ಡಿ ಡಿ ನ್ಯೂಸ್. ಕೊಪ್ಪಳ : ವಾಂತಿ-ಬೇಧಿ ಪ್ರಕರಣದ ಹಿನ್ನೆಲೆಯಲ್ಲಿ ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮಕ್ಕೆ ಸಂಸದರಾದ ಸಂಗಣ್ಣ ಕರಡಿ ಅವರು ಜೂನ್ 20ರಂದು ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಸಂಸದರು, ಜೆಜೆಎಂ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಎಂಜಿನಿಯರ್‌ಗಳಿಗೆ ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚಿಸಿದರು. ಜೊತೆಗೆ ಸಾರ್ವಜನಿಕರಿಗೆ ಹೆಚ್ಚಿನ ರೀತಿಯಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ತಿಳಿಸಿದರು. ಗ್ರಾಮದ ಪರಿಸ್ಥಿತಿ ಕುರಿತು ಸಾರ್ವಜನಿಕರಿಂದಲೂ ಮಾಹಿತಿಯನ್ನು ಪಡೆದುಕೊಂಡರು.
ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಕಂದಕೂರ್ ಹಾಗೂ ವೈದ್ಯೆ ಡಾ.ಸಹನಾ ಅವರಿಂದ ಗ್ರಾಮಸ್ಥರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡರು.
ಕಳೆದ ಮೂರ್ನಾಲ್ಕು ದಿನಗಳಿಂದ ಯಾವುದೇ ಪ್ರಕರಣಗಳು ಕಂಡುಬಂದಿರುವುದಿಲ್ಲ. ಪರಿಸ್ಥಿತಿ ಹತೋಟಿಗೆ ಬಂದಿದೆ ಎಂದು ವೈದ್ಯರು ಇದೆ ವೇಳೆ ಮಾಹಿತಿ ನೀಡಿದರು.
ಗ್ರಾಮದಲ್ಲಿ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದು ಪಿಡಿಓ ರವೀಂದ್ರ ಕುಲಕರ್ಣಿ ಅವರು ಸಂಸದರಿಗೆ ತಿಳಿಸಿದರು.
ವೈಯಕ್ತಿಕ ಪರಿಹಾರ : ಅನಾರೋಗ್ಯದಿಂದ ಮೃತಪಟ್ಟ ಶೃತಿ ಹಾಗೂ ಹೊನ್ನಮ್ಮ ಅವರ ಮನೆಗೆ ಸಂಸದರು ಭೇಟಿ ನೀಡಿ ಸಾಂತ್ವನ ಹೇಳಿ ವೈಯಕ್ತಿಕ ಪರಿಹಾರ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷ ಶಿವಪ್ಪ ಸುಳೇಕಲ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜೆಇ ಕಿಶೋರ್ ಸೇರಿದಂತೆ ಆರೋಗ್ಯ ಇಲಾಖೆ ಹಾಗೂ ಗ್ರಾಪಂ ಸಿಬ್ಬಂದಿ ಹಾಜರಿದ್ದರು.