deshadoothanews

ಭಾರತ ಬೆಳಗುತ್ತಿದೆ…!!

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕೊಪ್ಪಳ :

ನಾವೀಗ ವಜ್ರ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆಯನ್ನು ಮುಗಿಸಿ 76ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದೇವೆ. ಕಳೆದ 75 ವರ್ಷಗಳಲ್ಲಿ ಭಾರತವು ಎಲ್ಲಾ ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆ ಮಾಡುತ್ತಿದೆ. ಇಡೀ ವಿಶ್ವವೇ ಇಂದು ಭಾರತದ ಕಡೆಗೆ ತಿರುಗಿ ನೋಡುವಂತಹ ರೀತಿಯಲ್ಲಿ ಅತ್ಯದ್ಭುತವಾಗಿ ಭಾರತ ಬೆಳೆಯುತ್ತಲಿದೆ.

ನಿಜಕ್ಕೂ ಇದು ನಮಗೆ ಹೆಮ್ಮೆಯ ವಿಷಯವಲ್ಲದೇ ಮತ್ತಿನ್ನೇನು..? ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ಭಾರತವು ಇಂದು ಪ್ರಕಾಶಮಾನವಾಗಿ ರಾರಾಜಿಸುತ್ತಿದೆ.


ಕೃಷಿ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಸಾರಿಗೆ, ಶಿಕ್ಷಣ, ವಾಣಿಜ್ಯ ಹಾಗೂ ಇನ್ನಿತರ ಮಹತ್ತರವಾದ ಪ್ರತಿಯೊಂದು ಕ್ಷೇತ್ರಗಳಲ್ಲಿಯೂ ನಮ್ಮ ಹೆಮ್ಮೆಯ ರಾಷ್ಟ್ರವು ಮುಂಚೂಣಿಯಲ್ಲಿದೆ ಎನ್ನುವ ಅಂಶವೇ ಮೇರಾ ಭಾರತ ಮಹಾನ್ ಎಂದು ಎದೆಯುಬ್ಬಿಸಿ ಹೇಳುವಂತಾಗಿದೆ. ನಾವುಗಳೆಲ್ಲರೂ ಇಂದು ಸುರಕ್ಷಿತ ಹಾಗೂ ಪ್ರಬುದ್ಧ ರಾಷ್ಟ್ರ ನಿರ್ಮಾಣಕ್ಕಾಗಿ ಕಂಕಣ ಬದ್ಧರಾಗಿ ನಿಲ್ಲಬೇಕಾದದ್ದು ನಮ್ಮ ಆದ್ಯ ಕರ್ತವ್ಯವಾಗಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತದ ದುಸ್ಥಿತಿಗೆ ಕಾರಣರಾದ ಬ್ರೀಟಿಷರು ಕೂಡಾ ಇಂದು ಭಾರತದ ಮುಂದೆ ಮಂಡಿಯೂರಿ ಕುಳುತುಕೊಳ್ಳುವಂತಾಗಿದೆ. ಇಂತಹ ಶ್ರೇಷ್ಠ ಅಂಶಗಳೇ ನಮ್ಮ ರಾಷ್ಟ್ರದ ಬಗ್ಗೆ ನಮಗೆ ಅಭಿಮಾನ, ಗೌರವ ಹಾಗೂ ಹೆಮ್ಮೆ ಮೂಡಲು ಕಾರಣವಾಯಿತು.


ಬ್ರೀಟಿಷರ ಕಪಿಮುಷ್ಠಿಯ ಆಡಳಿತದಿಂದ ಭಾರತ ದೇಶವು 1947 ಆಗಸ್ಟ್ 15 ರಂದು ಸ್ವತಂತ್ರವಾಯಿತು. ಅಂದಿನಿಂದ ಈ ದಿನವನ್ನು ಪ್ರತಿ ವರ್ಷ ಭಾರತದಾದ್ಯಂತ ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಈ ದಿನ ಇಡೀ ದೇಶದಲ್ಲಿಯೇ ರಾಷ್ಟ್ರೀಯ ರಜಾದಿನವನ್ನಾಗಿ ಆಚರಿಸಲಾಗುತ್ತದೆ. ದೇಶದ ಹಲವೆಡೆ ತ್ರಿವರ್ಣ ಧ್ವಜವು ಹಾರಾಡುತ್ತಿರುವದನ್ನು ನೋಡಿದಾಗ ದೇಶದ ಬಗ್ಗೆ ಅಪಾರವಾದ ಗೌರವ, ಹೆಮ್ಮೆ ಮತ್ತು ಅಭಿಮಾನಗಳು ಸಹಜವಾಗಿ ಉಂಟಾಗುತ್ತವೆ. ಧ್ವಜಾರೋಹಣದ ನಂತರ ಸಿಹಿ ಹಂಚಿ ನಮ್ಮ ರಾಷ್ಟ್ರದ ನೆಚ್ಚಿನ ಹೋರಾಟಗಾರರ ಸ್ಮರಣೆ ಹಾಗೂ ಅವರ ತ್ಯಾಗ ಬಲಿದಾನಗಳನ್ನು ಪ್ರಶಂಸೆ ಮಾಡುತ್ತಾ ಸಾಗುತ್ತಿರುವುದು ಸಾರ್ಥಕತೆಯ ದ್ಯೋತಕವಾಗಿ ಗೋಚರವಾಗುತ್ತದೆ.

ಈ ಒಂದು ಸಂಭ್ರಮಾಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯತ್ತದೆ. ಈ ಸಮಾರಂಭದಲ್ಲಿ ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ ಭಾರತದ ರಾಷ್ಟ್ರಗೀತೆಯಾದ “ಜನ ಗಣ ಮನ”ವನ್ನು ಹಾಡಿ ರಾಷ್ಟ್ರಕ್ಕೆ ಗೌರವವನ್ನು ಸಮರ್ಪಿಸುತ್ತಾರೆ. ನಂತರ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಒಂದು ಭಾಷಣದಲ್ಲಿ ದೇಶದ ಸಾಧನೆ, ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡುತ್ತಾರೆ. ಕೆಲವು ಪ್ರಗತಿ ಯೋಜನೆಗಳನ್ನು ಪ್ರಕಟಿಸಲಾಗುತ್ತದೆ. ಈ ದಿನದಂದು ದೇಶದ ಸ್ವಾತ್ರಂತ್ರ್ಯಕ್ಕೆ ಮಡಿದ ವೀರ ಯೋಧರನ್ನು ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಅತ್ಯಂತ ಗೌರವಪೂರ್ವಕವಾಗಿ ಸ್ಮರಿಸಲಾಗುತ್ತದೆ.

ಇಂತಹ ಶ್ರೇಷ್ಠವಾದ ರಾಷ್ಟ್ರದ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯನ್ನು ಹೊಂದಿರುವ ನಮ್ಮ ದೇಶದ ಬಗ್ಗೆ ನಮಗೆಲ್ಲಾ ಅತ್ಯುತ್ಸಾಹದ, ಅತೀವವಾದ ಸಂತಸವನ್ನುಂಟು ಮಾಡುವ ಈ ಸ್ವಾತಂತ್ರ್ಯ ದಿನಾಚರಣೆಯು ಕೇವಲ ಒಂದು ದಿನದ ಮಟ್ಟಿಗೆ ಆಚರಿಸುವ ಆಚರಣೆಯಾಗಬಾರದು. ಈ ಒಂದು ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟು ಪ್ರಾಣತ್ಯಾಗ ಮಾಡಿದ ಮಹನೀಯರ ಹಾಗೆ ನಾವು ಪ್ರಾಣವನ್ನು ಕಳೆದುಕೊಳ್ಳಲು ಆಗದಿದ್ದರೂ ಪರವಾಗಿಲ್ಲ ಕನಿಷ್ಠ ಪಕ್ಷ ದೇಶದ ಬಗ್ಗೆ ಹಿತ ಚಿಂತನೆ ಮಾಡಿ. ಗೌರವ, ಅಭಿಮಾನಗಳನ್ನು ಬೆಳೆಸಿಕೊಳ್ಳೋಣ. ದೇಶಕ್ಕಾಗಿ ರಕ್ತ ಸುರಿಸದಿದ್ದರೂ ಚಿಂತೆಯಿಲ್ಲ ಬೆವರು ಸುರಿಸಲು ಸನ್ನದ್ಧರಾಗೋಣ. ಜಾತಿ,ಮತ,ಪಂಥಗಳ ಬೇಧ ಭಾವವನ್ನು ಕಿತ್ತೆಸೆದು ಭಾರತೀಯರೆಲ್ಲರೂ ನಾವೆಲ್ಲಾ ಒಂದೇ ಎನ್ನುವ ಅಂಶಗಳನ್ನು ರಕ್ತಗತವಾಗಿಸಿಕೊಳ್ಳೋಣ. ನಮ್ಮ ಸಂವಿಧಾನದ ಬಗ್ಗೆ ಗೌರವ ಭಾವ ಹೊಂದಿರುವ ಅತ್ಯುತ್ತಮ ನಾಗರೀಕರಾಗೋಣ. ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸಿ ಪ್ರಬುದ್ಧ ಪ್ರಜೆಗಳಾಗೋಣ. ಸಿಕ್ಕಿರುವ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಅದನ್ನು ಮತ್ತಷ್ಟು ಅರ್ಥಪೂರ್ಣವಾಗಿ ಬೆಳೆಸಿಕೊಂಡು ಮುನ್ನಡೆಯೋಣ. ದೇಶ ನಮಗೇನು ಕೊಟ್ಟಿದೆ ಎನ್ನುವ ಬದಲು ದೇಶಕ್ಕಾಗಿ ನಾವೇನು ಮಾಡಿದ್ದೇವೆ ಎಂದು ಒಮ್ಮೆಯಾದರೂ ವಿಚಾರಿಸಿದ್ದಾದರೆ ನಮ್ಮ ಭಾರತ ಇನ್ನಷ್ಟು, ಮತ್ತಷ್ಟು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಇಡೀ ವಿಶ್ವದಲ್ಲೇ ಪ್ರಕಾಶಮಾನವಾಗಿ ಬೆಳಗುವುದರಲ್ಲಿ ಸಂದೇಹವೇ ಇಲ್ಲ. ಈ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ದೇಶದ ಪ್ರಗತಿಗಾಗಿ ಹೆಚ್ಚಿಗೆ ಶ್ರಮಿಸಿದ್ದಾರೆ ಭಾರತ ಖಂಡಿತವಾಗಿಯೂ ಬೆಳಗುತ್ತದೆ,‌ ಅಷ್ಟೇ ಪ್ರಕಾಶಮಾನವಾಗಿ ರಾರಾಜಿಸುತ್ತದೆ. ದೇಶದ ತ್ರಿವರ್ಣ ಧ್ವಜವನ್ನು ವಿಶ್ವದೆಲ್ಲೆಡೆಯೂ ಹಾರಾಡುವಂತಹ ಅಮೋಘ ಸಾಧನೆ ಮಾಡಿ ದೇಶದ ಕೀರ್ತಿ ಪತಾಕೆಯನ್ನು ಗಗನದೆತ್ತರಕ್ಕೆ ಹಾರಿಸೋಣ ಬನ್ನಿ ಎಲ್ಲರೂ ಒಂದಾಗೋಣ…!!!

 

-ಶ್ರೀನಿವಾಸ.ಎನ್.ದೇಸಾಯಿ ತಲ್ಲೂರ,ಶಿಕ್ಷಕರು.

Leave A Reply

Your email address will not be published.