deshadoothanews

ಕೃಷಿ, ತೋಟಗಾರಿಕಾ ಇಲಾಖಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳ ಸೂಚನೆ

ಡಿ ಡಿ ನ್ಯೂಸ್. ಕೊಪ್ಪಳ

0
ಡಿ ಡಿ ನ್ಯೂಸ್. ಕೊಪ್ಪಳ :
ನಿರಂತರ ಮಳೆಯ ಕಾರಣ ತೇವಾಂಶದ ಪ್ರಮಾಣದಲ್ಲಿ ಏರು ಪೇರಾಗಲಿದ್ದು ಬಿತ್ತನೆ ಮಾಡಿದ ವಿವಿಧ ಬೆಳೆಗಳ ಪಾಲನೆ-ಪೋಷಣೆಗೆ ಸಂಬಂಧಿಸಿದಂತೆ ಸಮರ್ಪಕ ಬೆಳೆ ನಿರ್ವಹಣೆಗೆ ರೈತರಿಗೆ ಸಲಹೆ ಸೂಚನೆ ಕೊಡಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಕೆಸ್ವಾನ್ ವಿಡಿಯೋ ಹಾಲನಲ್ಲಿ ಜುಲೈ 21ರಂದು ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು.
2023-24ನೇ ಸಾಲಿನಲ್ಲಿ ರೈತರ ಬೆಳೆ ಸಮೀಕ್ಷೆ ಆ್ಯಪ್ ಬಳಸಿ ತಾವೇ ಸ್ವತಃ ಸಮೀಕ್ಷೆ ಮಾಡಲು ರೈತರಿಗೆ ವ್ಯಾಪಕ ಮಾಹಿತಿ ನೀಡಬೇಕು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕಂತಿನ ಸಹಾಯಧನ ಸೇರಿದಂತೆ ಯಾವುದೇ ಸೌಕರ್ಯ ಪಡೆದುಕೊಳ್ಳಲು ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರೈತರು ಇ-ಕೆವೈಸಿ ಮಾಡಿಸಲು ಕ್ರಮ ವಹಿಸಬೇಕು. ಇದಕ್ಕಾಗಿ ಕೃಷಿ, ಕಂದಾಯ, ಗ್ರಾಮ ಆಡಳಿತ ಅಧಿಕಾರಿಗಳು ಒಗ್ಗೂಡಿ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಇದುವರೆಗೆ ಶೇ.1,21,386 ರೈತರು ಇ-ಕೆವೈಸಿ ಮಾಡಿಸಿದ್ದು, ಬಾಕಿ ಇರುವ 37,231 ರೈತರು ಸಹ ಇ-ಕೆವೈಸಿ ಮಾಡಿಸಿಕೊಳ್ಳಲು ಹಾಗೂ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆಯಡಿ 2023-24ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆವಿಮೆ ಅಧಿಸೂಚನೆ ಹೊರಡಿಸಿದಂತೆ ಬೆಳೆ ವಿಮೆ ನೋಂದಾಯಿಸಲು ಜುಲೈ 31ರವರೆಗೆ ಅವಕಾಶವಿರುತ್ತದೆ ಎಂಬುದರ ಬಗ್ಗೆ ರೈತರಿಗೆ ತಿಳಿಸಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
2023-24ನೇ ಸಾಲಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಕೊಪ್ಪಳ ಜಿಲ್ಲೆಯ ರೈತರು ಪಪ್ಪಾಯ ಮಾವು ದ್ರಾಕ್ಷಿ ದಾಳಿಂಬೆ ಮತ್ತು ಹಸಿ ಮೆಣಸಿನಕಾಯಿ ಬೆಳೆಗಳನ್ನು ವಿಮೆಗೆ ಒಳಪಡಿಸುವ ಬಗ್ಗೆ ರೈತರ ಪಾಲಿನ ವಿಮಾ ವಂತಿಗೆಯನ್ನು ಪಾವತಿಸಲು ಜುಲೈ 31ರವರೆಗೆ ಪಾವತಿಸಲು ಅವಕಾಶವಿದೆ. ಯೋಜನೆಯ ರೂಪರೇಷಗಳು ಮತ್ತು ವಿವರಗಳ ಬಗ್ಗೆ ರೈತರಿಗೆ ವ್ಯಾಪಕ ಮಾಹಿತಿ ನೀಡಲಾಗುತ್ತಿದೆ ಎಂದು ಇದೆ ವೇಳೆ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯ ಕೊಪ್ಪಳ, ಕುಷ್ಟಗಿ, ಯಲಬುರ್ಗಾ, ಕುಕನೂರ, ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕುಗಳು ಸೇರಿ ಒಟ್ಟು 3,08,000 ಹೆಕ್ಟೇರ್ ಪ್ರದೇಶದಲ್ಲಿನ ಬಿತ್ತನೆ ಗುರಿಯ ಪೈಕಿ ಇದುವರೆಗೆ 1,96,418 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನ ಸಂದರ್ಭದಲ್ಲಿ ಭತ್ತ, ಶಕ್ತಿಮಾನ್ ಜೋಳ, ಮೆಕ್ಕೆಜೋಳ, ಸಜ್ಜೆ, ನವಣೆ ಸೇರಿದಂತೆ 1,44,950 ಹೆಕ್ಟೇರ್ ಪ್ರದೇಶದಲ್ಲಿ ಏಕದಳ ದಾನ್ಯಗಳನ್ನು ಬೆಳೆಯಲಾಗಿದೆ. ತೊಗರಿ, ಹುರುಳಿ, ಹೆಸರು, ಅಲಸಂದಿ, ಅವರೆ, ಮಡಿಕೆ ಸೇರಿ 27,101 ಹೆಕ್ಟೇರ್ ಪ್ರದೇಶದಲ್ಲಿ ದ್ವಿದಳ ದಾನ್ಯಗಳು. ಶೆಂಗಾ, ಸೂರ್ಯಕಾಂತಿ, ಎಳ್ಳು, ಗುರೆಳ್ಳು, ಔಡಲು ಸೇರಿ 10,431 ಹೆಕ್ಟೇರ್ ಪ್ರದೇಶದಲ್ಲಿ ಎಣ್ಣೆಕಾಳುಗಳು. ಹತ್ತಿ, ಕಬ್ಬು ಸೇರಿದಂತೆ 13,936 ಹೆಕ್ಟೇರ್ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಕೊಪ್ಪಳ, ಕುಷ್ಟಗಿ, ಯಲಬುರ್ಗಾ ಮತ್ತು ಗಂಗಾವತಿ ತಾಲೂಕುಗಳಲ್ಲಿ ಜುಲೈ 20ರವರೆಗೆ 23,438 ಮೆ.ಟನ್ ಯೂರಿಯಾ, 12,659 ಮೆ.ಟನ್ ಡಿಎಪಿ, 1482 ಮೆ.ಟನ್ ಎಂಓಪಿ, 32,776 ಮೆ.ಟನ್ ಎನ್‌ಕೆಪಿಎಸ್ ಮತ್ತು 404 ಮೆ.ಟನ್ ಎಸ್‌ಎಸ್‌ಪಿ ಸೇರಿದಂತೆ ಒಟ್ಟು 70,759 ಮೆ.ಟನ್ ರಸಗೊಬ್ಬರ ದಾಸ್ತಾನು ಇದೆ. ಅದೇ ರೀತಿ 7255.32 ಕ್ವಿಂಟಲ್ ಬಿತ್ತನೆ ಬೀಜಗಳು ಮಾರಾಟವಾಗಿದ್ದು, 2358 ಕ್ವಿಂಟಲ್ ದಾಸ್ತಾನು ಇದೆ. ವಿವಿಧ ಬಿತ್ತನೆ ಬೀಜವಾರು ಭತ್ತದ ಬೀಜ 636.30 ಕ್ವಿಂಟಲ್ ಮಾರಾಟವಾಗಿದ್ದು 209.95 ಕ್ವಿಂಟಲ್ ದಾಸ್ತಾನು ಇದೆ. ಮೆಕ್ಕೆಜೋಳ 5265.58 ಕ್ವಿಂಟಲ್ ಮಾರಾಟವಾಗಿದ್ದು 1552.34 ಕ್ವಿಂಟಲ್ ದಾಸ್ತಾನು ಇದೆ. ಸಜ್ಜೆ ಬೀಜ 491.66 ಕ್ವಿಂಟಲ್ ಮಾರಾಟವಾಗಿದ್ದು 163.92 ಕ್ವಿಂಟಲ್ ದಾಸ್ತಾನು ಇದೆ. ನವಣೆ 5.88 ಕ್ವಿಂಟಲ್ ಮಾರಾಟವಾಗಿದ್ದು 4.72 ಕ್ವಿಂಟಲ್ ದಾಸ್ತಾನು ಇದೆ. ಹೆಸರು ಬೀಜ 123.16 ಕ್ವಿಂಟಲ್ ಮಾರಾಟವಾಗಿದ್ದು 48.84 ಕ್ವಿಂಟಲ್ ದಾಸ್ತಾನು ಇದೆ. ತೊಗರಿ ಬೀಜ 706.65 ಕ್ವಿಂಟಲ್ ಮಾರಾಟವಾಗಿದ್ದು 255.15 ಕ್ವಿಂಟಲ್ ದಾಸ್ತಾನು ಇದೆ. ಸೂರ್ಯಕಾಂತಿ ಬೀಜ 25.89 ಕ್ವಿಂಟಲ್ ಮಾರಾಟವಾಗಿದ್ದು 123.37 ಕ್ವಿಂಟಲ್ ದಾಸ್ತಾನು ಇದೆ ಎಂದು ಕೃಷಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಪಾಂಡೆಯ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ, ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್., ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಕೃಷ್ಣ ಉಕ್ಕುಂದ, ಪಶುಪಾಲನಾ ಇಲಾಖೆ ಸೇರಿದಂತೆ ಇನ್ನೀತರ ಇಲಾಖೆಗಳ ಅಧಿಕಾರಿಗಳು ಇದ್ದರು.
Leave A Reply

Your email address will not be published.