deshadoothanews

ಗ್ರಾಮ ಆಡಳಿತ ಅಧಿಕಾರಿಗಳಿಗೆ ವೃತ್ತಿ ಬುನಾದಿ ತರಬೇತಿ: ಸಮಾರೋಪ

ಡಿ ಡಿ ನ್ಯೂಸ್. ಕೊಪ್ಪಳ

0
ಡಿ ಡಿ ನ್ಯೂಸ್. ಕೊಪ್ಪಳ :
ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆಯಿಂದ ಗ್ರಾಮ ಆಡಳಿತ ಅಧಿಕಾರಿಗಳ ವೃತ್ತಿ ಬುನಾದಿ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ನಗರದ ತಹಶೀಲ್ದಾರರ ಕಚೇರಿ ಆವರಣದ ವಿಜ್ಞಾನ ಭವನದಲ್ಲಿ ಜುಲೈ 19ರಂದು ನಡೆಯಿತು.
ಜಿಲ್ಲಾ ತರಬೇತಿ ಸಂಸ್ಥೆಯ ವ್ಯವಸ್ಥಾಪಕ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ಕಾರ್ಯಕ್ರಮದಲ್ಲಿ ಘನ ಉಪಸ್ಥಿತಿ ವಹಿಸಿದ್ದರು. ಬಳಿಕ ಮಾತನಾಡಿದ ಅವರು, ಗ್ರಾಮ ಆಡಳಿತ ಅಧಿಕಾರಿಗಳು ಹೆಚ್ಚಿನ ಸೇವಾ ಅವಧಿಯನ್ನು ಕಂದಾಯ ಇಲಾಖೆಯಲ್ಲಿಯೇ ಸಲ್ಲಿಸುತ್ತಾರೆ. ಹೀಗಾಗಿ ಸಾರ್ವಜನಿಕರೊಂದಿಗೆ ನಿಕಟವಾದ ಸಂಬಂಧ ಇಟ್ಟುಕೊಳ್ಳಲು ಕಂದಾಯ ಇಲಾಖೆಯು ಅವಕಾಶ ಒದಗಿಸಿಕೊಡುತ್ತದೆ. ಇಲಾಖೆಯಲ್ಲಿನ ವಿವಿಧ ಸೇವೆಗಳ ಬಗ್ಗೆ, ನೀತಿ ನಿಯಮಗಳ ಬಗ್ಗೆ ಸರಿಯಾದ ರೀತಿಯಲ್ಲಿ ಅಧ್ಯಯನ ನಡೆಸಿ ಅರ್ಥೈಸಿಕೊಂಡಲ್ಲಿ ಉತ್ತಮ ಆಡಳಿತಗಾರರಾಗಿ ಹೊರಹೊಮ್ಮಲು ಸಾಧ್ಯವಾಗಲಿದೆ ಎಂದು ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ಮಾಡಿದರು.
ಪ್ರತಿಯೊಂದು ಗ್ರಾಮದ ಭೌಗೋಳಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳ ಬಗ್ಗೆ ಮೊದಲನೆಯದಾಗಿ ಸರಿಯಾಗಿ ತಿಳಿದುಕೊಳ್ಳಬೇಕು. ಸಮಯ ಪರಿಪಾಲನೆ ಮಾಡಬೇಕು. ಲೋಪವಾಗದ ಹಾಗೆ ಕಚೇರಿಯ ಕಾರ್ಯಗಳನ್ನು ನಡೆಸಬೇಕು. ಕಚೇರಿಯ ಕಾರ್ಯದ ಜೊತೆಜೊತೆಗೆ ಆರೋಗ್ಯದ ಬಗ್ಗೆ ಕೂಡ ಗಮನ ಹರಿಸಬೇಕು. ಕುಟುಂಬದವರಿಗು ಸಹ ಸಮಯ ಕೊಡಬೇಕು ಎಂದು ಅವರು ಸಲಹೆ ಮಾಡಿದರು.
ಗ್ರಾಮಾಭಿವೃದ್ಧಿಯಲ್ಲಿ ಗ್ರಾಮಮಟ್ಟದ ಅಧಿಕಾರಿಗಳ ಪಾತ್ರ ಸಹ ಮಹತ್ವದ್ಧಾಗಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ನೇಮಕಗೊಂಡ ಗ್ರಾಮ ಆಡಳಿತ ಅಧಿಕಾರಿಗಳಿಗೆ ತರಬೇತಿ ಏರ್ಪಾಡು ಮಾಡಿದ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ ಅವರ ಕಾರ್ಯವು ಪ್ರಶಂಸಾರ್ಹವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎಂ.ಎ ರೆಡ್ಡೆರ್, ಕೊಪ್ಪಳ ಗ್ರೇಡ್-2 ತಹಶೀಲ್ದಾರರಾದ ಗವಿಸಿದ್ದಪ್ಪ ಮಣ್ಣೂರು, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ಕಂದಾಯ ಇಲಾಖೆ ನೌಕರರ ಸಂಘದ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷರಾದ ಮಂಜುನಾಥ ಮ್ಯಾಗಳಮನಿ, ನಿವೃತ್ತ ಶಿರಸ್ತೆದಾರರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಅಡಿವೆಪ್ಪ ಮತ್ತೂರು ಮತ್ತು ಲಾಯಕ್ ಅಲಿ, ಜಿಲ್ಲಾ ತರಬೇತಿ ಸಂಸ್ಥೆಯ ನಿವೃತ್ತ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ, ಯುನೆಸೆಫ್ ಸಂಯೋಜಕರಾದ ಹರಿಶ್ ಜೋಗಿ ಉಪಸ್ಥಿತರಿದ್ದರು.
ವೃತ್ತಿ ಬುನಾದಿ ತರಬೇತಿಗೆ ಆಯ್ಕೆಯಾಗಿ ಸಕ್ರಿಯ ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳಿಗೆ ಜಿಲ್ಲಾಧಿಕಾರಿಗಳು ಇದೆ ವೇಳೆ ಪ್ರಮಾಣ ಪತ್ರ ವಿತರಿಸಿದರು. ಬಳಿಕ ಪ್ರಶಿಕ್ಷಣಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಗ್ರಾಮ ಆಡಳಿತ ಅಧಿಕಾರಿಗಳಾದ ಕರಿಬಸಮ್ಮ, ಅಭಿಷೇಕಗೌಡ, ನಾಗರಾಜ ಅವರು ಅನಿಸಿಕೆ ವ್ಯಕ್ತಪಡಿಸಿದರು.
ಹಾಲೇಶ ಮತ್ತು ಪೂಜಾ ಅವರು ನಿರೂಪಿಸಿದರು. ಗಿರೀಶ ಅವರು ವಂದಿಸಿದರು.
Leave A Reply

Your email address will not be published.