ಮಹಿಳಾ ಕಾಯಕೋತ್ಸವ ಅಭಿಯಾನಕ್ಕೆ ತಾ.ಪಂ ಸಹಾಯಕ ನಿರ್ದೇಶಕರಿಂದ ಚಾಲನೆ
ಡಿ ಡಿ ನ್ಯೂಸ್. ಕೊಪ್ಪಳ
ಡಿ ಡಿ ನ್ಯೂಸ್. ಯಲಬುರ್ಗಾ :
ನರೇಗಾ ಯೋಜನೆಯಡಿ ಗಂಡು-ಹೆಣ್ಣಿಗೆ ಸಮಾನ ಕೆಲಸ ಸಮಾನ ಕೂಲಿ ಸಿಗಲಿದ್ದು, ಮಹಿಳೆಯರು ಉದ್ಯೋಗ ಖಾತ್ರಿ ಕೆಲಸದ ಸೌಲಭ್ಯವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕು ಎಂದು ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕರಾದ ಕು. ಗೀತಾ ಅಯ್ಯಪ್ಪ ಹೇಳಿದರು.
ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗೆದಗೇರಿ ಗ್ರಾಮ ಪಂಚಾಯತಿಯ ಮದ್ಲೂರ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ಕೊಪ್ಪಳ, ತಾಲೂಕು ಪಂಚಾಯತ್ ಯಲಬುರ್ಗಾ ಹಾಗೂ ಗ್ರಾಮ ಪಂಚಾಯತಿ ಗೆದಗೇರಿ ವತಿಯಿಂದ ಆಯೋಜಿಸಿದ್ದ ಮಹಿಳಾ ಕಾಯಕೋತ್ಸವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸೌಲಭ್ಯ ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಮಹಿಳಾ ಕಾಯಕೋತ್ಸವ ಅಭಿಯಾನ ಆರಂಭಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಖಾತ್ರಿ ಕೆಲಸಕ್ಕೆ ಬರಬೇಕು ಎಂದು ಸಲಹೆ ನೀಡಿದರು.
ತಮ್ಮ ಗ್ರಾಮದಲ್ಲಿರುವ ಕೆರೆ, ನಾಲಾ, ಕೃಷಿಹೊಂಡ, ಬದು ಕಾಮಗಾರಿಗಳನ್ನು ಮಾಡಿಕೊಳ್ಳಬಹುದು. ಇದರಿಂದ ನಮ್ಮ ಮಣ್ಣಿನ ಸವಕಳಿ ತಡೆಗಟ್ಟಿ ಅಂತರ್ಜಲ ಹೆಚ್ಚಳಕ್ಕೆ ಅನುಕೂಲವಾಗಲಿದೆ. ನರೇಗಾ ಯೋಜನೆಯಲ್ಲಿ ಸಾಕಷ್ಟು ಕಾಮಗಾರಿಗಳನ್ನು ಮಾಡಿಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಯಮನಗೌಡ, ತಾ.ಪಂ ತಾಂತ್ರಿಕ ಸಹಾಯಕರಾದ ಸಂತೋಷ ನಂದಾಪುರ, ಪಿಡಿಒರಾದ ಶಿವರಾಜ ನಿಡಶೇಸಿ, ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ, ತಾಂತ್ರಿಕ ಸಹಾಯಕರಾದ ಶ್ರೀದೇವಿ, ಕರವಸೂಲಿಗಾರರಾದ ಕಳಕಯ್ಯ ಹಿರೇಮಠ, ಗ್ರಾಮ ಕಾಯಕ ಮಿತ್ರರಾದ ಮಂಜುಳಾ ತಳವಾರ, ಕಾಯಕ ಬಂಧುಗಳು, ಗ್ರಾಮಸ್ಥರು ಹಾಜರಿದ್ದರು.