ಜುಲೈ 31ರೊಳಗೆ ತೋಟಗಾರಿಕಾ ಬೆಳೆಗಳ ವಿಮಾ ವಂತಿಗೆ ಪಾವತಿಸಲು ಸೂಚನೆ
ಡಿ ಡಿ ನ್ಯೂಸ್. ಕೊಪ್ಪಳ
ಡಿ ಡಿ ನ್ಯೂಸ್. ಕೊಪ್ಪಳ :
ಜಿಲ್ಲೆಯ ತೋಟಗಾರಿಕಾ ಬೆಳೆಗಳ ವಿಮಾ ವಂತಿಗೆಯನ್ನು ಜುಲೈ 31ರೊಳಗೆ ಪಾವತಿಸುವಂತೆ ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ಅವರು ತಿಳಿಸಿದ್ದಾರೆ.
ಸರ್ಕಾರದ ಅಧಿಸೂಚನೆಯ ಪ್ರಕಾರ ಕರ್ನಾಟಕ ಸರ್ಕಾರವು 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು ಅನುಷ್ಠಾನಗೊಳಿಸಲು ಮಂಜೂರಾತಿ ನೀಡಿದೆ. ಈ ಯೋಜನೆಯಡಿ ಜಿಲ್ಲೆಯ ಎಲ್ಲಾ ರೈತರು ಪಪ್ಪಾಯ, ಮಾವು, ದ್ರಾಕ್ಷಿ, ದಾಳಿಂಬೆ, ಮತ್ತು ಹಸಿಮೆಣಸಿನಕಾಯಿ ಬೆಳೆಗಳನ್ನು ವಿಮೆಗೆ ಒಳಪಡಿಸಬಹುದು. ತಮ್ಮ ಪಾಲಿನ ವಿಮಾ ವಂತಿಗೆಯನ್ನು ಜುಲೈ 31ರೊಳಗೆ ಪಾವತಿಸಿದಲ್ಲಿ ಈ ಯೋಜನೆಯಡಿ ಪ್ರಾಯೋಜನೆ ಪಡೆಯಬಹುದು.
ಇದಕ್ಕಾಗಿ ಅಗ್ರಿಕಲ್ಚರ್ ಇನಶೂರೆನ್ಸ ಕಂಪೆನಿ ರವರನ್ನು ಆಯ್ಕೆಮಾಡಿರುತ್ತಾರೆ.
ಅಧಿಸೂಚಿತ ಬೆಳೆಗಳ ವಿವರ:
ಮರುವಿನ್ಯಾಸಗೊಳಿಸಲಾದ ಹವಾಮಾನಾಧಾರಿತ ಬೆಳೆ ವಿಮಾ ಯೋಜನೆಯ (ಡಬ್ಲ್ಯೂ.ಬಿ.ಸಿ.ಐ.ಎಸ್) ಅಧಿಸೂಚಿತ ತಾಲೂಕು ಮತ್ತು ಬೆಳೆಗಳ ವಿವರ ಇಂತಿದೆ. ಕೊಪ್ಪಳ, ಕುಷ್ಟಗಿ, ಗಂಗಾವತಿ, ಕಾರಟಗಿ, ಕನಕಗಿರಿ, ಕೂಕನೂರ ಹಾಗೂ ಯಲಬುರ್ಗಾ ತಾಲೂಕುಗಳ ಡಬ್ಲ್ಯೂ.ಬಿ.ಸಿ.ಐ.ಎಸ್ ಯೋಜನೆಯ ದ್ರಾಕ್ಷೀ, ಮಾವು, ದಾಳಿಂಬೆ, ಹಸಿ ಮೆಣಸಿನಕಾಯಿ, ಪಪ್ಪಾಯ ಬೆಳೆಗಳು.
ಬೆಳೆವಾರು ವಿಮಾ ಮೊತ್ತ, ವಿಮಾ ಕಂತು ವಿವರ: ಮುಂಗಾರು ಹಂಗಾಮಿನಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಬೆಳೆವಾರು ವಿಮಾ ಮೊತ್ತ ಮತ್ತು ವಿಮಾ ಕಂತು ವಿವರ ಇಂತಿದೆ. ದ್ರಾಕ್ಷಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ರೂ. 2,80,000 ಆಗಿದ್ದು, ರೈತರು ವಿಮಾ ಕಂತಿನ ಮೊತ್ತ ರೂ. 14,000 ಪಾವತಿಸಬೇಕು. ಮಾವು ಬೆಳೆಗೆ ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ರೂ. 80,000 ಆಗಿದ್ದು, ರೈತರು ವಿಮಾ ಕಂತಿನ ಮೊತ್ತ ರೂ. 4000 ಪಾವತಿಸಬೇಕು. ದಾಳಿಂಬೆ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ರೂ. 1,27,000 ಆಗಿದ್ದು, ರೈತರು ವಿಮಾ ಕಂತಿನ ಮೊತ್ತ ರೂ. 6350 ಪಾವತಿಸಬೇಕು. ಹಸಿ ಮೆಣಸಿನಕಾಯಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ರೂ. 71,000 ಆಗಿದ್ದು, ರೈತರು ವಿಮಾ ಕಂತಿನ ಮೊತ್ತ ರೂ. 3550 ಪಾವತಿಸಬೇಕು. ಪಪ್ಪಾಯ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ರೂ. 1,34,000 ಆಗಿದ್ದು, ರೈತರು ವಿಮಾ ಕಂತಿನ ಮೊತ್ತ ರೂ. 6700 ಪಾವತಿಸಬೇಕು. ಈ ಎಲ್ಲಾ ಬೆಳೆಗಳಿಗೆ ರೈತರು ವಿಮಾ ಕಂತಿನ ಮೊತ್ತ ಪಾವತಿಸಲು ಜುಲೈ 31 ಕೊನೆಯ ದಿನವಾಗಿದೆ.
ವಿಮಾ ಮೊತ್ತವು ಬೆಳೆ ಸಾಲ ಪಡೆದ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ. ಬೆಳೆ ಸಾಲ ಪಡೆಯದ ರೈತರು ವಿಮೆ ಕಟ್ಟಲು ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಿಗೆ ನಿಗದಿತ ಅರ್ಜಿಗಳೊಂದಿಗೆ ಭೂಮಿ ಹೊಂದಿರಲು ದಾಖಲೆಗಳಾದ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾಡ್ ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳೊಂದಿಗೆ ಸಂಪರ್ಕಿಸಬೇಕು.
ಹೆಚ್ಚಿನ ಮಾಹಿತಿಗೆ ಸಮೀಪದ ಹೋಬಳಿ ಮಟ್ಟದ ತೋಟಗಾರಿಕೆ ಅಧಿಕಾರಿಗಳು ಹಾಗೂ ಕೃಷಿ ಅಧಿಕಾರಿಗಳು, ಅಥವಾ ಸಮೀಪದ ಯಾವುದೇ ಬ್ಯಾಂಕ್‌ಗಳಿಗೆ, ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಈ ಯೋಜನೆಯಡಿ ಆಯ್ಕೆಯಾಗಿರುವ ಗ್ರಾಮ ಪಂಚಾಯತಿ ಮತ್ತು ಬೆಳೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.