deshadoothanews

ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅಧ್ಯಕ್ಷತೆಯಲ್ಲಿ ಸಭೆ

ಡಿ ಡಿ ನ್ಯೂಸ್. ಕೊಪ್ಪಳ

0
ಡಿ ಡಿ ನ್ಯೂಸ್. ಕೊಪ್ಪಳ :
 2023-24ನೇ ಸಾಲಿನ ಬೆಳೆ ಸಮೀಕ್ಷೆ ಕಾರ್ಯವನ್ನು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ಜಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಕೃಷಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬೆಳೆ ಸಮೀಕ್ಷೆ-2023-24ರ ಅನುಷ್ಠಾನ ಕುರಿತಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಳೆ ಸಮೀಕ್ಷೆ ಯೋಜನೆಯಡಿ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳ ಛಾಯಾ ಚಿತ್ರಗಳನ್ನು ತಾವೇ ಸ್ವತಃ ಅಥವಾ ಸ್ಥಳೀಯ ಖಾಸಗಿ ನಿವಾಸಿಗಳ ಸಹಾಯದೊಂದಿಗೆ ಅಫಲೋಡ್ ಮಾಡಲು ಅವಕಾಶವಿರುವುದರಿಂದ ರೈತರಿಗೆ ನಂಬಿಕೆ ಬರುವುದರ ಜೊತೆಗೆ ತಾವು ಬೆಳೆದ ಬೆಳೆಗಳ ನಿಖರವಾದ ಮಾಹಿತಿ ದಾಖಲಿಸುವ ಮೂಲಕ ಸಾರ್ಕರದಿಂದ ಬರುವ ಎಲ್ಲಾ ಸವಲತ್ತುಗಳನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಇತರೆ ಯೋಜನೆಗಳಾದ ಬೆಂಬಲ ಬೆಲೆ, ಸಬ್ಸಿಡಿ ಪಾವತಿ, ಬೆಳೆ ಪ್ರದೇಶದ ಅಂದಾಜು, ಬೆಳೆ ವಿಮೆ ಮತ್ತು ಕೃಷಿ ಇಲಾಖೆಯ ಇತರೆ ಯೋಜನೆಗಳಡಿ ಫಲಾನುಭವಿಗಳ ಆಯ್ಕೆ ಮುಂತಾದವುಗಳಿಗೆ ಸಹ ಬೆಳೆ ಸಮೀಕ್ಷೆ ಸಹಕಾರಿಯಾಗಲಿದೆ. ಬೆಳೆ ಸಮೀಕ್ಷೆಯಿಂದಾಗಿ ಪಹಣಿಗಳಲ್ಲಿ ಸರಿಯಾದ ಬೆಳೆ ಮಾಹಿತಿ ದಾಖಲಿಸಬಹುದಾಗಿದೆ. ಜೊತೆಗೆ ವಿವಿಧ ಬೆಳೆಗಳ ನಿಖರವಾದ ಬೆಳೆಗಳ ವಿಸ್ತೀರ್ಣ ಮಾಹಿತಿಯನ್ನು ಸಹ ಬೆಳೆ ಸಮೀಕ್ಷೆಯಿಂದ ಪಡೆದುಕೊಳ್ಳಬಹುದಾಗಿದೆ. ಆದ್ದರಿಂದ ಈ ಯೋಜನೆಯು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನವಾಗಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

*ಜಿಲ್ಲೆಯ ರೈತರಲ್ಲಿ ಮನವಿ*:
ಬೆಳೆ ವಿವರಗಳನ್ನು ಅಪಲೋಡ್ ಮಾಡದಿದ್ದಲ್ಲಿ ಇಲಾಖೆಗಳಿಂದ ದೊರೆಯುವ ಸವಲತ್ತುಗಳಿಂದ ವಂಚಿತರಾಗಬೇಕಾಗುತ್ತದೆ. ಆದ್ದರಿಂದ ರೈತರೇ ತಮ್ಮ ಬೆಳೆಗಳ ವಿವರಗಳನ್ನು ಅಪಲೋಡ್ ಮಾಡಿ ದಾಖಲಿಸಲು ಇದೊಂದು ಸುವರ್ಣಾವಕಾಶವಿದೆ. ರೈತರು ತಮ್ಮ ಜಿಲ್ಲೆ, ತಾಲೂಕು, ಗ್ರಾಮವನ್ನು ಆಯ್ಕೆ ಮಾಡಿಕೊಂಡು ತಮ್ಮ ಜಮೀನಿನ ವಿವರಗಳನ್ನು ದಾಖಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಭೆಯ ಮೂಲಕ ಕೊಪ್ಪಳ ಜಿಲ್ಲೆಯ ರೈತರಲ್ಲಿ ಮನವಿ ಮಾಡಿದರು.
ಪೂರ್ವ ಮುಂಗಾರು ಹಂಗಾಮಿನಲ್ಲಿ ಏಪ್ರೀಲ್ 1ರಿಂದ ಜೂನ್ 30ರವರೆಗೆ ಬಿತ್ತನೆ ಅವಧಿಗೆ ಬೆಳೆ ಸಮೀಕ್ಷೆ ಕೈಗೊಳ್ಳಲು 1ನೇ ಜುಲೈ ದಿಂದ ಜುಲೈ 31ರವರೆಗೆ ಅವಕಾಶವಿರಲಿದೆ. ಮುಂಗಾರು ಹಂಗಾಮಿನಲ್ಲಿ ಜುಲೈ 1ರಿಂದ ಆಗಸ್ಟ್ 31ರವರೆಗಿನ ಬಿತ್ತನೆ ಅವಧಿಗೆ ಸೆಪ್ಟೆಂಬರ್ 1ರಿಂದ ಸೆಪ್ಟೆಂಬರ್ 30ರವರೆಗೆ ಬೆಳೆ ಸಮೀಕ್ಷೆ ಕೈಗೊಳ್ಳಲು ಅವಕಾಶವಿರುತ್ತದೆ. ಹಿಂಗಾರು ಹಂಗಾಮಿನಲ್ಲಿ ಸೆಪ್ಟೆಂಬರ್ 1ರಿಂದ ಡಿಸೆಂಬರ್ 31ರವರೆಗಿನ ಬಿತ್ತನೆ ಅವಧಿಗೆ 2024ರ ಜನವರಿ 1ರಿಂದ ಜನವರಿ 31ರವರೆಗೆ ಬೆಳೆ ಸಮೀಕ್ಷೆ ಕೈಗೊಳ್ಳಲು ಅವಕಾಶವಿರುತ್ತದೆ. ಬೇಸಿಗೆಯಲ್ಲಿ ಜನವರಿ 1 ರಿಂದ ಮಾರ್ಚ 31ರವರೆಗಿನ ಬಿತ್ತನೆ ಅವಧಿಗೆ ಏಪ್ರೀಲ್ 1ರಿಂದ ಏಪ್ರೀಲ್ 30ರವರೆಗೆ ಬೆಳೆ ಸಮೀಕ್ಷೆ ಕೈಗೊಳ್ಳಲು ಅವಕಾಶವಿರುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್.ಅವರು ಸಭೆಗೆ ಮಾಹಿತಿ ನೀಡಿದರು.
ಕೊಪ್ಪಳ ಜಿಲ್ಲೆಯಲ್ಲಿ 630 ಗ್ರಾಮಗಳಿದ್ದು 4,39,077 ತಾಕುಗಳಿದ್ದು ಎನ್‌ಎ 9528 ತಾಕುಗಳಿದ್ದು ಒಟ್ಟು ಸಮೀಕ್ಷೆ ಕೈಗೊಳ್ಳಬೇಕಾದ ತಾಕುಗಳು 2,29,549 ಇರುತ್ತವೆ. ಈಗಾಗಲೇ ಪೂರ್ವ ಮುಂಗಾರು ಹಂಗಾಮು ಪ್ರಾರಂಭಗೊಂಡಿದ್ದು ಜಿಲ್ಲಾಮಟ್ಟದ ಲಾಗಿನ್ ನಿಂದ ಬೆಳೆಗಳ ಆಯ್ಕೆ ಹಾಗೂ ಪೂರ್ವ ಮುಂಗಾರಿನಲ್ಲಿ ಕೈಗೊಳ್ಳಬೇಕಾದ ಗ್ರಾಮಗಳ ಆಯ್ಕೆ ಮಾಡಲಾಗಿದೆ. ಕೊಪ್ಪಳ ತಾಲೂಕಿನ 37 ಗ್ರಾಮಗಳು, ಕುಷ್ಟಗಿ ತಾಲೂಕಿನಿಂದ 117 ಗ್ರಾಮಗಳು, ಕನಕಗಿರಿ ತಾಲೂಕಿನ 19 ಗ್ರಾಮಗಳು ಸೇರಿ ಒಟ್ಟು 173 ಗ್ರಾಮಗಳನ್ನು ಆಯ್ಕೆ ಮಾಡಲಾಗಿದ್ದು ಒಟ್ಟು ಪೂರ್ವ ಮುಂಗಾರು ಬೆಳೆ ಸಮೀಕ್ಷೆ ಕೈಗೊಳ್ಳಬೇಕಾದ ತಾಕುಗಳು 1,19,355 ಇರುತ್ತವೆ. ತಹಸೀಲ್ದಾರ ಅವರ ಲಾಗಿನ್‌ದಿಂದ 159 ಖಾಸಗಿ ನಿವಾಸಿಗಳು ಮತ್ತು 173 ಮೇಲ್ವಿಚಾರಕರನ್ನು ಆಯ್ಕೆ ಮಾಡಲಾಗಿದೆ. ಸಹಾಯಕ ಕೃಷಿ ನಿರ್ದೇಶಕರ ಲಾಗಿನ್‌ದಿಂದ ಬೆಳೆಗಳ ಮಾಸ್ಟರ್ ಎಂಟ್ರಿ ಮಾಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
*ಬೆಳೆ ವಿವರ ದಾಖಲೆ ಹೇಗೆ*:
ಗೂಗಲ್ ಪ್ಲೇ ಸ್ಟೋರನಲ್ಲಿ ಫಾಮರ್ಸ್ ಕ್ರಾಪ್ ಸರ್ವೆ ಎನ್ನುವ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಆಪನಲ್ಲಿ ಬೆಳೆ ಸಮೀಕ್ಷೆಯ ವರ್ಷ ಮತ್ತು ಹಂಗಾಮನ್ನು ನಮೂದಿಸಬೇಕು. ರೈತರು ತಮ್ಮ ಹೆಸರು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಬಳಿಕ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿಯನ್ನು ದಾಖಲಿಸಿ ಆಪನಲ್ಲಿ ರಿಜಿಸ್ಟರ್ ಮಾಡಿಕೊಳ್ಳಬೇಕು. ಮೊಬೈಲ್ ಆಪನಲ್ಲಿ ಮಾಸ್ಟರ್, ಪಹಣಿ ಮತ್ತು ಮಾಲೀಕರ ವಿವರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ತಮ್ಮ ಜಿಲ್ಲೆ, ತಾಲೂಕು, ಗ್ರಾಮವನ್ನು ಆಯ್ಕೆ ಮಾಡಿಕೊಂಡು ತಮ್ಮ ಜಮೀನಿನ ವಿವರಗಳನ್ನು ದಾಖಲಿಸಬೇಕು. ಬೆಳೆ ವಿವರಗಳನ್ನು ದಾಖಲಿಸಿ ಜಮೀನಿನಲ್ಲಿರುವ ಮೂರು ಛಾಯಾಚಿತ್ರಗಳನ್ನು ತೆಗೆಯಬೇಕು. ಇಂಟರನೆಟ್ ಇರುವುದನ್ನು ಖಚಿತಪಡಿಸಿಕೊಂಡು ಬೆಳೆ ಸಮೀಕ್ಷೆಯ ವಿವರಗಳನ್ನು ಅಪಲೋಡ್ ಮಾಡಬೇಕು. ಹೆಚ್ಚಿನ ಮಾಹಿತಿಗೆ ಬೆಳೆ ಸಮೀಕ್ಷೆ ಸಹಾಯವಾಣಿ ಸಂಖ್ಯೆ:8448447715 ಗೆ ಕರೆ ಮಾಡಿ ಮಾಹಿತಿ ಪಡೆಯಬೇಕು. ಅಥವಾ ಕೃಷಿ, ಕಂದಾಯ ತೋಟಗಾರಿಕೆ ರೇಷ್ಮ ಇಲಾಖೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಾತ್ಯಕ್ಷಿಕೆಯ ಮೂಲಕ ಸಭೆಗೆ ಬೆಳೆಗಳ ವಿವರ ದಾಖಲೆಯ ವಿಧಾನದ ಬಗ್ಗೆ ವಿವರಿಸಿದರು.
ಸಭೆಯಲ್ಲಿ ತೋಟಗಾರಿಕೆ, ರೇಷ್ಮೆ ಇಲಾಖೆಯ ಉಪ ನಿರ್ದೇಶಕರು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಕೃಷಿ ಇಲಾಖೆಯ ವಿವಿಧ ತಾಲೂಕುಗಳ ಸಹಾಯಕ ನಿರ್ದೇಶಕರು ಮತ್ತು ಇನ್ನಿತರರು ಇದ್ದರು.
Leave A Reply

Your email address will not be published.