deshadoothanews

ಬಿನ್ನಾಳ ಗ್ರಾಮದಲ್ಲಿ ಮಕ್ಕಳ ಹಕ್ಕುಗಳ, ಕಾನೂನುಗಳ ಜಾಗೃತಿ

ಡಿ ಡಿ ನ್ಯೂಸ್. ಕೊಪ್ಪಳ

0
ಡಿ ಡಿ ನ್ಯೂಸ್. ಕೊಪ್ಪಳ :
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು ಹಾಗೂ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಿನ್ನಾಳ ಸರ್ಕಾರಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲಿ ಜುಲೈ 21ರಂದು ಬಿನ್ನಾಳ ಗ್ರಾಮದಲ್ಲಿ ಮಕ್ಕಳ ಹಕ್ಕುಗಳ ಹಾಗೂ ಮಕ್ಕಳ ಪರವಾದ ಕಾನೂನುಗಳ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಶಿವಲೀಲಾ ವನ್ನೂರ ಅವರು ಮಾತನಾಡಿ, ಬಾಲ್ಯವಿವಾಹ ನಿಷೇಧ ಕಾಯ್ದೆ-2006ನ್ನು ಹಾಗೂ ಕರ್ನಾಟಕ ತಿದ್ದುಪಡಿ-2016ರ ಕಾಯ್ದೆ ಅನ್ವಯ 2018ರ ಮಾರ್ಚ್ 03ರ ನಂತರದ ಎಲ್ಲಾ ಬಾಲ್ಯವಿವಾಹಗಳು ಅಸಿಂಧು ವಿವಾಹಗಳಾಗಿವೆ. ಅಪ್ರಾಪ್ತ ವಯಸ್ಸಿನ ಪತ್ನಿಯೊಂದಿಗೆ ಲೈಂಗಿಕ ಸಂಪರ್ಕವು ಶಿಕ್ಷಾರ್ಹ ಅಪರಾಧವಾಗಿದ್ದು, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ 2012 ರನ್ವಯ ಕನಿಷ್ಠ 10 ವರ್ಷಗಳಿಂದ ಜೀವಾವಧಿ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿನ್ನಾಳ ಸರಕಾರಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಮುಖ್ಯೋಪಾಧ್ಯಾಯರಾದ ರಾಮಣ್ಣ ಕಾಡದ ಅವರು ಮಕ್ಕಳ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕಾದ ಅಗತ್ಯತೆಯ ಕುರಿತು ಸಂಕ್ಷಿಪ್ತವಾಗಿ ತಿಳಿಸಿದರು. ಯಲಬುರ್ಗಾ ಶಿಶು ಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿಯಾದ ಪದ್ಮಾವತಿ ಹೆಚ್ ಅವರು ಹದಿಹರಿಯದ ಮಕ್ಕಳ ಸಮಸ್ಯೆಗಳ ಕುರಿತು ಸಲಹೆಗಳನ್ನು ನೀಡಿದರು. ರವಿ ಬಡಿಗೇರ ಅವರು ಜಿಲ್ಲಾ ಮಕ್ಕಳ ರಕ್ಷಣ ಘಟಕದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಪ್ರತಿಭಾ ಕಾಶಿಮಠ, ಬಿನ್ನಾಳ ಸರಕಾರಿ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ಶಿಕ್ಷಕ ವೃಂದದವರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದೇವರಾಜ ತಿಲಗರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Leave A Reply

Your email address will not be published.