deshadoothanews

ಕೊಪ್ಪಳ ಜಿಲ್ಲೆ: ವನಮಹೋತ್ಸವ ಸಪ್ತಾಹಕ್ಕೆ ಚಾಲನೆ

ಡಿ ಡಿ ನ್ಯೂಸ್. ಕೊಪ್ಪಳ

0
ಡಿ ಡಿ ನ್ಯೂಸ್. ಕೊಪ್ಪಳ :

 

ರಾಜ್ಯಾದ್ಯಂತ ಏಕಕಾಲಕ್ಕೆ ನಡೆದಂತೆ ವನಮಹೋತ್ಸವ-2023 ಸಪ್ತಾಹಕ್ಕೆ ಜುಲೈ 1ರಂದು ಕೊಪ್ಪಳ ಜಿಲ್ಲೆಯಲ್ಲಿ ಸಹ ವಿದ್ಯುಕ್ತ ಚಾಲನೆ ಸಿಕ್ಕಿತು.
ಈ ಸಪ್ತಾಹದ ಚಾಲನೆಗಾಗಿ ಅರಣ್ಯ ಇಲಾಖೆಯಿಂದ ಜಿಲ್ಲಾಡಳಿತ ಭವನದ ವಿಶಾಲ ಆವರಣದಲ್ಲಿ ಸಸಿ ನೆಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ, ಶಾಸಕರಾದ ರಾಘವೇಂದ್ರ ಕೆ. ಹಿಟ್ನಾಳ ಹಾಗೂ ಇನ್ನೀತರ ಜನಪ್ರತಿನಿಧಿಗಳು ಜಿಲ್ಲಾಡಳಿತ ಭವನಕ್ಕೆ ಆಗಮಿಸಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ ಸೇರಿದಂತೆ ಇನ್ನೀತರು ಸಹ ಈ ಸಂದರ್ಭದಲ್ಲಿ ಸಸಿ ನೆಟ್ಟರು.

 

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿ, ಸಹಾಯಕ ಆಯುಕ್ತರಾದ ಬಸವಣ್ಣಪ್ಪ ಕಲಶೆಟ್ಟಿ, ಡಿಎಸ್ಪಿ ಶರಣಬಸಪ್ಪ ಸುಭೇದಾರ, ತಹಸೀಲ್ದಾರ ಅಮರೇಶ ಬಿರಾದಾರ, ಅರಣ್ಯ ಇಲಾಖೆಯ ಸಿಬ್ಬಂದಿ ಸೇರಿದಂತೆ ಇನ್ನೀತರರು ಇದ್ದರು.
*ಸಾರ್ವಜನಿಕರಲ್ಲಿ ಮನವಿ:*
ವನಮಹೋತ್ಸವ ಕಾರ್ಯಕ್ರಮವು ರಾಜ್ಯ ಸರ್ಕಾರದ ಮಹತ್ವದ ಕಾರ್ಯಯೋಜನೆಯಲ್ಲೊಂದಾಗಿದೆ. 2023ರ ಜುಲೈ 1ರಿಂದ 2024ರ ಜೂನ್ 30ರವರೆಗೆ 5 ಕೋಟಿ ಸಸಿ ನೆಟ್ಟು ಪೋಷಿಸುವ ಸಂಕಲ್ಪದ ಹಾಗೂ ಮುಂದಿನ 5 ವರ್ಷಗಳಲ್ಲಿ 25 ಕೋಟಿ ಸಸಿ ನೆಟ್ಟು ಪೋಷಿಸುವ ನಿರ್ಣಯದ ಕಾರ್ಯಕ್ರಮ ಇದಾಗಿದೆ. ನಾನು ಸಸಿ ನೆಟ್ಟಿದ್ದೇನೆ.. ಬನ್ನಿ ಕರುನಾಡನ್ನು ಸಸ್ಯ ಕಾಶಿ ಮಾಡೋಣ’ ‘5 ಕೋಟಿ ಸಸಿ ನೆಡೋಣ ಕರ್ನಾಟಕದಲ್ಲಿ ಹಸಿರು ಹೊದಿಕೆಯ ಕ್ರಾಂತಿ ಮಾಡೋಣ’ ಎನ್ನುವ ಆಶಯದಡಿ ರಾಜ್ಯಾದ್ಯಂತ ನಡೆಯುವಂತೆ ಕೊಪ್ಪಳ ಜಿಲ್ಲೆಯಲ್ಲಿ ಸಹ ಜುಲೈ 1ರಿಂದ ಜುಲೈ 7ರವರೆಗೆ ಈ ವನಮಹೋತ್ಸವ ಕಾರ್ಯಕ್ರಮ ನಡೆಯಲಿದೆ. ಕರುನಾಡನ್ನು ಸಸ್ಯಕಾಶಿ ಮಾಡುವ ಸಂದೇಶ ಎಲ್ಲೆಡೆ ಪಸರಿಸಬೇಕಿದೆ. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯ ಸಾರ್ವಜನಿಕರು ಅರಣ್ಯ ಇಲಾಖೆಯ ಈ ಅಭಿಯಾನಕ್ಕೆ ಸಹಕಾರ ನೀಡಬೇಕು. ಕೊಪ್ಪಳ ಜಿಲ್ಲೆಯು ಬಹುತೇಕ ಬಯಲು ಪ್ರದೇಶವಾಗಿದೆ. ಅರಣ್ಯ ವೃದ್ಧಿಗೆ ಬೇಕಾದಂತಹ ಮಣ್ಣು ಮತ್ತು ಹವಾಗುಣ ಇಲ್ಲಿದೆ. ಹೀಗಾಗಿ ಸಾರ್ವಜನಿಕರು ಅರಣ್ಯ ಇಲಾಖೆ, ಅರಣ್ಯ ಇಲಾಖೆಯ ನರ್ಸರಿಗಳಿಗೆ ಭೇಟಿ ನೀಡಿ ಸಸಿ ಪಡೆದು ಜಮೀನು ಗದ್ದೆಗಳಲ್ಲಿ ನೆಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸಸಿ ನೆಟ್ಟಾಗ ಅವುಗಳ ಪೋಷಣೆಗೆ ಸಹಕರಿಸಬೇಕು ಎಂದು ಇದೆ ವೇಳೆ ಸಚಿವರಾದ ಶಿವರಾಜ ತಂಗಡಗಿ ಅವರು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.

 

*ವಿಶೇಷ ಸಪ್ತಾಹ*:
‘ನನ್ನ ಗಿಡ ನನ್ನ ಹೆಮ್ಮೆ’ ಎನ್ನುವ ಶೀರ್ಷಿಕೆಯಡಿ ಸಸಿ ನೆಡುವ ವನಮಹೋತ್ಸವ-2023ರ ಸಪ್ತಾಹವನ್ನು ಜುಲೈ 1ರಿಂದ ಜುಲೈ 7ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಸಹ ಹಮ್ಮಿಕೊಳ್ಳಲಾಗಿದೆ. ಈ ಸಪ್ತಾಹದಡಿ ಕೊಪ್ಪಳ ಜಿಲ್ಲೆಗೆ ನಿಗದಿಪಡಿಸಿದ ಗುರಿಯನುಸಾರ ಪೂರ್ಣಪ್ರಮಾಣದಲ್ಲಿ ಸಸಿ ನೆಡಲು ಯೋಜಿಸಲಾಗಿದೆ ಎಂದು ಇದೆ ವೇಳೆ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾವ್ಯ ಚತುರ್ವೇದಿ ಅವರು ಸಚಿವರಿಗೆ ಮಾಹಿತಿ ನೀಡಿದರು.
Leave A Reply

Your email address will not be published.