deshadoothanews

ಗ್ರಾಮ ಆಡಳಿತ ಅಧಿಕಾರಿಗಳ ವೃತ್ತಿ ಬುನಾದಿ ತರಬೇತಿಗೆ ಚಾಲನೆ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್.
ಕೊಪ್ಪಳ  (ಕರ್ನಾಟಕ ವಾರ್ತೆ): ಹೊಸದಾಗಿ ಸೇವೆಗೆ ಸೇರಿದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಕೊಪ್ಪಳ ಜಿಲ್ಲಾ ತರಬೇತಿ ಸಂಸ್ಥೆಯಿಂದ ಹಮ್ಮಿಕೊಂಡ 35 ದಿನಗಳ ವೃತ್ತಿ ಬುನಾದಿ ತರಬೇತಿ ಚಾಲನಾ ಕಾರ್ಯಕ್ರಮವು ನಗರದ ತಹಶೀಲ್ದಾರರ ಕಚೇರಿ ಆವರಣದ ವಿಜ್ಞಾನ ಭವನದಲ್ಲಿ ಜೂನ್ 12ರಂದು ನಡೆಯಿತು.

ಗ್ರೇಡ್-2 ತಹಶೀಲ್ದಾರರಾದ ಗವಿಸಿದ್ದಪ್ಪ ಮಣ್ಣೂರು ಅವರು ಮಾತನಾಡಿ, ನೂತನವಾಗಿ ಸರಕಾರಿ ಸೇವೆಗೆ ಸೇರುವ ಪ್ರತಿಯೊಬ್ಬರಿಗೂ ವೃತ್ತಿ ಬುನಾದಿ ತರಬೇತಿ ಅವಶ್ಯಕವಾಗಿದೆ. ಗ್ರಾಮ ಆಡಳಿತಾಧಿಕಾರಿಗಳಾಗಿ ನೇಮಕಗೊಂಡ ಶಿಬಿರಾರ್ಥಿಗಳು ಈ ತರಬೇತಿಯ ಸದುಪಯೋಗವನ್ನು ಪಡೆದುಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಸಿದ್ಧರಾಗಬೇಕು ಎಂದು ಹೇಳಿದರು.


ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಅವರು ಮಾತನಾಡಿ, ಸರ್ಕಾರಿ ನೌಕರಿಗೆ ಸೇರುವ ಪ್ರತಿಯೊಬ್ಬರಿಗೂ ತರಬೇತಿ ಅತ್ಯವಶ್ಯ. ತರಬೇತಿ ಸಿಗದೇ ಇದ್ದಲ್ಲಿ ತಪ್ಪುಗಳಾಗುವ ಸಂಭವವಿರುತ್ತದೆ. ಶಿಸ್ತಿನಿಂದ, ಅಚ್ಚುಕಟ್ಟಾಗಿ ಕಡತ ನಿರ್ವಹಣೆ ಮಾಡುವುದರಿಂದ ಜನರಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಬಗ್ಗೆ ಗೌರವಭಾವ ಹೆಚ್ಚುತ್ತದೆ. ನೌಕರರಿಗೂ ಸಾರ್ಥಕ ಸೇವಾನುಭವದ ತೃಪ್ತಿ ಸಿಗುತ್ತದೆ ಎಂದರು. ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಚ್ಚುಕಟ್ಟಾಗಿ ತರಬೇತಿ ಏರ್ಪಾಡು ಮಾಡಿದ ಕೃಷ್ಣಮೂರ್ತಿ ದೇಸಾಯಿ ಅವರ ಶ್ರಮ ಶ್ಲಾಘನೀಯ ಎಂದರು. ಸಂಪನ್ಮೂಲ ವ್ಯಕ್ತಿಗಳಾದ ಅಡಿವೆಪ್ಪ ಮತ್ತೂರು ಅವರು ಮಾತನಾಡಿ, ಸರಕಾರಿ ಸೇವೆಗೆ ಸೇರುವ ಪ್ರತಿಯೊಬ್ಬರು ಸೇವಾ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು. ಒತ್ತಡಕ್ಕೆ ಒಳಗಾಗಿ ಕೆಲಸ ಮಾಡಬಾರದು. ಕಾನೂನು ನಿಯಮದಂತೆ ಕಡತಗಳ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.

ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ ಅವರು ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿರಸ್ತೆದಾರರು ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಲಾಯಕ್ ಅಲಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ವಿಜ್ಞಾನ ಭವನ ಉಸ್ತುವಾರಿ ಅಧಿಕಾರಿ ಶಿವಾನಂದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ತರಬೇತಿ ಸಂಸ್ಥೆಯ ಬೋಧಕ ಶ್ರೀಧರ್ ಅವರು ನಿರೂಪಿಸಿದರು.

Leave A Reply

Your email address will not be published.