deshadoothanews

ಇ-ಕೆವೈಸಿ ಮಾಡಿಸಲು ರೈತ ಬಾಂಧವರಲ್ಲಿ ಜಿಲ್ಲಾಧಿಕಾರಿಗಳ ಮನವಿ

ಡಿ ಡಿ ನ್ಯೂಸ್. ಕೊಪ್ಪಳ

0
ಡಿ ಡಿ ನ್ಯೂಸ್. ಕೊಪ್ಪಳ :

 

 ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14ನೇ ಪ್ರೋತ್ಸಾಹಧನದ ಕಂತಿಗಾಗಿ ಜೂನ್ 30ರೊಳಗೆ ಪ್ರತಿಯೊಬ್ಬ ರೈತರು ತಪ್ಪದೇ ಇ-ಕೆವೈಸಿ ಮಾಡಿಸಿಕೊಳ್ಳಲು ಸೂಚಿಸಿದಂತೆ ಜಿಲ್ಲೆಯ ರೈತರು ಸಹಕರಿಸಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಜಿಲ್ಲೆಯ ರೈತ ಬಾಂಧವರಲ್ಲಿ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜೂನ್ 28ರಂದು ಕೃಷಿ, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಮೊತ್ತವನ್ನು ರೈತರ ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಪಿಎಂ ಕಿಸಾನ್ ಯೋಜನೆಯ 14ನೆ ಕಂತಿನ ಹಣ ನೆರವಿನ ವರ್ಗಾವಣೆ ಇ-ಕೆವೈಸಿ ಮಾಡುತ್ತಿರುವ ಮತ್ತು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿರುವ ಫಲಾನುಭವಿಗಳಿಗೆ ಮಾತ್ರ ಬರುತ್ತದೆ. ಇದನ್ನು ಬಾಕಿ ಇರಿಸಿಕೊಂಡಿರುವ ರೈತರು ತಮಗೆ ಹತ್ತಿರದ ರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಸೆಂಟರ್ ಅಥವಾ ನಾಗರಿಕ ಸೇವಾ ಕೇಂದ್ರಗಳಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು.

 

ಜಿಲ್ಲೆಯ ವಿವಿಧೆಡೆಗಳಲ್ಲಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಇನ್ನು ಕೆಲವು ಸಂಖ್ಯೆಗಳಲ್ಲಿ ರೈತರು ಇ-ಕೆವೈಸಿ ಮಾಡಿಕೊಳ್ಳುವುದನ್ನು ಬಾಕಿ ಇರಿಸಿಕೊಂಡಿದ್ದಲ್ಲಿ ಪಿಎಂ ಕಿಸಾನ್ ಮೊಬೈಲ್ ಅಪ್ಲಿಕೇಶನ್‌ನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್ಲೋಡ್ ಮಾಡಿ ಇ-ಕೆವೈಸಿ ಮಾಡಿಕೊಳ್ಳಬಹುದಾಗಿದೆ. ಈ ಬಗ್ಗೆ ಏನಾದರು ಗೊಂದಲವಿದ್ದಲ್ಲಿ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಅಥವಾ ಸೇವಾ ಸಿಂಧು ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ಸೇವೆ ಪಡೆಯಬಹುದು ಎಂದು ಜಿಲ್ಲಾಧಿಕಾರಿಗಳು ಜಿಲ್ಲೆಯ ರೈತರಲ್ಲಿ ಮನವಿ ಮಾಡಿದರು.
*ಅಧಿಕಾರಿಗಳಿಗೆ ಸೂಚನೆ:*
ಇ-ಕೆವೈಸಿ ಮಾಡಿಸಲು ಎರಡು ದಿನಗಳಷ್ಟೇ ಬಾಕಿ ಇದೆ. ಅವಧಿ ಮುಕ್ತಾಯದೊಳಗೆ ಜಿಲ್ಲೆಯ ಪ್ರತಿಯೊಬ್ಬ ರೈತರು ಇ-ಕೆವೈಸಿ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಎಲ್ಲಾ ರೀತಿಯ ವ್ಯವಸ್ಥೆ ಮಾಡಬೇಕು. ಇದಕ್ಕೆ ಗ್ರಾಮ್ ಒನ್ ಮತ್ತು ಸಿಎಸ್‌ಸಿಗಳ ನೆರವನ್ನು ಸಹ ಪಡೆಯಬೇಕು. ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಒಗ್ಗೂಡಿ ಸಭೆ ನಡೆಸಿ ಅತಿ ಹೆಚ್ಚು ಬಾಕಿ ಇರಿಸಿಕೊಂಡಿರುವಲ್ಲಿ ಕಾರ್ಯಾಚರಣೆ ನಡೆಸಿ ಈ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
*ಬೀಜ, ಗೊಬ್ಬರ ವಿತರಣೆ:*
ಜಿಲ್ಲೆಯ ರೈತರಿಗೆ ಬೀಜ ವಿತರಣೆ ಮತ್ತು ರಸಗೊಬ್ಬರ ಪೂರೈಕೆಯ ಬಗ್ಗೆ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದರು. ಮಳೆ ಕೊರತೆ ಇದ್ದಾಗ್ಯೂ ಬೀಜ ಮತ್ತು ಗೊಬ್ಬರ ಕೇಳಿ ಬರುವ ರೈತರಿಗೆ ಸಕಾಲಕ್ಕೆ ವಿತರಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೂನ್ 28 ಕೊನೆಗೊಂಡಂತೆ ಕೊಪ್ಪಳ ಜಿಲ್ಲೆಯಲ್ಲಿ ಯೂರಿಯಾ 23,843 ಮೆ.ಟನ್, ಡಿಎಪಿ 11,877 ಮೆ.ಟನ್., ಎಂಓಪಿ 792 ಮೆ ಟನ್., ಎನ್‌ಕೆಪಿಎಸ್ 27,574 ಮೆ ಟನ್, ಎಸ್‌ಎಸ್‌ಪಿ 402 ಮೆಟನ್ ಸೇರಿ ಒಟ್ಟು 64,488 ಮೆ.ಟನ್ ರಸಗೊಬ್ಬರ ದಾಸ್ತಾನು ಇದೆ. ಜೂನ್ 28 ಕೊನೆಗೊಂಡಂತೆ ಜಿಲ್ಲೆಯಲ್ಲಿ 265.25 ಕ್ವಿಂಟಲ್ ಭತ್ತ, 1662.13 ಕ್ವಿಂಟಲ್ ಮೆಕ್ಕೆಜೋಳ, 170.61 ಕ್ವಿಂಟಲ್ ಸಜ್ಜೆ, 6.88 ಕ್ವಿಂಟಲ್ ನವಣೆ, 49.44 ಕ್ವಿಂಟಲ್ ಹೆಸರು ಮತ್ತು 226.34 ಕ್ವಿಂಟಲ್ ತೊಗರಿ, 1007.73 ಕ್ವಿಂಟಲ್ ಸೂರ್ಯಕಾಂತಿ ಬೀಜಗಳ ದಾಸ್ತಾನು ಇದೆ ಎಂದು ಸಭೆಗೆ ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್. ಅವರು ಮಾಹಿತಿ ನೀಡಿದರು.
ಸಭೆಯಲ್ಲಿ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಕೃಷ್ಣ ಉಕ್ಕುಂದ, ಲೀಡ್ ಬ್ಯಾಂಕ್ ಮ್ಯಾನೇಜರ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು, ಸಹಕಾರಿ ಸಂಘಗಳ ಉಪನಿಬಂಧಕರು, ರೇಷ್ಮೆ ಇಲಾಖೆಯ ಅಧಿಕಾರಿಗಳು ಹಾಗೂ ಇನ್ನೀತರ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.
Leave A Reply

Your email address will not be published.