ಮಹಿಳೆಯರ ಭಾಗವಹಿಸುವಿಕೆ ಶೇ.60 ರಷ್ಟು ಹೆಚ್ಚಿಸಲು ಮಹಿಳಾ ಕಾಯಕೋತ್ಸವ ಅಭಿಯಾನ
ಡಿ ಡಿ ನ್ಯೂಸ್. ಕೊಪ್ಪಳ
ಡಿ ಡಿ ನ್ಯೂಸ್. ಯಲಬುರ್ಗಾ :
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣವನ್ನು ಶೇಕಡಾ 60ರಷ್ಟು ಹೆಚ್ಚಿಸುವ ಸಲುವಾಗಿ ಮಹಿಳಾ ಕಾಯಕೋತ್ಸವ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಅಭಿಯಾನದಡಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪಿಡಿಒರಾದ ಶರಣಗೌಡ ಪೋಲಿಸ್ ಪಾಟೀಲ್ ಹೇಳಿದರು.
ಇಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮ ಪಂಚಾಯತಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತಿ ಕೊಪ್ಪಳ, ತಾಲೂಕು ಪಂಚಾಯತಿ ಯಲಬುರ್ಗಾ, ಗ್ರಾಮ ಪಂಚಾಯತಿ ಗುನ್ನಾಳ ವತಿಯಿಂದ ಆಯೋಜಿಸಿದ್ದ ಮಹಿಳಾ ಕಾಯಕೋತ್ಸವ ಅಭಿಯಾನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಜಾಬ್ ಕಾರ್ಡ್ ಮತ್ತು ಕೆಲಸ ಒದಗಿಸುವುದು. ಹಾಗೇ ನರೇಗಾ ಯೋಜನೆಯ ವೈಯಕ್ತಿಕ ಸೌಲಭ್ಯಗಳನ್ನು ದೊರಕಿಸಿಕೊಟ್ಟು ಆರ್ಥಿಕ ಸಬಲೀಕರಣಗೊಳಿಸಬೇಕಿದೆ ಎಂದರು.
ಗ್ರಾಮ ಪಂಚಾಯತಿಯಲ್ಲಿ ನಿರಂತರವಾಗಿ ಕೆಲಸ ಕೊಡಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾಯಕ ಬಂಧುಗಳು ಕೂಲಿಕಾರರನ್ನು ಉದ್ಯೋಗ ಖಾತ್ರಿ ಕೆಲಸಕ್ಕೆ ಬರುವಂತೆ ಮಾಡಬೇಕು. ತಮ್ಮ ಗ್ರಾಮ ಪಂಚಾಯತಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಳವಾಗಬೇಕು ಎಂದರು.
ತಾಲೂಕು ಐಇಸಿ ಸಂಯೋಜಕರಾದ ಶರಣಪ್ಪ ಹಾಳಕೇರಿ ಮಾತನಾಡಿ, ಕಳೆದ ಬಾರಿಯಂತೆ ಈ ಬಾರಿಯು ಮಹಿಳಾ ಕಾಯಕೋತ್ಸವ ಅಭಿಯಾನ ಆರಂಭಿಸಿದ್ದು, ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಕ್ಲರ್ಕ್ ಕಂ, ಕಂಪ್ಯೂಟರ್ ಆಪರೇಟರ್ ಶರಣಯ್ಯ ನಂದಾಪುರಮಠ, ಬಿಎಫ್ ಟಿ ಈರಣ್ಣ ಹಳ್ಳಿ, ಗ್ರಾಮ ಕಾಯಕ ಮಿತ್ರರಾದ ಯಮನಮ್ಮ ಸಂಗನಹಾಳ, ಕಾಯಕ ಬಂಧುಗಳು, ಸಾರ್ವಜನಿಕರು ಉಪಸ್ಥಿತರಿದ್ದರು.