deshadoothanews

ಸಿಂಗಟಾಲೂರು ಏತ ನೀರಾವರಿ ಯೋಜನೆ ಸಾಕಾರಕ್ಕೆ ಬದ್ಧ – ಕೆ.ರಾಘವೇಂದ್ರ ಹಿಟ್ನಾಳ – ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್ ಸರಕಾರ ಬದ್ಧ – ಅಪೂರ್ಣಗೊಂಡ ಕಾಮಗಾರಿಗಳಿಗೆ ಮತ್ತೇ ಚಾಲನೆ – ವಿವಿಧ ಗ್ರಾಮದಲ್ಲಿ ಶಾಸಕರಿಗೆ ಅದ್ದೂರಿ ಸ್ವಾಗತ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕೊಪ್ಪಳ :
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಪೂರ್ಣಗೊಂಡಿರುವ ಸಿಂಗಟಾಲೂರು,ಅಳವಂಡಿ-ಬೆಟಗೇರಿ ಏತ ನೀರಾವರಿ ಸೇರಿದಂತೆ ವಿವಿಧ ನೀರಾವರಿ ಯೋಜನೆಗಳನ್ನು ಕಾಂಗ್ರೆಸ್ ಸರಕಾರದ ಅವಧಿಯಲ್ಲೇ ಪೂರ್ಣಗೊಳಿಸಿ, ರೈತರ ಜಮೀನಿಗೆ ನೀರು ಹರಿಸುತ್ತೇನೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ತಾಲೂಕಿನ ಅಳವಂಡಿ ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಗುಡಗೇರಿ, ಕವಲೂರು, ಮುರ್ಲಾಪುರ, ಘಟ್ಟರೆಡ್ಡಿಹಾಳ, ಬೆಳಗಟ್ಟಿ, ರಘುನಾಥನಹಳ್ಳಿ, ಹಟ್ಟಿ, ಹೈದರನಗರ, ಕೇಸಲಾಪುರ, ಹಲವಾಗಲಿ ಮತ್ತು ನಿಲೋಗಿಪುರ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡ ಕ್ಷೇತ್ರದ ಜನತೆಗೆ ಕೃತಜ್ಞತಾ ಮತ್ತು ಅಹವಾಲು ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಿಂಗಟಾಲೂರು ಏತ ನೀರಾವರಿ ಹಾಗೂ ಉಳಿದಿರುವ ಯೋಜನೆಗಳನ್ನು ಪೂರ್ಣಗೊಳಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ. ಚುನಾವಣೆಯಲ್ಲಿ ಕ್ಷೇತ್ರದ ಜನತೆಗೆ ನೀಡಿದ ಆಶ್ವಾಸನೆಯಂತೆ ನುಡಿದಂತೆ ನಡೆಯುತ್ತೇನೆ. ಅಪೂರ್ಣಗೊಂಡ ಎಲ್ಲ ನೀರಾವರಿ ಯೋಜನೆಗಳಿಗೆ ಅನುದಾನ ನೀಡುವಂತೆ ಈಗಾಗಲೇ ಜಲಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲೇ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ, ಕೊಪ್ಪಳ ಕ್ಷೇತ್ರವನ್ನು ನೀರಾವರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದರು.

ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿ ಶಾಸಕನಾಗಿ ಆಯ್ಕೆ ಮಾಡಿದ ಕ್ಷೇತ್ರದ ಜನತೆಗೆ ನಾನೆಂದಿಗೂ ಋಣಿಯಾಗಿರುತ್ತೇನೆ.
ಕಳೆದ ಎರಡು ಚುನಾವಣೆಗಿಂತ ಈ ಬಾರಿ ಅತ್ಯಧಿಕ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿದ್ದೀರಿ. ಕ್ಷೇತ್ರದ ಜನರ ಪ್ರೀತಿ, ಅಭಿಮಾನಕ್ಕೆ ಚ್ಯುತಿಬಾರದಂತೆ ಕೆಲಸ ಮಾಡುವೆ. ನಿಮ್ಮ ಗ್ರಾಮದಲ್ಲಿ ಏನೆ ಸಮಸ್ಯೆ ಇದ್ದರೂ ಗಮನಕ್ಕೆ ತನ್ನಿ. ಪ್ರತಿಯೊಂದು ಗ್ರಾಮದ ಅಭುದ್ಯಯಕ್ಕೆ ನನಗೆ ಸಹಕಾರ ನೀಡಿ ಎಂದು ತಿಳಿಸಿದರು.
ಮಹಿಳಾ ಸಬಲೀಕರಣಕ್ಕೆ ಬದ್ಧ: ವಿಧಾನಸಭೆ ಚುನಾವಣೆ ಪೂರ್ವ ಕಾಂಗ್ರೆಸ್‌ ಪಕ್ಷ ನೀಡಿದ್ದ ಐದು ಗ್ಯಾರಂಟಿಗಳಿಗೆ ನಮ್ಮ ಸರಕಾರ ಮುದ್ರೆ ಒತ್ತುವ ಮೂಲಕ ಕಾಂಗ್ರೆಸ್‌ ಸರಕಾರ ಮತ್ತೆ ನುಡಿದಂತೆ ನಡೆದು ಸಾಬೀತು ಪಡಿಸಿದೆ. ಈಗಾಗಲೇ ಸರಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಶಕ್ತಿ ಯೋಜನೆಗೆ ಜೂ.11ರಂದು ಸಿಎಂ ಸಿದ್ದರಾಮಯ್ಯನವರು ಚಾಲನೆ ನೀಡಿದ್ದಾರೆ. ಜು.1ರಂದು ಅನ್ನಭಾಗ್ಯ ಯೋಜನೆಯಡಿ ಪ್ರತಿ ಸದಸ್ಯನಿಗೆ 10 ಕೆಜಿ ಅಕ್ಕಿ ಯೋಜನೆಗೆ ಚಾಲನೆ ನೀಡಲಾಗುವುದು‌‌. ಅಲ್ಲದೇ ಮನೆಯ ಯಜಮಾನಿಗೆ 2 ಸಾವಿರ(ಗೃಹಲಕ್ಷಿತ್ರ್ಮೕ), ಪ್ರತಿ ಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌(ಗೃಹ ಜ್ಯೋತಿ), ಪದವೀಧರರಿಗೆ 3 ಸಾವಿರ, ಡಿಪ್ಲೋಮಾ ಪದವೀಧರರಿಗೆ 1.500(ಯುವ ನಿ​ಧಿ), ಯನ್ನು ಜಾರಿ ಮಾಡುತ್ತೇವೆ ಎಂದರು.

ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳ ಬಗ್ಗೆ ಅಪಹಾಸ್ಯ ಮಾಡುತ್ತಿರುವ ಬಿಜೆಪಿ ನಾಯಕರಿಗೆ ಜನರೆ ತಕ್ಕಪಾಠ ಕಲಿಸುತ್ತಾರೆ. ಐದು ಗ್ಯಾರಂಟಿ ಜಾರಿಯಿಂದ ಬಿಜೆಪಿಗರು ಹತಾಶರಾಗಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸವಾಗಲಿಲ್ಲ. ಭ್ರಷ್ಟಾಚಾರ, ಕಮಿಷನ್ ಮೂಲಕವೇ ದೇಶದಲ್ಲಿ ರಾಜ್ಯದ ಮರ್ಯಾದೆಯನ್ನು ಹರಾಜುಕತೆ ಮಾಡಿದ್ದಾರೆ. ಹೀಗಾಗಿ ಜನರು ಇವರಿಗೆ ತಕ್ಕಪಾಠ ಕಲಿಸಿ, ಮನೆಗೆ ಕಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಭಿವೃದ್ಧಿಗೆ ಬದ್ಧ: ಕಾಂಗ್ರೆಸ್ ಸರಕಾರದ ಅವಧಿಯ ಈ ಐದು ವರ್ಷಗಳಲ್ಲಿ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವೆ. ಸರಕಾರದಿಂದ ಹೆಚ್ವಿನ ಅನುದಾನ ತಂದು ಎಲ್ಲ ಕಾಮಗಾರಿಗಳನ್ನು ಜಾರಿಗೊಳಿಸುತ್ತೇನೆ. ಶಿಕ್ಷಣ, ಆರೋಗ್ಯ, ಬಡಜನರಿಗೆ ಸೂರು
ಕಲ್ಪಿಸುತ್ತೇನೆ ಎಂದರು.

22.18 ಕೋಟಿ 14 ಕೆರೆಗಳನ್ನ ತುಂಬಿಸುವ ಯೋಜನೆ ಶೀಘ್ರದಲ್ಲಿ ಅಡಿಗಲ್ಲು: ಮುಂಡರಗಿ ಶಾಖ ಕಾಲುವೆಯಿಂದ ಅಂತರ್ಜಲ ಭರ್ತಿ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಉದ್ದೇಶದಿಂದ ಕೊಪ್ಪಳ ತಾಲ್ಲೂಕಿನ 14 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅಂದಾಜು ಮೊತ್ತ 22 ಕೋಟಿ 18 ಲಕ್ಷ ಇ ಯೋಜನೆಯಲ್ಲಿ ಕವಲೂರು ಗ್ರಾಮದ 3 ಕೆರೆಗಳುˌಘಟ್ಟರಡ್ಡಿಹಾಳ ಕೆರೆˌಮುರ್ಲಾಪುರ ಕೆರೆˌ ಬೆಳಗಟ್ಟಿ ಕೆರೆˌ ಹಟ್ಟಿ ಕೆರೆ ˌಅಳವಂಡಿಯ 2 ಕೆರೆಗಳುˌ ಮೊರನಹಳ್ಳಿ ಗ್ರಾಮದ 2 ಕೆರೆಗಳು ˌಬೇಟಗೇರಿ ಕೆರೆˌ ಹಿರೇಸಿಂದೋಗಿ ಕೆರೆ ಹಂದ್ರಾಳ ಕೆರೆ ಹಾಗೂ ಕೋಳುರು ಕೆರೆಗಳನ್ನ ಒಳಗೊಂಡ ಯೋಜನೆ ಇದಾಗಿದ್ದು ಶೀಘ್ರದಲ್ಲಿ ಈ ಯೋಜನೆಗೆ ಅಡಿಗಲ್ಲು ನೆರವೇರಿಸಿ ಕಾಮಗಾರಿಯನ್ನ ಪ್ರಾರಂಭ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಬಿ. ನಾಗರಳ್ಳಿ, ಜಿಪಂ ಮಾಜಿ ಸದಸ್ಯ ಪ್ರಸನ್ನ ಗಡಾದ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜುಲ್ಲು ಖಾದ್ರಿ, ತಾಪಂ ಮಾಜಿ ಅಧ್ಯಕ್ಷ ಬಾಲಚಂದ್ರನ್,ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣರಡ್ಡಿ ಗಲಭಿ ಡಂಬ್ರಳ್ಳಿ, ಮುಖಂಡರಾದ ಭರಮಪ್ಪ ನಗರ, ವೆಂಕನಗೌಡ್ರು ಹಿರೇಗೌಡ್ರು, ಎಸ್ಸಿ ಘಟಕದ ಜಿಲ್ಲಾ ಅಧ್ಯಕ್ಷ ಗಾಳೆಪ್ಪ ಪೂಜಾರ್, ಶಿವಕುಮಾರ್ ಪಾವಲಿಶೆಟ್ಟರ್, ಗುರುಬಸವರಾಜ್ ಹಳ್ಳಿಕೇರಿ, ಭೀಮಣ್ಣ ಬೋಚನಳ್ಳಿ, ತೋಟಪ್ಪ ಹಟ್ಟಿ, ಹನಮಂತಪ್ಪ ಜಲವರ್ಧನಿ, ರಾಮಣ್ಣ ಕಲ್ಲನವರ್,ಜ್ಯೋತಿ ಗೊಂಡಬಾಳ, ನಿಂಗಪ್ಪ ಅವೊಜಿ,ತಹಸೀಲ್ದಾರ್ ಅಮರೇಶ ಬಿರಾದಾರ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದುಂಡೇಶ್ ತುರಾದಿ,ವಕ್ತಾರ ಕುರ್ಗೋಡ್ ರವಿ,ಅಕ್ಬರ್ ಪಲ್ಟಾನ್ ಸೇರಿದಂತೆ ಅನೇಕ ತಾಲೂಕು ಮಟ್ಟದ ಅಧಿಕಾರಿಗಳ ಉಪಸ್ಥಿತರಿದ್ದರು.

Leave A Reply

Your email address will not be published.