deshadoothanews

ತುರ್ತು ಚಿಕಿತ್ಸಾ ಕೇಂದ್ರಕ್ಕೆ ಡಿಹೆಚ್ಓ ಭೇಟಿ: ಆರೋಗ್ಯ ವಿಚಾರಣೆ

ಡಿ ಡಿ ನ್ಯೂಸ್. ಕೊಪ್ಪಳ

0

 

ಡಿ ಡಿ ನ್ಯೂಸ್.  ಕೊಪ್ಪಳ  (ಕರ್ನಾಟಕ ವಾರ್ತೆ): ಜಿಲ್ಲೆಯ ಕುಷ್ಟಗಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ದೋಟಿಹಾಳ ವ್ಯಾಪ್ತಿಯ ಬಿಜಕಲ್, ಮುದೇನೂರು ವ್ಯಾಪ್ತಿಯ ಜುಮಲಾಪುರ, ಸಾಸ್ವಿಹಾಳ ಹಾಗೂ ಯಲಬುರ್ಗಾ ತಾಲೂಕಿನ ಗುನ್ನಾಳ ವ್ಯಾಪ್ತಿಯ ಬುಡಕುಂಟಿ, ಯಡ್ಡೊಣಿ, ಮೂಸಲಾಪುರ ವ್ಯಾಪ್ತಿಯ ಬಸರಿಹಾಳ ಗ್ರಾಮಗಳಲ್ಲಿ ಸಂಶಯಾಸ್ಪದ ವಾಂತಿ-ಭೇದಿ ಪ್ರಕರಣಗಳು ಕಂಡು ಬಂದ ಹಿನ್ನೆಲೆ ಈ ಗ್ರಾಮಗಳಲ್ಲಿ ಪ್ರಾರಂಭಿಸಿದ ತುರ್ತು ಚಿಕಿತ್ಸಾ ಕೇಂದ್ರಗಳಿಗೆ ಜೂನ್ 11ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಅಲಕನಂದಾ ಮಳಗಿ ಅವರು ಆರೋಗ್ಯ ಇಲಾಖೆಯ ತಂಡದೊಂದಿಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು.

ಈ ಕೇಂದ್ರಗಳು ದಿನದ 24 ಗಂಟೆಯೂ ತೆರೆದಿರುವಂತೆ ನೋಡಿಕೊಳ್ಳಲು ವೈದ್ಯಾಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಅವರು ಸೂಚಿಸಿದರು.

ಈ ತುರ್ತು ಚಿಕಿತ್ಸಾ ಕೇಂದ್ರಗಳಲ್ಲಿ ಸಾಕಷ್ಟು ಔಷಧಿ ಲಭ್ಯವಿರಬೇಕು. ಈ ಚಿಕಿತ್ಸಾ ಕೇಂದ್ರಕ್ಕೆ ಆಂಬ್ಯುಲೆನ್ಸ್ ವಾಹನ ನಿಯೋಜಿಸಿದ್ದು, ತೀವ್ರತರ ವಾಂತಿ-ಭೇದಿಗೊಳಗಾದ ರೋಗಿಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಮೇಲ್ಮಟ್ಟ ಆಸ್ಪತ್ರೆಗೆ ತಿಳಿಸಲು ಸಂಬಂಧಪಟ್ಟ ವೈದ್ಯಾಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಆದೇಶಿದ ಡಿ.ಹೆಚ್.ಓ ಅವರು, ಆರೋಗ್ಯ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರು ಪ್ರತಿದಿನ ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಕುದಿಸಿ ಆರಿಸಿದ ಕುಡಿಯುವ ನೀರಿನ ಬಗ್ಗೆ, ಶೌಚಾಲಯ ಬಳಸುವ ಬಗ್ಗೆ, ಸ್ವಚ್ಛತೆ ಕಾಪಾಡುವ ಬಗ್ಗೆ, ನಿತಂತರ ಅರಿವು ಮೂಡಿಸಬೇಕು ಎಂದರು.

ಜಿಲ್ಲೆಯ ನಾಲ್ಕೂ ತಾಲೂಕಾಗಳಿಗೆ ಜಿಲ್ಲಾ ಮಟ್ಟದ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿದ್ದು ಅವರು ಸಹ ಸಂಬಂಧಿಸಿದ ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಮೂಲಗಳನ್ನು ಹಾಗೂ ಪೈಪ್‌ಲೈನ್ ಸೋರಿಕೆ, ವೀಕ್ಷಣೆ ಮಾಡಿ ಸಂಬಂಧಪಟ್ಟ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಜೊತೆ ಚರ್ಚಿಸಿ ಶುದ್ಧ ಕುಡಿಯು ನೀರನ್ನು ಪುರೈಸುವಂತೆ ಮತ್ತು ಕ್ಲೋರಿನೇಶನ್ ಮಾಡಿಸುವ ಬಗ್ಗೆ ಮಾರ್ಗದರ್ಶನ ನೀಡಿದ್ದಾರೆ ಎಂದರು.

ಯಾರಿಗಾದರು ವಾಂತಿ-ಭೇದಿ ಉಂಟಾದರೆ ನಿರ್ಲಕ್ಷ್ಯ ಮಾಡದೆ ತಮ್ಮ ಗ್ರಾಮದಲ್ಲಿ ತೆರೆದ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಬೇಕು. ಯಾರು ಸಹ ಭಯಪಡಬಾರದು. ಗ್ರಾಮಗಳಲ್ಲಿ ಸಾರ್ವಜನಿಕರು ತಮ್ಮ ತಮ್ಮ ಮನೆಯ ಸುತ್ತಲು ಸ್ವಚ್ಛತೆ ಕಾಪಾಡಿಕೊಂಡು, ವಾಂತಿ-ಭೇದಿ ಮುಕ್ತ ಗ್ರಾಮವನ್ನಾಗಿ ಮಾಡಲು ಸಹಕರಿಸುವಂತೆ ತಿಳಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ನಂದಕುಮಾರ ಸೇರಿದಂತೆ ಸಂಬಂಧಪಟ್ಟ ವೈದ್ಯಾಧಿಕಾರಿಗಳು, ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Leave A Reply

Your email address will not be published.