ಡಿ ಡಿ ನ್ಯೂಸ್. ಕೊಪ್ಪಳ :
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಜೂನ್ 30ರಂದು ಗ್ರಾಮೀಣ ಪ್ರದೇಶದಲ್ಲಿ ಪ್ರವಾಸ ಕೈಗೊಂಡು ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮಕ್ಕೆ ಪುನಃ ಭೇಟಿ ನೀಡಿ ಶಂಕಿತ ವಾಂತಿ-ಬೇಧಿ ಪ್ರಕರಣಗಳ ಬಗ್ಗೆ ಪರಿಶೀಲಿಸಿದರು.
ಮೊದಲು ಬಿಜಕಲ್ ಗ್ರಾಮದ ಹೊರವಲಯದಲ್ಲಿರುವ ಕುಡಿಯುವ ನೀರಿನ ಬೋರವೆಲ್ ಸ್ಥಳಕ್ಕೆ ಭೇಟಿ ನೀಡಿ ಪೈಪ್ಲೈನ್ ಸರಿಪಡಿಸಿದ ಬಗ್ಗೆ ಹಾಗೂ ಬೊರವೆಲ್‌ನ ಕೆಸಿಂಗನ್ನು ನೆಲಮಟ್ಟದಿಂದ ಎತ್ತರದಲ್ಲಿರಿಸಿದ ಬಗ್ಗೆ ಖುದ್ದು ವೀಕ್ಷಣೆ ನಡೆಸಿದರು. ಬೋರವೆಲ್ ನೀರನ್ನು ಕಾಲಕಾಲಕ್ಕೆ ಪರೀಕ್ಷೆಗೊಳಪಡಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೆ ವೇಳೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪೈಪ್ಲೈನ್ ಸಂಪರ್ಕ, ಚರಂಡಿ ಶುಚಿತ್ವ ಸೇರಿದಂತೆ ವೀಕ್ಷಣೆ ಮಾಡಿದರು.
ಕುಡಿಯುವ ನೀರಿನ ಸಮಸ್ಯೆಗಳ ಕುರಿತು ಸಭೆ:
ಸಿಇಓ ಅವರು ಗ್ರಾಮ ಭೇಟಿ ವೇಳೆಯಲ್ಲಿ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಸಭೆ ನಡೆಸಿದರು. ಗ್ರಾಮದಲ್ಲಿ ಕುಡಿಯುವ ನೀರಿನ ಪರಿಸ್ಥಿತಿ, ಶಂಕಿತ ವಾಂತಿ-ಬೇಧಿ ಪ್ರಕರಣಗಳ ಬಗ್ಗೆ ಗ್ರಾಮಸ್ಥರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದರು. ಇದೆ ವೇಳೆ ಸಿಇಓ ಅವರು ಮಾತನಾಡಿ, ಗ್ರಾಮದಲ್ಲಿ ಪೈಪ್ಲೈನ್ ಸೋರಿಕೆಯಾಗಲಿ ಅಥವಾ ಅಶುಚಿತ್ವದ ಬಗ್ಗೆ ದೂರುಗಳು ಬಂದಲ್ಲಿ ಅಧಿಕಾರಿಗಳು ಕೂಡಲೇ ಅದಕ್ಕೆ ಸ್ಪಂದಿಸಿ ಸರಿಪಡಿಸಬೇಕು. ಅಧಿಕಾರಿಗಳು ನಿಷ್ಕಾಳಜಿ ತೋರಬಾರದು. ಬಿಜಕಲ್ ಗ್ರಾಮದಲ್ಲಿನ ಜೆಜೆಎಂ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ಗುತ್ತಿಗೆದಾರರನ್ನೆ ಹೊಣೆಯಾಗಿಸಿ ಕ್ರಮ ಜರುಗಿಸಲಾಗುವುದು. ಗ್ರಾಮದಲ್ಲಿ ಪ್ರತಿಯೊಂದು ಕಡೆಗೂ ಶುಚಿತ್ವ ಕಾಣುವಂತಾಗಬೇಕು. ಶೌಚಾಲಯ ಬಳಸುವಂತೆ ಗ್ರಾಮಸ್ಥರಿಗೆ ಮಾಹಿತಿ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಲ್ಲಿಕಾ ಬಸಪ್ಪ ಜಗಲಿ, ಕುಷ್ಟಗಿ ತಹಶೀಲ್ದಾರರಾದ ರಾಘವೇಂದ್ರರಾವ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿವಪ್ಪ ಸುಬೇದಾರ್, ತಾಲೂಕ ಆರೋಗ್ಯ ಅಧಿಕಾರಿಗಳಾದ ಆನಂದ್ ಗೋಟುರ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಅಭಿಯಂತರರಾದ ಸತೀಶ್, ತಾಪಂ ಸಹಾಯಕ ನಿರ್ದೇಶಕರಾದ ನಿಂಗನಗೌಡ ವಿ.ಹೆಚ್., ಪಿಡಿಓ ಮುತ್ತಣ್ಣ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಇದ್ದರು.