ್ಜಿ, ಮಾವ-ಅತ್ತೆ ಮುಂತಾದ ಬಂಧುಗಳೆಲ್ಲರೂ ಅವರ ಪ್ರೀತಿಯ ವರ್ತುಳದಲ್ಲಿ ಸೇರಿಯೇ ಇರುತ್ತಾರೆ. ಯಾರು ಬಂದರೆ ಏನು ತರುವರು… ಹೇಗೆಲ್ಲಾ ಪ್ರೀತಿ ಹಂಚುವರು ಎಂಬುದೆಲ್ಲ ಅವರಿಗೆ ಗೊತ್ತು.
‘ಮಾವ ಬಂದಾನ
ನಮ್ಮ ಮಾವ ಬಂದಾನ
ಡುಡುಡುಡು ಗಾಡಿ
ಹತಗೊಂಡು ಮಾವ ಬಂದಾನ’
ಎಂದು ಪ್ರಾರಂಭವಾಗುವ ‘ಮಾವ ಬಂದಾನ’ ಪದ್ಯ ಪೀಪಿ ತಂದಾನ, ಗಾಡಿ ತಂದಾನ, ಬಳಿ ತಂದಾನ, ಮಿಠಾಯಿ ತಂದಾನ ಎಂಬುದನ್ನೆಲ್ಲ ಬಹು ಆಪ್ತವಾಗಿ ಹೇಳುತ್ತಾ ಹೋಗುತ್ತದೆ. ಮಾವ ಏನೇ ತಂದಿದ್ದರೂ ಅದನ್ನೆಲ್ಲ ಮಗುವಿನ ಮೇಲಿನ ಪ್ರೀತಿಯಿಂದ ತಂದಿದ್ದು. ಹಾಗಾಗಿಯೇ ಭುವನೇಶ್ವರಿಯವರು ಪದ್ಯದ ಕೊನೆಯಲ್ಲಿ
‘ಮಾವ ಬಂದಾನ
ಮಾವ ಬಂದಾನ
ಏನು ಚಂದಾನ
ಪ್ರೀತಿ ತಂದಾನ’
ಎಂದು ಹೇಳಿರುವುದು ಒಟ್ಟಾರೆ ಖುಷಿಯನ್ನು ಹೆಚ್ಚಿಸುತ್ತದೆ.
ಹೊಳೆದಂಡೆಯಲ್ಲಿ ಮಗು ಕಟ್ಟುವ ಗುಬ್ಬಿಗೂಡು ‘ನೋಡಲು ಸಣ್ಣ ಗೂಡು/ ದೊಡ್ಡ ಖುಷಿಯ ಗೂಡು’ ಎನ್ನುವ ಸಾಲುಗಳೆಲ್ಲ ಮಕ್ಕಳ ಅಂತರಂಗದ ಮಾತಾಗಿ ಗಮನ ಸೆಳೆಯುತ್ತದೆ.
ಅವ್ವನಿಗೆ ಒಲೆ ಹಚ್ಚಲು ಕಟ್ಟಿಗೆ ಬೇಕು, ಅಣ್ಣನಿಗೆ ಬರೆಯಲು ಪೆನ್ನು ಬೇಕು, ತಮ್ಮನಿಗೆ ಆಡಲು ನಾಯಿಮರಿ, ಅಜ್ಜನಿಗೆ ಬಡಿಯಲು ಡೋಲು, ಅಜ್ಜಿಗೆ ಊರಲು ಕೋಲು ಬೇಕು ಎಂದೆಲ್ಲ ಮಗುವಿನ ಕಣ್ಣೋಟದಲ್ಲಿ ಹೇಳುವ ‘ಏನೇನು ಬೇಕು’ ಪದ್ಯದ ಕೊನೆಯಲ್ಲಿ…
‘ನನಗೆ ಬೇಕು
ಎಲ್ಲರ ಪ್ರೀತಿ
ಇಲ್ಲದೆ ಹೋದರೆ
ತುಂಬಾ ಪಜೀತಿ’
ಎನ್ನುವ ತಿರುವನ್ನು ನೀಡಿ ಪದ್ಯದ ಆಶಯವನ್ನು ವಿಸ್ತರಿಸಿರುವುದು ಇಷ್ಟವಾಗುತ್ತದೆ.
ಪರಿಸರ ಕಾಳಜಿ ಬೆಳೆಸುವ “ಗಿಡ ನೆಡಿ” ಪದ್ಯದ ಕೆಳಗಿನ ಸಾಲುಗಳನ್ನು ನೋಡಿ.
‘ಉಸಿರಿಗಾಗಿ ನೆಡು
ಗಿಡದ ಒಂದು ಕುಡಿ
ನೆಟ್ಟಿದ್ದು ನೆಟ್ಟಗೆ
ಬೆಳೆಯಲು ಬಿಡಿ’
‘ಗಾಳಿ ನೀರು ಹೂವು
ಕಾಯಿ ಹಣ್ಣು ಪಡಿ
ಕೇಳದೆ ಎಲ್ಲವ ಕೊಡುವ
ಕಾಡು ಒಂದು ಗುಡಿ’
ನಿಜ. ಕಾಡು ಒಂದು ಗುಡಿ ಎನ್ನುವ ಪವಿತ್ರ ಭಾವ ಹಾಗೂ ಹೃದಯದ ಪ್ರೀತಿ ಎಲ್ಲರಲ್ಲಿ ಬೆಳೆಯಬೇಕು.
ಭುವನೇಶ್ವರಿ ಅಂಗಡಿಯವರು ಈಗಾಗಲೇ ಒಂದು ಮಕ್ಕಳ ಕವನ ಸಂಕಲನ ಪ್ರಕಟಿಸಿದವರು. ಈ ಸಂಕಲನದಲ್ಲಿ ಮತ್ತಷ್ಟು ಹೊಸ ಪ್ರಯತ್ನ ಮಾಡಿದ್ದಾರೆ ಎಂದು ನನಗೆ ಅನಿಸುತ್ತದೆ. ನಾನು ಮೊದಲೇ ಹೇಳಿದ ಹಾಗೆ ಯಾವುದೇ ಅಭಿವ್ಯಕ್ತಿಗೆ ಅದರ ಕುರಿತಾಗಿ ಅದಮ್ಯ ಪ್ರೀತಿ ಹಾಗೂ ಅಧ್ಯಯನ ಎಲ್ಲ ಬೇಕು. ಅದನ್ನು ಒಂದು ಧ್ಯಾನವಾಗಿ ಸ್ವೀಕರಿಸಿ ಮುಂದುವರಿಯುತ್ತಿದ್ದರೆ ಹೆಚ್ಚಿನ ಯಶಸ್ಸು ಸಿಗಲು ಸಾಧ್ಯ. ಅಂತಹ ಪ್ರಯತ್ನದಲ್ಲಿ ಭುವನೇಶ್ವರಿಯವರು ತೊಡಗಿರುತ್ತಾರೆ ಎಂದು ನನಗೆ ಅನಿಸುತ್ತದೆ. ತಮ್ಮ ಬರಹದ ಹೊಸತರಲ್ಲೇ ಮಕ್ಕಳ ಪ್ರೀತಿಗೆ ತೆರೆದುಕೊಳ್ಳುವಂಥಹ ಸಾಲುಗಳುಳ್ಳ ಪದ್ಯವನ್ನು ಬರೆದಿರುವುದು ನನಗೆ ಖುಷಿ ನೀಡಿದೆ.
‘ಚಟಪಟ ಚಟಪಟ
ಮಳೆ ಹನಿ
ಪಟಪಟ ಪಟಪಟ
ಉದುರಿತು
ಕಿಚಿಪಿಚಿ ಕಿಚಿಪಿಚಿ
ಕೆಸರಲಿ
ತಕಥೈ ತಕಥೈ
ಕುಣಿದೆವು’
ಎನ್ನುವ ಸಾಲನ್ನು ಓದುತ್ತಾ ಮಕ್ಕಳಿಗಷ್ಟೇ ಅಲ್ಲ ನಮಗೂ ಖುಷಿಯಾಗುತ್ತದೆ. ಭುವನೇಶ್ವರಿ ಅವರ ಈ ಪುಸ್ತಕ ಕನ್ನಡ ಮಕ್ಕಳ ಕೈ ಸೇರಿ ಅವರು ಇಲ್ಲಿಯ ಪದ್ಯಗಳನ್ನು ಓದುತ್ತಾ ಆನಂದಗೊಳ್ಳಲಿ ಎಂದು ಆಶಿಸಿ ಮುಂದಿನ ದಿನಗಳಲ್ಲಿ ಲೇಖಕಿಯ ಮತ್ತಷ್ಟು ಕಲಾತ್ಮಕ ಬರಹಗಳು ಬರಲಿ ಎಂದು ಹಾರೈಸುತ್ತೇನೆ.
ವಂದನೆಗಳು
– ತಮ್ಮಣ್ಣ ಬೀಗಾರ