deshadoothanews

ಸಂಶಯಾಸ್ಪದ ವಾಂತಿ-ಭೇದಿ ಪ್ರಕರಣ: ತುಮ್ಮರಗುದ್ದಿ ಗ್ರಾಮಕ್ಕೆ ಡಿಹೆಚ್ಓ ಭೇಟಿ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್.
ಕೊಪ್ಪಳ  (ಕರ್ನಾಟಕ ವಾರ್ತೆ): ಸಂಶಯಾಸ್ಪದ ವಾಂತಿ-ಭೇದಿ ಪ್ರಕರಣ ಕಂಡು ಬಂದ ಪ್ರಯುಕ್ತ ಯಲಬುರ್ಗಾ ತಾಲೂಕಿನ ಬಳೂಟಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ತುಮ್ಮರಗುದ್ದಿ ಗ್ರಾಮಕ್ಕೆ ಜೂನ್ 12ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಅಲಕನಂದಾ ಮಳಗಿ ಅವರು ಭೇಟಿ ನೀಡಿದರು.

ವಾಂತಿ-ಭೇದಿ ಪ್ರಕರಣಗಳ ಬಗ್ಗೆ ಡಿ.ಹೆಚ್.ಓ ಅವರು, ಸಂಬಂಧಪಟ್ಟ ವೈದ್ಯಾಧಿಕಾರಿಗಳು, ಮೇಲ್ವಿಚಾರಕರು, ಕ್ಷೇತ್ರ ಸಿಬ್ಬಂದಿಗಳಿಗೆ ಚರ್ಚಿಸಿದರು. ಕುಡಿಯುವ ನೀರಿನ ಪೈಪ್‌ಲೈನ್‌ಗಳ ವೀಕ್ಷಣೆ ಮಾಡಿ, ನೀರಿನ ಮೂಲಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಬೇಕು. ಯೋಗ್ಯವಲ್ಲದ ನೀರನ್ನು ಶುದ್ಧಿಕರಿಸಿ (ಕ್ಲೋರಿನೇಶನ್) ಮಾಡಿಸುವ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಮಾರ್ಗದರ್ಶನ ನೀಡಬೇಕು ಎಂದು ಸೂಚನೆ ನೀಡಿದರು.

ಗ್ರಾಮದ ಎಲ್ಲಾ ಮನೆಗೂ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿಗಳು ಭೇಟಿ ನೀಡಿ, ಸಮೀಕ್ಷೆ ಮಾಡಿ, ಸಾರ್ವಜನಿಕರಿಗೆ ಕುದಿಸಿ ಆರಿಸಿದ ನೀರನ್ನು ಕುಡಿಯುವಂತೆ, ಶೌಚಾಲಯ ಬಳಸುವಂತೆ ಮತ್ತು ಮನೆ ಸುತ್ತ-ಮುತ್ತ ಸ್ವಚ್ಛತೆ ಕಾಪಾಡುವಂತೆ ಅರಿವು ಮೂಡಿಸುವಂತೆ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು.


*ಗ್ರಾಮದ ಮುಖಂಡರ ಜೊತೆ ಚರ್ಚೆ:* ಇದೇ ವೇಳೆ ಗ್ರಾಮದ ಮುಖಂಡರ ಜೊತೆ ಚರ್ಚಿಸಿ, ಕುಡಿಯುವ ನೀರಿನ ಮೂಲಗಳ ಬಗ್ಗೆ, ಸ್ವಚ್ಛತೆ ಬಗ್ಗೆ ಕಾಳಜಿವಹಿಸಿ, ಖಾಯಿಲೆ ಉಲ್ಬಣವಾಗದಂತೆ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.

ತುಮ್ಮರಗುದ್ದಿ ಗ್ರಾಮದಲ್ಲಿ ತುರ್ತು ಚಿಕಿತ್ಸಾ ಕೇಂದ್ರ ತೆರೆದು ಚಿಕಿತ್ಸೆ ನೀಡುವಂತೆ ಮತ್ತು ಆಂಬ್ಯುಲೆನ್ಸ್ ವಾಹನ ನಿಯೋಜಿಸುವಂತೆ, ತಾಲೂಕಾ ಆರೋಗ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಮೇಲ್ವಿಚಾರಕರು, ಕ್ಷೇತ್ರ ಸಿಬ್ಬಂದಿಯವರು ಒಂದು ವಾರದ ವರೆಗೆ ಪ್ರತಿದಿನ ಪ್ರಕರಣಗಳ ವರದಿಯನ್ನು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕರಿಗಳಾದ ಡಾ.ಸುಮಾ ಪಾಟೀಲ್ ಸೇರಿದಂತೆ ಮೇಲ್ವಿಚಾರಕ ವರ್ಗದವರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave A Reply

Your email address will not be published.