deshadoothanews

ಹೃದಯ ಗಾನದಲಿ ಪಲ್ಲವಿಸುವ ಸಾಲುಗಳು

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕೊಪ್ಪಳ

ಕೃತಿ: ಭಾವ ಜೇನು
ಲೇಖಕರು : ಶ್ರೀಮತಿ ಕಸ್ತೂರಿ ಡಿ ಪತ್ತಾರ
ಪ್ರಕಾಶಕರು: ಸ್ವರಸಾನಿಧ್ಯ ಪ್ರಕಾಶನ ಬೆಂಗಳೂರು
ಬೆಲೆ: ತೊಂಬತ್ತು ರೂಪಾಯಿಗಳು

ನಮ್ಮ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ಕವಯಿತ್ರಿಯರದು ಒಂದು ವಿಶಿಷ್ಟ ಅಭಿವ್ಯಕ್ತಿಯಿದೆ. ಕುಟುಂಬದ ಎಲ್ಲಾ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲ ಮಹಿಳೆಯೇ ಒಂದು ಮಹಾ ಕಾವ್ಯ ಸಮಾಜದಲ್ಲಿ ಹಲವಾರು ಸ್ತರದಲ್ಲಿ ಪಾತ್ರ ವಹಿಸುವ ಹೆಣ್ಣು ನಿಜಕ್ಕೂ ಸಾರ್ಥಕ ಬದುಕನ್ನು ನಡೆಸುತ್ತಾಳೆ. ಹೆಣ್ಣೇ ಕುಟುಂಬದ ಕಣ್ಣು ಎಂಬ ನಾಲ್ನುಡಿಯಲ್ಲಿ ಈ ಸತ್ಯ ದರ್ಶನವಿದೆ. ಮನೆಯ ಹೊಣೆಗಾರಿಕೆಯೊಡನೆ, ಬದುಕಿನ ಭಾರವನ್ನು ಹೊತ್ತುಕೊಳ್ಳುವ, ಪ್ರತಿಯೊಂದು ಸನ್ನಿವೇಶದಲ್ಲೂ, ಆಗ್ನಿ ಪರೀಕ್ಷೆಯನ್ನು ಎದುರಿಸುವ ಹೆಣ್ಣು ಇಲ್ಲಿ ಕವಿತೆಯ ಚುಕ್ಕಾಣಿ ಹಿಡಿದಿದ್ದಾಳೆ.

ಡಾ. ಜಯಶ್ರೀಅರವಿಂದ್

ಈ ಮೇಲಿನ ಸಾಲುಗಳು ಪ್ರತಿಯೊಬ್ಬ ಮಹಿಳೆಯ ಬದುಕಿಗೂ ಅನ್ವಯವಾಗುತ್ತದೆ. ಈ ಸಮಾಜದಲ್ಲಿ ಮಹಿಳೆಯು ಇಂದು ಬದುಕಿನ ಪ್ರತಿಯೊಂದು ಅಯಾಮದಲ್ಲಿ ಕೆಲಸ ಮಾಡುತ್ತಾ ಪುರುಷನಿಗೆ ಸಮಾನವಾಗಿ ಎಲ್ಲಾ ರಂಗಗಳಲ್ಲಿ ಬೆಳೆಯುತ್ತಾ ಸಾಹಿತ್ಯ ಕ್ಷೇತ್ರದಲ್ಲೂ ಕೂಡ ತನ್ನ ಛಾಪನ್ನು ಮೂಡಿಸುತ್ತಿದ್ದಾಳೆ. ಮಹಿಳಾ ಸಾಹಿತ್ಯ ಕ್ಷೇತ್ರದಲ್ಲಿ ಇತ್ತೀಚೆಗೆ ಬಹಳಷ್ಟು ಜನ ಕವಿಯತ್ರಿಯರು ಬೆಳಕಿಗೆ ಬರುತ್ತಿರುತ್ತಿದ್ದಾರೆ ಅವರಲ್ಲಿ ಶ್ರೀಮತಿ ಕಸ್ತೂರಿ ಡಿ ಪತ್ತಾರ ಒಬ್ಬರು.

ಶ್ರೀಮತಿ ಕಸ್ತೂರಿ ಡಿ ಪತ್ತಾರ ಇವರು ಎಲೆಮರೆಯ ಕಾಯಿಯಂತೆ ಇರುವ ಬಹುಮುಖ ಪ್ರತಿಭೆ. ಸುಮಾರು ವರುಷಗಳಿಂದ ಇವರು ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 2016 ರಲ್ಲಿ ಅಂತರಂಗದರಿವು ಎಂಬ ಅಧುನಿಕ ವಚನಗಳ ಕೃತಿಯನ್ನು ಚೊಚ್ಚಲ ಕವನ ಸಂಕಲನವಾಗಿ ಲೋಕಾರ್ಪಣೆ ಮಾಡಿದರು ನಂತರದ ವಷ೯ಗಳಲ್ಲಿ ಕಾವ್ಯಾಂತರಂಗ, ಭಾವದ ತೊರೆ ಎಂಬ ಭಾವಗೀತೆಗಳ ಕೃತಿಗಳನ್ನು ಬಿಡುಗಡೆ ಮಾಡಿದರು. ಭಾವ ಜೇನು ಎಂಬ ಭಾವಗೀತೆಗಳ ಕೃತಿಯನ್ನು, ಹೃದಯಗಳು ಮಾತನಾಡಿವೆಯೆಂಬ ಗಜಲ್ ಕಾವ್ಯ ಕೃತಿಯನ್ನು, ಪ್ರೀತಿಯ ಅಮಲುಯೆಂಬ ಕನ್ನಡ ಶಾಯಿರಿಗಳ ಕೃತಿಯನ್ನು ಬಿಡುಗಡೆ ಮಾಡಿದರು ಮತ್ತು ಈಗ ಬಿಡುಗಡೆ ಸಿದ್ದವಾಗಿರುವ ಭಾವ ಪ್ರವಾಹ ಎಂಬ ಕೃತಿಯನ್ನುೂ ಸೇರಿಸಿ ಸುಮಾರು ಎಳು ಕೃತಿಗಳನ್ನು ಕನ್ನಡ ಸಾಹಿತ್ಯಲೋಕಕ್ಕೆ ನೀಡಿ ಬಹುಮುಖ ಪ್ರತಿಭೆಯ ಕವಯಿತ್ರಿ ಎನಿಸಿಕೊಂಡಿದ್ದಾರೆ.
ಶ್ರೀಮತಿ ಕಸ್ತೂರಿ ಡಿ ಪತ್ತಾರ ಇವರು ಬಹಳಷ್ಟು ಭಾವಗೀತೆಗಳನ್ನೆ ಬರೆದಿದ್ದಾರೆ ಕಾರಣ ಅವರು ಪತಿಯಾದ ದೇವೇಂದ್ರ ಕುಮಾರ್ ಪತ್ತಾರ ಇವರು ಸಂಗೀತ ನಿಧೇ೯ಶಕರು. ಕನ್ನಡ ನಾಡಿನ ಸಂಗೀತ ಕ್ಷೇತ್ರದಲ್ಲಿ ಬಹಳಷ್ಟು ಹೆಸರನ್ನು ಗಳಿಸಿದವರು ಸಾಹಿತ್ಯ ಮತ್ತು ಸಂಗೀತಾ ಒಂದಾಗಿರುವ ಕಲಾ ಕುಟುಂಬ ಇವರದಾಗಿದೆ.


ಶ್ರೀಮತಿ ಕಸ್ತೂರಿ ಡಿ ಪತ್ತಾರ ಇವರು ಕೊಪ್ಪಳ ಜಿಲ್ಲೆಯ ಮುಧೋಳ ಗ್ರಾಮದವರು. ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕಥೆ, ಕವನ, ಭಾವಗೀತೆ, ಹನಿಗಮನ, ಶಾಯಿರಿ, ಗಜಲ್ ಹೀಗೆ ಅನೇಕ ಕನ್ನಡ ಸಾಹಿತ್ಯದ ಪ್ರಕಾರಗಳಲ್ಲಿ ಬರೆಯುತ್ತಾ ಓದುತ್ತಾ ಕನಾ೯ಟಕದ ಹಲವಾರು ಕನ್ನಡದ ಕಾರ್ಯಕ್ರಮಗಳಲ್ಲಿ ಉಪನ್ಯಾಸ ನೀಡುತ್ತಾ ಕವಿಗೋಷ್ಠಿಗಳಲ್ಲಿ ಭಾಗವಹಿಸುತ್ತಾ ಕನ್ನಡದ ಸೇವೆಯನ್ನು ಮಾಡುತ್ತಿದ್ದಾರೆ.

ಶ್ರೀಮತಿ ಕಸ್ತೂರಿ ಡಿ ಪತ್ತಾರ ನನಗೆ ಇತ್ತೀಚಿಗೆ ಪರಿಚಯವಾದವರು. ಬೆಂಗಳೂರಿನ ಒಂದು ಕನ್ನಡದ ಕಾರ್ಯಕ್ರಮದಲ್ಲಿ ಅವರ ಕೃತಿ ಭಾವಜೇನು ಎಂಬ ಭಾವಗೀತೆಗಳ ಪುಸ್ತಕವನ್ನು ಅತ್ಮೀಯವಾಗಿ ನೀಡಿದ್ದರು. ಈ ಕೃತಿಯನ್ನು ಓದಿದ ಮೇಲೆ ಇಂತಹ ಕೃತಿಯ ಸಾಲುಗಳ ಸಿಹಿಯನ್ನು ನಾನೊಬ್ಬನೇ ಸವಿದರೆ ಸಾಲದು ಕನ್ನಡದ ಓದುಗರ ಕೂಡ ಸವಿದು ಪ್ರೋತ್ಸಾಹ ನೀಡಲೆಂದು ಈ ಕೃತಿಯನ್ನು ಪರಿಚಯ ಮಾಡುತ್ತಿರುತ್ತಿವೆ.

ಭಾವಜೇನು ಭಾವಗೀತೆಗಳ ಈ ಕೃತಿಗೆ ನಾಡಿನ ಖ್ಯಾತ ಕವಿಗಳು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಕಳೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಆದಂತಹ ಡಾ. ದೊಡ್ಡ ರಂಗೇಗೌಡರು ಮುನ್ನುಡಿಯನ್ನು ಬರೆದಿದ್ದು, ಭಾವಗೀತೆಯ ಮುಖ್ಯ ಆಶಯ ಭಾವ ಪ್ರಧಾನ ಅಭಿವ್ಯಕ್ತಿ ಮತ್ತು ಗೀತಗಾರಿಕೆಯ ಸಂಗೀತ ಸಂಸಗ೯ದ ರಚನೆಯ ಅಂತರ್ಯ. ಈ ದಾರಿಯನ್ನು ಸಾಗಲು ಕವಿ ಲಯಗಾರಿಕೆಯ ಕಡೆಗೆ ವಿಶೇಷ ಗಮನವನ್ನು ಕೊಡಬೇಕಾಗುತ್ತದೆ. ಕೋಮಲ ಭಾವಗಳ ಗೀತಾತ್ಮಕ ಸೃಜನೆಗಳು ಲಯಬದ್ಧವಾಗಿ ಹದವಾದ ಅಭಿವ್ಯಕ್ತಿಯನ್ನ ಸಾಧಿಸುವ ಕಡೆಗೆ ಕವಿಯ ಕೃತಿ ಸಾಗಿದಾಗ ಮಾತ್ರ ಗೀತೆಗಳ ಅಂಕುರ ಸಾಧ್ಯವಾಗುತ್ತದೆ. ಈ ಕೃತಿಯಲ್ಲಿ ಕವಿಯತ್ರಿಯ ಶ್ರಮ ಸಾರ್ಥಕವಾಗಿದೆ. ಶ್ರೀಮತಿ ಕಸ್ತೂರಿ ಡಿ ಪತ್ತಾರ ರವರ ಭಾವನೆ, ಕಲ್ಪನೆ ಅಭಿವ್ಯಕ್ತಿ , ಲಲಿತವಾದ ಲಯಗಾರಿಕೆ, ಪಲ್ಲವಿಯ ರಚನೆಯಲ್ಲಿ ಜಾಣತನ, ಜ್ಲಾಘನೀಯ ಅಂಶಗಳು ಕೋಮಲ ಪದಪುಂಜಗಳ ನಾದಮಯ ನುಡಿ ಜೋಡನೆ ಸೂಕ್ತವಾದ ಕಲ್ಪನಾ ಲಹರಿಗಳು, ಸಂಗೀತಾದ ಸ್ವರಪ್ರಸ್ತಾರಗಳಿಗೆ ಅಳುವಡುವಂತಹ ಪಲ್ಲವಿ ಚರಣಗಳ ಸೃಜನೆಯಿಂದ ಶ್ರೀಮತಿ ಕಸ್ತೂರಿ ಡಿ ಪತ್ತಾರ ರವರ ಕಾವ್ಯ ತನ್ನ ವಿಜಯದ ಕಹಳೆಯನ್ನು ಮೊಳಗಿಸಿದೆ ಅದಕ್ಕಾಗಿ ಕನ್ನಡದ ಜನರ ಪರವಾಗಿ ಅಭಿನಂದನೆಗಳು ಎಂದು ಹೇಳಿ ಶುಭ ಹಾರೈಸಿದ್ದಾರೆ.
ಅಲ್ಲಮಪ್ರಭ ಬೆಟ್ಟದೂರು ಹಿರಿಯ ಸಾಹಿತಿಗಳು ಕೊಪ್ಪಳ ಇವರು ಕೃತಿಯ ಬಗ್ಗೆ ನುಡಿಯತ್ತಾ, ಕಸ್ತೂರಿ ಡಿ ಕವಿತೆಗಳಲ್ಲಿ ನಾಡು ನುಡಿಯ ಪ್ರೀತಿ, ದುಡಿಯುವ ವಗ೯ದ ಶೋಷಣೆ , ಸ್ತ್ರೀಯರ ಬವಣೆ, ಪರಕೃತಿ ಪ್ರೇಮ,ಮುಂತಾದ ವಿಷಯಗಳ ಬಗ್ಗೆ ಕವಿತೆ ರಚಿಸಿದ್ದಾರೆ. ಕಾವ್ಯಕ್ಕೆ ಅಗತ್ಯವಾದ ಕುತೂಹಲ ಜೀವನ ಪ್ರೀತಿ, ಅನುಭವ ಕವಿತೆಗಳಲ್ಲಿದೆ ಅಂತ ಹೇಳಿ ಶುಭ ಹಾರೈಸಿದ್ದಾರೆ.

ಡಾ. ಜಿ.ಶ್ರೀ ಅರವಿಂದ ಅವರು ಆಶಯ ನುಡಿಯನ್ನು ಬರೆದು, ಕಸ್ತೂರಿ ಅವರ ಕಾವ್ಯದ ಹೂವು ಅರಳಲು ಪತಿಯ ಪ್ರೋತ್ಸಾಹ ಮೆಚ್ಚುಗೆಯ ಬೆಳಕೆ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಜಿಂಕಾರ ನಾಥ ಕಸ್ತೂರಿಯವರ ಕವಿತೆ ಪತಿಯ ಪ್ರೇಮದ ಬೆಳಕಿನಲ್ಲಿ ಅರಳಿ ಮಗಮಗಿಸುತ್ತಿದೆ. ಕಸ್ತೂರಿಯ ಕಂಪನ್ನು ಸುತ್ತಲೂ ಪಸರಿಸುತ್ತದೆ. ಹೀಗೆಯೇ ನಿರಂತರವಾಗಿ ಈ ಸಾಹಿತ್ಯ ಮತ್ತು ಸಂಗೀತದ ಅನುಪಮಾ ತೋಟದಲ್ಲಿ ಮತ್ತಷ್ಟು ಪರಿಮಳ ಭರಿತಾ ಹೂಗಿಡಗಳು ಚಿಗುರಲಿ, ಹೂಬಿಟ್ಟು ಬಣ್ಣ ಬಣ್ಣದ ಚಿತ್ತಾರ ಬರೆಯಲಿ. ಹೂವಿನ ಭಾವದ ಜೇನ್ಮಳೆ ಸುರಿಯಲಿ ಎಂದು ಹೇಳಿ ಹಾರೈಸಿದ್ದಾರೆ.

ಕಸ್ತೂರಿ ಯವರ ಕವಿತೆಗಳು ದಿಕ್ಕು ತಪ್ಪಿಸುತ್ತಿರುವ ಸಮಾಜಕ್ಕೆ ನೀತಿ ಹೇಳುವ ಕವಿತೆಗಳಾಗಿವೆ. ಕನ್ನಡದ ಬಗ್ಗೆ ಅನೇಕ ಕವಿತೆಗಳಲ್ಲಿ ಕನ್ನಡದ ಸಿರಿಯನ್ನ ಎತ್ತಿ ಹಿಡಿದಿದ್ದಾರೆ ಪರಿಸರ ಮತ್ತು ಅನೇಕ ಹೆಣ್ಣು ಮಕ್ಕಳ ಒಡಲುರಿಯ ಸಂವೇದನೆಗಳ ಮೂಲಕ ಈ ಕವಿತೆಗಳಲ್ಲಿ ಮಹಿಳೆಯರನ್ನು ಎಚ್ಚರಿಸಿದ್ದಾರೆ. ಮುಂದೆಯೂ ಹೀಗೆ ಬರೆಯಲೆಂದು,ಕನ್ನಡದ ಕಾವ್ಯ ಶ್ರೀಮಂತಿಕೆಗೆ ಕೊಡುಗೆ ಕೂಡಲೆಂದು ಕಸ್ತೂರಿ ಡಿ ಪತ್ತಾರ್ ಅವರಿಗೆ ಶುಭ ನುಡಿದಿದ್ದೇನೆ ಹೇಳಿದ್ದಾರೆ. ಡಾ. ಅಪ್ಪಗೆರೆ ತಿಮ್ಮರಾಜು ಗಾಯಕರು, ವಿದ್ವಾಂಸರು, ಬೆಂಗಳೂರು.

ಕಸ್ತೂರಿ ಡಿ ಪತ್ತಾರ ರವರು ಬರೆದಿರುವ ಭಾವ ಜೇನು ಭಾವಗೀತೆಗಳ ಕೃತಿಯಲ್ಲಿ ಸುಮಾರು ಅರವತ್ತಾರು ಭಾವಗೀತೆಗಳಿವೆ. ಪ್ರತಿಯೊಂದು ಭಾವಗೀತೆಯು ಕೂಡ ಲಯಬದ್ಧವಾಗಿ ಪ್ರಾಸಬದ್ದವಾಗಿ ಹಾಡಲು ಅನುಕೂಲವಾಗುವಂತೆ ಕವಯಿತ್ರಿ ಭಾವಗೀತೆಗಳನ್ನು ರಚನೆ ಮಾಡಿದ್ದಾರೆ.

ಈ ಭಾವಜೇನು ಕೃತಿಯ ಮೊದಲ ಕವಿತೆಯಾದ ಕನ್ನಡತಿಯ ಕರುಣೆ ಶೀರ್ಷಿಕೆಯ ಕವಿತೆಯಲ್ಲಿ ಕನ್ನಡ ನಾಡಿನ ಸಿರಿಯ ಬಗ್ಗೆ ಸೊಗಸಾಗಿ ಕವನ ರಚಿಸಿದ್ದಾರೆ.

ನಿನ್ನೊಲವು ಮೂಡಿ
ನೂರಾರು ಕವಿತೆಗೆ ಮುನ್ನುಡಿಯಾದೆ ತಾಯೇ
ನಿನ್ನೊಲುಮೆಯೂಡಿ
ನೂರಾರು ಕನ್ನಡ ಹೃದಯಕೆ ನೆಲೆಯಾದೆ.

ನೀನು ನನ್ನ ಮಾತೃಭಾಷೆಯಾಗಿ ನಿನ್ನ ಮೇಲಿನ ಒಲವು ಬಿಡಿಸಲಾರದ ಸಂಬಂಧವಾಗಿ ನೀನು ನೂರಾರು ಕವಿತೆಗಳಿಗೆ ಮುನ್ನುಡಿಯಾದೆ ತಾಯಿ. ನಿನ್ನಯ ಪ್ರೀತಿ ವಾತ್ಸಲ್ಯವು ಕೋಟಿ ಕೋಟಿ ಕನ್ನಡಿಗರ ನೆಲೆಯಾಗಿದೆ. ಡಕ್ಕಣ್ಣ ಜಕ್ಕಣದ ತ್ಯಾಗವಂತು ಮರೆಯಲು ಸಾಧ್ಯವಿಲ್ಲ. ಮನೆ ಮಡದಿ ಸಂಸಾರವನು ಮರೆತು ನಿನ್ನ ನೆಲೆಯನ್ನು ಕನ್ನಡದ ಕಾವ್ಯದ ನೆಲೆಯನ್ನು ಶಿಲ್ಪ ಕಲೆಯ ತವರಾಗಿ ಮಾಡಿದರು. ಕೆಚ್ಚೆದೆಯ ಹೋರಾಟಗಾರರಿಗೆ ಜನ್ಮನೀಡಿತು ನಿನ್ನ ಮಡಿಲು, ನಿನ್ನ ಕೀರ್ತಿ ಪತಾಕೆಯನು ಜಗದಲ ವಿಸ್ತಾರವಾಯಿತು. ಅಮೃತವ ಸವಿಯಂತಹ ಕನ್ನಡ ಭಾಷೆಯನ್ನು ಸಿಹಿಯಾಗಿ ಸವಿದು ಇಂದಿರಾ ತ್ರಿವೇಣಿ ತ ರಾ ಸು ಕುವೆಂಪು ಬೇಂದ್ರೆ ಮಾಸ್ತಿಯವರು ಕಟ್ಟಿದ ಕಥೆ ಕಾದಂಬರಿ ಕಾವ್ಯದ ಅಮೃತಧಾರೆ ಕನ್ನಡ ಕನ್ನಡ ಎಂದು ಪ್ರಪಂಚದುದ್ದಕ್ಕೂ ಪಸರಿಸುತಿದೆ ಎಂದು ಭಾವಗಳನ್ನು ತುಂಬಿ ಭಾವಗೀತೆಯಾಗಿಸಿದ್ದಾರೆ.

ವಿದ್ಯೆ ಯಾರ ಸೊತ್ತು ಅಲ್ಲ
ಅವರವರ ಪರಿಶ್ರಮದ ಫಲ
ಸಾಧಕ-ಸಾಧನೆಗೆ ಜಾತಿ ಬೇಕೆ?
ಜಾತಿ ಭೂತದ ಮಧ್ಯೆ ಸಿಲುಕಿ
ಮೌಲ್ಯ ಕಳೆ ಕಳೆದುಕೊಂಡು
ಕುಸಿಯುತ್ತಿದೆ ವಿದ್ಯೆ.

ಅನಾದಿ ಕಾಲದಲ್ಲಿ ಮನುಷ್ಯ ಮನುಷ್ಯರ ನಡುವೆ ಇದ್ದ ಜಾತಿಮತಗಳ ಪದ್ದತಿ ಈಗ ಶಿಕ್ಷಣ ಕ್ಷೇತ್ರಕ್ಕೂ ಕೂಡ ಕಾಲಿಟ್ಟಿದೆ. ಜಾತಿ ವಿಜಾತಿಗಳು ಎಂದು ಬೇಪ೯ಡಿಸುತ್ತಾ ಶಿಕ್ಷಣ ವ್ಯವಸ್ಥೆಯೂ ಕೂಡ ತನ್ನ ಮೌಲ್ಯಗಳನ್ನು ಕಳೆದು ಕೊಳ್ಳುತ್ತಿದೆ. ಸತ್ಯ ಸಂಸ್ಕೃತಿ ನೀತಿಯನ್ನು ಆಳಸಿ ಹಾಕಿ ಅದಶ೯ಗಳನ್ನು ಹೊತ್ತು ಮನೆಯನ್ನು ಬೆಳಗುತ್ತಿದ್ದ ದೀಪವನ್ನು ಆರಿಸಿ,ಮಹಾ ಸಭ್ಯರಂತೆ ಬದುಕುತ್ತಿದ್ದಾರೆ ಕೆಲವರು ಈ ಭೂಮಿಯ ಮೇಲೆ. ಆತ್ಮವಿಮ೯ಶೆಯನ್ನು ಮಾಡಬೇಕಿದ್ದ ವಿದ್ಯಾಸೌಧಗಳು ಸಟಿ೯ಫೀಕೆಟ್ ಮಾರುವ ಅಂಗಡಿಗಳಾಗಿವೆ. ವಿದ್ಯೆಯೆನ್ನುವುದು ಯಾರಪ್ಪನ ಸೊತ್ತು ಅಲ್ಲ, ಅದನ್ನು ಪಡೆಯಲು ಸಾಧನೆ ಬೇಕು ಪರಿಶ್ರಮ ಬೇಕು. ಇಂತಹ ವಿದ್ಯೆಯನ್ನು ಕಲಿತು ಸಾಧನೆ ಮಾಡಲು ಜಾತಿ ಬೇಕೆ? ಎಂದು ಈ ಜಾತಿವ್ಯವಸ್ಥೆಯ ಸಮಾಜವನ್ನು ಕವಯಿತ್ರಿ ಪ್ರಶ್ನಿಸುತ್ತಾ ಇಂತಹ ವ್ಯವಸ್ಥೆಗಳ ಮಧ್ಯ ಸಿಲುಕಿದ ವಿದ್ಯೆ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ ಎಂದು ಬಹು ಮಾಮಿ೯ಕವಾಗಿ ಜಾತಿ ಎಂಬ ಶೀರ್ಷಿಕೆಯ ಕವಿತೆಯನ್ನು ಕಟ್ಟಿದ್ದಾರೆ.

ಅಸೆ ಆಮಿಷ ಅಹಂಕಾರ
ಎಲ್ಲಾವು ಗಂಡಿಗೆ ಮಾತ್ರ
ಶ್ರಮ ತಾಳ್ಮೆ ಸಹಭಾಳ್ವೆ ಹೆಣ್ಣಿಗೆ ಮಾತ್ರ
ಜೀತದಾಳುವಿನ ಹಾಗೇ ನಮ್ಮ ಬಾಳು
ದುಡಿದರು ಕಿರುಕುಳ,ದುಡಿಯದಿದ್ದರೂ ಕಿರುಕುಳ
ಕ್ಷೀಣವಾಗಿದೆ ದೇಹ ಮನ
ಸಾಕು ಶೋಷಿತ ಹೆಣ್ಣು ಬದುಕು
ಬೇಕು ಸಮಾನತೆಯ ಬೆಳಕು

ಈ ಕವಿತೆಯನ್ನು ಕವಯಿತ್ರಿ ಪುರುಷ ಪ್ರಧಾನವಾದ ಸಮಾಜದಲ್ಲಿ ಮಹಿಳೆ ಯಾವ ರೀತಿಯಲ್ಲಿ ಪುರುಷನಿಂದ ಕುಟುಂಬದಿಂದ ಶೋಷಣೆಗೆ ಒಳಪಡುತ್ತಾಳೆ ಎಂಬುದನ್ನು ಅದ್ಬುತವಾಗಿ ಮನೋವೇದನೆಯಂತೆ ನಿರೂಪಿಸಿದ್ದಾರೆ.
ಪುರುಷನಿಂದ ಕುಟುಂಬದ ನಿವ೯ಹಣೆಯಿಂದ ಈ ಬದುಕು ಸಾಗಿದೆ. ನಗುತ್ತಾ ಮಾತನಾಡಿ ಅದೆಷ್ಟೋ ದಿನಗಳು ಆದವು.ದಿನವೂ ಹಾರಾಟ ಆಣಕದ ಮಾತು ಎಲ್ಲಾವನ್ನು ಸಹಿಸಿಕೊಂಡು ಮರದಂತೆ ಬದುಕಿ ಎಲ್ಲಾರಿಗೂ ತಂಪಾದ ಗಾಳಿಯ ಉಸಿರು ನೀಡಬೇಕಾಗಿದೆ.

ಇಲ್ಲಿ ಅಸೆ ಆಹಂಕಾರ ಎಲ್ಲಾವೂ ಕೂಡ ಗಂಡಸಿಗೆ ಮಾತ್ರ ಸೀಮಿತವಾಗಿದೆ. ಶ್ರಮ ಎಲ್ಲಾವನ್ನು ಸಹಿಸಿಕೊಳ್ಳುವ ತಾಳ್ಮೆ ಮನೆಯೊಳಗೆ ಜೀತದಾಳುವಿನಂತೆ ದುಡಿಯುವ ಕೆಲಸ ಮಾತ್ರ ಮಹಿಳೆಯದ್ದಾಗಿದೆ. ಹೇಗೆ ಇದ್ದರೂ ಕೂಡ ಕಿರುಕುಳ ತಪ್ಪಿಲ್ಲ, ಈ ಎಲ್ಲಾ ಕಾರಣಗಳಿಂದಾಗಿ ದೇಹ ಮನಸ್ಸು ಕ್ಷೀಣವಾಗಿದೆ. ಸಾಕು ಇನ್ನೂ ಈ ಹೆಣ್ಣಿನ ಶೋಷಿತ ಬದುಕು ಮಹಿಳೆಗೂ ಕೂಡ ಸಮಾನತೆಯು ಬೇಕು ಎಂದು ಮಹಿಳಾ ಪರವಾದ ಕಾವ್ಯ ಚಿಂತನೆಯನ್ನು ಕವಯಿತ್ರಿ ಗುಪ್ತ ಶೋಷಣೆ ಎಂಬ ಶೀರ್ಷಿಕೆಯ ಕವಿತೆಯಲ್ಲಿ ತೋಡಿಕೊಂಡಿದ್ದಾರೆ.

ಮರಳಿ ಬಾ ಮಲೆನಾಡ ಕನ್ನಡ ಕವಿವಯ೯
ಅಡಿಗಡಿಗೂ ಇಂದು ಕನ್ನಡ ನುಡಿ ಮಲೀನವಾಗುತಿದೆ
ಪರಭಾಷೆಯ ಪಾಪಾಸ್ ಕಳ್ಳಿ ತಲೆ ಎತ್ತಿ ನಿಂತಿದೆ
ಪರ ಭಾಷಾ ಭ್ರಮೆ ಬಿಡಿಸಲು
ಬಾ ಮತ್ತೊಮ್ಮೆ ಕುಪ್ಪಳಿಯ ಕುಡಿ ಬಳ್ಳಿಯೇ

ಕವಯಿತ್ರಿ ಈ ಭಾವಜೇನು ಭಾವಗೀತೆಗಳ ಕೃತಿಯಲ್ಲಿ ಇ ನಾಡಿನ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಜನ ಮೌಢ್ಯಗಳ ಬಗ್ಗೆ ಜಾತಿ ಧಮ೯ದ ಬಗ್ಗೆ ಕ್ರಾಂತಿಯುತವಾದ ಬರಹಗಳನ್ನು ಬರೆದಂತಹ ಕುವೆಂಪು ಬಗ್ಗೆಯು ಕವಿತೆಯನ್ನು ಬರೆಯುತ್ತಾ ಕನ್ನಡ ನಾಡಿನಲ್ಲಿ ಈಗ ಕನ್ನಡ ಭಾಷೆ ಆಡಿಆಡಿಗೂ ಮಲೀನವಾಗುತ್ತಿದ್ದೆ. ಈ ನಾಡಿನಲ್ಲಿ ಪರ ಭಾಷೆಗಳು ಪಾಪಸ್ ಕಳ್ಳಿಯಂತೆ ಬೆಳೆಯುತಿದೆ ಕನ್ನಡದ ಜನರಲ್ಲಿ ಪರಭಾಷೆಯ ವ್ಯಾಮೋಹವನ್ನು ಬಿಡಿಸಲು ಮತ್ತೊಮ್ಮೆ ಕುಪ್ಪಳ್ಳಿಯ ಕುಡಿಯಾಗಿ ಹುಟ್ಟಿ ಬಾ, ನಿತ್ಯ ನೂತನ ಮಹಾಮಂತ್ರದಂತೆ ಭೋದಿಸುತ್ತಾ ಕನ್ನಡ ಭಾಷೆಯ ಕರಾಳತೆಯನ್ನು ತೊಲಗಿಸಲು ಮತ್ತೊಮ್ಮೆ ಈ ನಾಡಿನಲ್ಲಿ ಹುಟ್ಟಿ ಬಾ, ಕನ್ನಡ ರಸಕಾವ್ಯದ ತೀಥ೯ವನ್ನು ಚಿಮುಚಿಸಿ ಭೋದಿಸಲು ಕವಿಯಾಗಿ ರವಿಯಾಗಿ ಶಶಿಯಾಗಿ ಧೃವತಾರೆಯಾಗಿ ಬಂದು ಕನ್ನಡ ಭಾಷೆಯನ್ನು ಉಳಿಸಿ ಎಂದು ಕವಿತೆಯ ಮೂಲಕ ಕನ್ನಡ ಭಾಷೆಯ ಮೇಲಿರುವ ಅಭಿಮಾನವನ್ನು ತೋಪ೯ಪಡಿಸಿದ್ದಾರೆ.

ಶ್ರೀಮತಿ ಕಸ್ತೂರಿ ಡಿ ಪತ್ತಾರ ಬರೆದಿರುವ ಭಾವ ಜೇನು ಭಾವಗೀತೆಗಳ ಕೃತಿಯಲ್ಲಿನ ಈ ಕವಿತೆಗಳಲ್ಲದೆ ಜೀವಜಲ, ನಾಡು ಪಾಡು, ತಾಯಿನುಡಿ ಸಂಕ್ರಾಂತಿ ಸಂಭ್ರಮ , ಇನಿದನಿ ಭತ್ತದ ಭಾವನೆ ಈ ಎಲ್ಲಾ ಕವಿತೆಗಳು ಸೊಗಸಾಗಿವೆ. ಎಲ್ಲಾ ಕವಿತೆಗಳನ್ನು ಪರಿಚಯ ಮಾಡಿದರೆ ಓದುಗನಲ್ಲಿ ಓದುವ ಅಸಕ್ತಿ ಕಡಿಮೆಯಾಗಬಹುದು ಅದ್ದರಿಂದ ಕೆಲವೊಂದು ಕವಿತೆಗಳನ್ನು ಪರಿಚಯ ಮಾಡಿರುವೆ ದಯವಿಟ್ಟು ಕನ್ನಡದ ಅಭಿಮಾನಿಗಳು ಈ ಭಾವ ಜೇನು ಕೃತಿಯನ್ನು ಕೊಂಡು ಓದಿ ಕವಯಿತ್ರಿಯನ್ನು ಪ್ರೋತ್ಸಾಹಿಸಿ ಎಂದು ಕೇಳಿಕೊಳ್ಳುವೆ.

ಆತ್ಮೀಯವಾಗಿ ಪುಸ್ತಕವನ್ನು ಕೊಟ್ಟು, ನಿಮ್ಮ ಕೃತಿಯನ್ನು ಓದುವ ಭಾಗ್ಯ ನನ್ನದಾಗಿಸಿದಕ್ಕೆ ಧನ್ಯವಾದಗಳು. ನಿಮ್ಮಿಂದ ಇನ್ನೂ ಹತ್ತಾರು ಕೃತಿಗಳು ಕನ್ನಡಮ್ಮನ ಮಡಿಲನ್ನು ಸೇರಲಿ. ಈ ಕೃತಿಯು ನಿಮಗೆ ಹೆಸರನ್ನು ತಂದುಕೊಡಲಿ ನಿಮಗೆ ಗೌರವಧಾರಗಳು ಲಭಿಸಲಿ ಎಂದು ಹಾರೈಸುವೆ.

ನಾರಾಯಣಸ್ವಾಮಿ .ವಿ
ಮಾಸ್ತಿ ಕೋಲಾರ ಜಿಲ್ಲೆ

Leave A Reply

Your email address will not be published.