*ನಿತ್ಯ ಯೋಗಾಭ್ಯಾಸ ಉತ್ತಮ ಆರೋಗ್ಯಕ್ಕೆ ಸಹಕಾರಿ: ಕರಡಿ ಸಂಗಣ್ಣ*
ಡಿ ಡಿ ನ್ಯೂಸ್. ಕೊಪ್ಪಳ
ಡಿ ಡಿ ನ್ಯೂಸ್. ಕೊಪ್ಪಳ : ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಹಾಗೂ ಜಿಲ್ಲಾ ಸರ್ವ ಯೋಗ ಸಂಸ್ಥೆಗಳ ಸಹಯೋಗದಲ್ಲಿ ನಗರದ ತಾಲೂಕು ಕ್ರೀಡಾಂಗಣದಲ್ಲಿ ಜೂನ್ 21ರಂದು 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಅವರು ಧನ್ವಂತರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ಸಸಿಗೆ ನೀರುಣಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪ್ರಾಚೀನ ಸಂಸ್ಕೃತಿಗೆ ನಮ್ಮ ದೇಶದ ಕೊಡುಗೆ ಅಪಾರವಾಗಿದ್ದು, ಯೋಗವು ಭಾರತದ ಭವ್ಯ ಪರಂಪರೆಯ ಪ್ರತೀಕವಾಗಿದೆ. ಒತ್ತಡದ ನಡುವೆ ಬದುಕು ಸಾಗಿಸುವ ಇಂದಿನ ಜೀವನ ಶೈಲಿಗೆ ಯೋಗ ತುಂಬಾ ಅವಶ್ಯಕವಾಗಿ ಬೇಕಾಗಿದ್ದು, ಪ್ರತಿದಿನದ ಯೋಗಾಭ್ಯಾಸ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಲಿದೆ. ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರು 2015ರಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಜಾರಿ ತಂದರು. ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಯೋಗ ದಿನಾಚರಣೆಯನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದರು.
ಯೋಗ ಆರೋಗ್ಯಕ್ಕೆ ತುಂಬಾ ಅವಶ್ಯಕವಾಗಿದ್ದು, ಯೋಗವನ್ನು ನಮ್ಮ ಜೀವನ ಶೈಲಿಯ ಒಂದು ಭಾಗವನ್ನಾಗಿ ಅಳವಡಿಸಿಕೊಳ್ಳಬೇಕು. ಯೋಗವನ್ನು ನಮ್ಮ ಜೀವನದಲ್ಲಿ ಒಂದು ಹವ್ಯಾಸದ ರೀತಿಯಲ್ಲಿ ಅಳವಡಿಸಿಕೊಳ್ಳಬೇಕು. ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು ಯೋಗದ ಮಹತ್ವ ಅರಿತು ಇತರರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ವೈ.ಜೆ. ಶಿರವಾರ ಅವರು ಯೋಗಾಭ್ಯಾಸ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಅಪರ ಜಿಲ್ಲಾಧಿಕಾರಿಗಳಾದ ಸಾವಿತ್ರಿ ಬಿ ಕಡಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಎಂ.ಎ.ರಡ್ಡೇರ, ಜಿಲ್ಲೆಯ ಬ್ರಹ್ಮ ಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಯೋಗಿನಿ ಅಕ್ಕ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಜುಕ್ತಿ ಮಠ, ಕೊಪ್ಪಳದ ಪತಂಜಲಿ ಯೋಗ ಸಮಿತಿಯ ವೀರಯ್ಯ ವಂಟಿಗೋಡಿಮಠ, ಜಿಲ್ಲಾ ಆಯುಶ್ ಇಲಾಖೆಯ ವೈದ್ಯಾಧಿಕಾರಿಗಳಾದ ಡಾ.ಗುರುರಾಜ್ ಉಮಚಗಿ, ಡಾ.ಪ್ರಹ್ಲಾದ್ ಐಲಿ, ಡಾ.ರಾಜಶೇಖರ ನಾರನಾಳ್, ಡಾ.ಶರಣಪ್ಪ ಹೈದ್ರಿ, ಡಾ.ವಿರುಪಾಕ್ಷಪ್ಪ ತಾಳಿಕೋಟಿ ಸೇರಿದಂತೆ ಜನಪ್ರತಿನಿಧಿಗಳು ಶಿಕ್ಷಕರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.