deshadoothanews

ಬಾಲಕಾರ್ಮಿಕ ಪದ್ಧತಿ ವಿರೋದಿ ದಿನಾಚರಣೆ, ಕಾನೂನು ಅರಿವು-ನೆರವು ಕಾರ್ಯಕ್ರಮ —

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್.

ಕೊಪ್ಪಳ  (ಕರ್ನಾಟಕ ವಾರ್ತೆ): ಬಾಲ ಕಾರ್ಮಿಕ ಪದ್ಧತಿಯನ್ನು ತೊಲಗಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಬನ್ನಿಕಟ್ಟಿ ಹನುಮಂತಪ್ಪ ಆರ್ ಅವರು ಹೇಳಿದರು.

ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಯುನಿಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಜೂನ್ 12ರಂದು ನಡೆದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋದಿ ದಿನಾಚರಣೆ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಕ್ಕಳು ಶಿಕ್ಷಣದಿಂದ ಹೇಗೆ ವಂಚಿತರಾಗುತ್ತಾರೆ ಎಂಬುದನ್ನು ಪ್ರತಿಯೊಬ್ಬ ಶಿಕ್ಷಕರು ಅರಿಯಬೇಕು. ಕಲಿಕೆ ಮಾಡುವುದರ ಜತೆಗೆ ಮಕ್ಕಳ ಪಾಲಕರ ಮನವೊಲಿಸಿ ಮಕ್ಕಳನ್ನು ಶಾಲೆಗೆ ಕರೆತರುವ ಮಹತ್ವದ ಈ ಸಮಾಜ ಸೇವಾ ಕೈಂಕರ್ಯವನ್ನು ಶಿಕ್ಷಕ ಸಮೂಹ ಆಸ್ಥೆಯಿಂದ ಮಾಡುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.


ಬರೀ ಶಿಕ್ಷೆ ಕೊಡುವುದರಿಂದ ಈ ಪದ್ಧತಿಯನ್ನು ತೊಲಗಿಸಲು ಆಗುವುದಿಲ್ಲ.‌ ಜನರಲ್ಲಿ ಈ ದುಷ್ಟ ಪದ್ಧತಿಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿದಾಗ ಮಾತ್ರ ಬದಲಾವಣೆ ತರಲು ಸಾಧ್ಯವಿದೆ ಎಂದು ತಿಳಿಸಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗ ಅವರು ಮಾತನಾಡಿ, ಬಾಲ ಕಾರ್ಮಿಕರು ಕಂಡೆ ಕಡೆಗಳಲ್ಲಿ ಇಲಾಖೆಯಿಂದ ದಾಳಿ ನಡೆಸಿ ಕಾರ್ಯಪ್ರವೃತ್ತರಾಗಿದ್ದೇವೆ. ನಮ್ಮ ಕಾರ್ಯಾಚರಣೆಗೆ ಪೊಲೀಸ್ ಇಲಾಖೆಯಿಂದ ಸಾಕಷ್ಟು ಸಹಕಾರ ಸಿಕ್ಕಿದೆ ಎಂದರು.
ಅಪರ‌ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ ಅವರು ಅಧ್ಯಕ್ಷತೆ ವಹಿಸಿದ್ದರು.

ಗೌರವಾನ್ವಿತ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಹಾಗೂ ತ್ವರಿತಗತಿ ವಿಶೇಷ ಪೋಕ್ಸೋ ನ್ಯಾಯಾಲಯ-1ರ ನ್ಯಾಯಾಧೀಶರಾದ ಕುಮಾರ ಡಿ.ಕೆ., ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ್, ಸಿಜೆಎಂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಲ್.ಜೆ ಭವಾನಿ, ಜೆ.ಎಂ.ಎಫ್.ಸಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಹರೀಶ್ ಕುಮಾರ ಎಮ್., ಜೆ.ಎಂ.ಎಫ್.ಸಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಆದಿತ್ಯಾ ಕುಮಾರ, ಸಿಜೆಎಂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಲ್.ಜೆ ಭವಾನಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಕರಾದ ಮುತ್ತು ರಡ್ಡೇರ್, ಕಾರ್ಮಿಕ ಇಲಾಖೆ ಅಧಿಕಾರಿಗಳಾದ ಸುಧಾ ಗರಗ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೋಟಗಾರ, ಜಿಲ್ಲಾ ವಾರ್ತಾಧಿಕಾರಿಗಳಾದ ಗವಿಸಿದ್ದಪ್ಪ ಹೊಸಮನಿ, ಯುನಿಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ಸಂಯೋಜಕರಾದ ಹರೀಶ ಜೋಗಿ, ಜಿ.ಪಂ ಯೋಜನಾಧಿಕಾರಿ ಕೂಮಲಯ್ಯ, ಮಹಿಳಾ ಪೊಲೀಸ್ ಠಾಣೆಯ ಸಿಪಿಐ ಅಂಜನಯ್ಯ, ಕೊಪ್ಪಳ ವೃತ್ತ ಕಾರ್ಮಿಕ ನಿರೀಕ್ಷಕರಾದ ಶಿವಶಂಕರ ತಳವಾರ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ಬಸವರಾಜ ಹಿರೇಗೌಡ್ರ ಕಾರ್ಯಕ್ರಮ ನಿರೂಪಿಸಿದರು.

ವಿಶೇಷ ಉಪನ್ಯಾಸ: ವೇದಿಕೆ ಕಾರ್ಯಕ್ರಮದ ಬಳಿಕ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವೇಂದ್ರ ಪಂಡಿತ್ ಅವರು ವಿಶೇಷ ಉಪನ್ಯಾಸ ನೀಡಿ, ಬಾಲಕಾರ್ಮಿಕ ಪದ್ಧತಿಯು ಒಂದು ಸಾಮಾಜಿಕ ಪೀಡುಗಾಗಿದ್ದು, ಇದು ಮಕ್ಕಳ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುತ್ತದೆ. ಈ ಪದ್ಧತಿ ನಿರ್ಮೂಲನೆಗಾಗಿ ಬಾಲಕಾರ್ಮಿಕ ಮತ್ತು ಕಿಶೋರಾವಸ್ಥೆಯ ನಿಷೇಧ ಮತ್ತು ನಿಯಂತ್ರಣ ಕಾಯ್ದೆ(1986)-2016 ಜಾರಿಯಲ್ಲಿದೆ. 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ಹಾಗೂ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವವರಿಗೆ ಕಾನೂನಿನಲ್ಲಿ ಕಠಿಣ ಶಿಕ್ಷೆ ಇದ್ದು, ಅಂತಹ ಕ್ಷೇತ್ರಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳುತ್ತಿರುವುದು ಕಂಡುಬಂದಲ್ಲಿ ಸಹಾಯವಾಣಿ ಸಂಖ್ಯೆಗಳ ಮೂಲಕ ದೂರು ನೀಡಿ, ಮಕ್ಕಳ ರಕ್ಷಣೆ ಮಾಡಬೇಕು. ಈ ಬಗ್ಗೆ ವಿಶೇಷವಾಗಿ ಮಕ್ಕಳು ತಮ್ಮ ಸಹಪಾಠಿಗಳನ್ನು ರಕ್ಷಿಸಲು ನಿರ್ಭಯವಾಗಿ ದೂರು ನೀಡಲು ಮುಂದೆ ಬರಬೇಕು ಎಂದು ಮಕ್ಕಳಿಗೆ ಕರೆ ನೀಡಿದರು.

ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೋಟಗಾರ ಅವರು ಮಾತನಾಡಿ, ಬಾಲಕಾರ್ಮಿಕ ವ್ಯವಸ್ಥೆಗೆ ಒಳಪಟ್ಟ ಮಕ್ಕಳು, ಮಾನಸಿಕ ಹಾಗೂ ದೈಹಿಕವಾಗಿ ಸದೃಡವಾಗಿರುವುದಿಲ್ಲ. ಈ ಪದ್ಧತಿಗೆ ಅನೇಕ ಸಮಸ್ಯೆಗಳಿದ್ದು, ಮುಖ್ಯವಾಗಿ ಶಿಕ್ಷಣದ ಕೊರತೆ ಕಾರಣ. ಕಡ್ಡಾಯ ಶಿಕ್ಷಣ ಪ್ರತಿಯೊಬ್ಬ ಮಕ್ಕಳ ಮೊದಲ ಹಕ್ಕು ಆಗಿದ್ದು, ಸರ್ಕಾರಗಳು ಸಹ ಮಕ್ಕಳ ಶಿಕ್ಷಣಕ್ಕಾಗಿ ಉಚಿತ ಶಿಕ್ಷಣ, ಬಿಸಿ ಊಟ, ಪೌಷ್ಠಿಕ ಆಹಾರ, ವಿದ್ಯಾರ್ಥಿ ವೇತನ ಹೀಗೆ ಅನೇಕ ಕಾರ್ಯಕ್ರಮಗಳನ್ನು ನೀಡುತ್ತೀವೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಪ್ರತಿಯೊಬ್ಬ ಪಾಲಕರ ಕರ್ತವ್ಯವಾಗಿದೆ. ಎಲ್ಲರೂ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.

Leave A Reply

Your email address will not be published.