ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸೂಚನೆ
ಡಿ ಡಿ ನ್ಯೂಸ್. ಕೊಪ್ಪಳ
ಡಿ ಡಿ ನ್ಯೂಸ್. ಕೊಪ್ಪಳ :
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜೂನ್ 28ರಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೆಳೆ ವಿಮೆಗೆ ಸಂಬಂಧಿಸಿದಂತೆ ರೈತರಿಗೆ ಎಲ್ಲಾ ಅನುಸೂಚಿತ ಬೆಳೆಗಳು ಮತ್ತು ಘಟಕಗಳ ಬಗ್ಗೆ ಬ್ಯಾಂಕುಗಳು, ರೈತ ಸಂಪರ್ಕ ಕೇಂದ್ರಗಳು ಮತ್ತು ಗ್ರಾಮ ಪಂಚಾಯಿತಿ ಕಚೇರಿಗಳ ಸೂಚನಾ ಫಲಕಗಳ ಮೇಲೆ ಪ್ರಕಟಿಸಿ ವ್ಯಾಪಕ ಪ್ರಚಾರ ನಡೆಸಿ ರೈತರಿಗೆ ಯೋಜನೆಯ ಬಗ್ಗೆ ತಿಳಿವಳಿಕೆ ಮೂಡಿಸಬೇಕು. ಕೃಷಿ ಅಭಿಯಾನ, ಗ್ರಾಮ ಸಭೆ ಮತ್ತು ಜನಸ್ಪಂದನ ಸಭೆಗಳಲ್ಲಿ ರೈತರಿಗೆ ಮಾಹಿತಿ ನೀಡಬೇಕು. ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಇಲಾಖೆಗಳಾದ ತೋಟಗಾರಿಕಾ, ಕಂದಾಯ, ಜಿಲ್ಲಾ ಸಾಂಖ್ಯಿಕ ಇಲಾಖೆ ಮತ್ತು ಬ್ಯಾಂಕಿನ ಅಧಿಕಾರಿಗಳು ಯೋಜನೆಯ ಮಾರ್ಗಸೂಚಿಯನ್ವಯ ಸರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಸಹಕಾರ ಇಲಾಖೆ ಹಾಗೂ ಹಣಕಾಸು ಸಂಸ್ಥೆಗಳು ಈ ಸಂದರ್ಭದಲ್ಲಿ ಮುತುವರ್ಜಿ ವಹಿಸಿ ಕೆಲಸ ನಿರ್ವಹಿಸಬೇಕು. ಬೆಳೆಸಾಲ ಪಡೆಯದ ರೈತರನ್ನು ನಿಗದಿತ ದಿನಾಂಕದೊಳಗೆ ನೋಂದಾಯಿಸಬೇಕು. ಕ್ರೋಡಿಕೃತ ಪ್ರಸ್ತಾವನೆಯನ್ನು ನೋಡಲ್ ಬ್ಯಾಂಕುಗಳ ಮೂಲಕ ನಿಗಧಿತ ಸಮಯದೊಳಗೆ ವಿಮಾ ಸಂಸ್ಥೆಗೆ ಕಳುಹಿಸಬೇಕು. ವಿಮಾ ಸಂಸ್ಥೆಯಿಂದ ಪಡೆದ ಬೆಳೆ ವಿಮಾ ಸಂಸ್ಥೆಯಿಂದ ಪಡೆದ ಬೆಳೆವಿಮಾ ನಷ್ಟದ ಪರಿಹಾರವನ್ನು ಕೂಡಲೇ ರೈತರ ಖಾತೆಗಳಿಗೆ ಜಮಾ ಮಾಡಬೇಕು.ಫಲಾನುಭವಿಗಳ ಪಟ್ಟಿಯನ್ನು ಸೂಚನಾ ಫಲಕದಲ್ಲಿ ಪ್ರಕಟಿಸಬೇಕು. ಕಂದಾಯ ಮತ್ತು ಸಾಂಖ್ಯಿಕ ಇಲಾಖೆಗಳು ಸಮನ್ವಯದಿಂದ ಬೆಳೆ ಬಿತ್ತನೆ ಕ್ಷೇತ್ರ ಒದಗಿಸಬೇಕು. ಜೊತೆಗೆ ಕಂದಾಯ ಮತ್ತು ಸಾಂಖ್ಯಿಕ ಇಲಾಖೆಗಳು ಹಾಗೂ ಇತರೆ ಇಲಾಖೆಗಳು ಹಂಚಿಕೆಗೊಂಡ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಬೇಕು. ಕಂದಾಯ ಇಲಾಖೆಯು ಬಿತ್ತನೆ ದೃಢೀಕರಣ ಪತ್ರ ನೀಡಬೇಕು. ಬಿತ್ತನೆ ಕ್ಷೇತ್ರವನ್ನು ಪಹಣಿಯಲ್ಲಿ ದಾಖಲಿಸಬೇಕು ಎಂದು ಸೂಚನೆ ನೀಡಿದರು.
ಸಾಮಾನ್ಯ ಸೇವಾ ಕೇಂದ್ರ ಮತ್ತು ಗ್ರಾಮ ಒನ್ ಕೇಂದ್ರಗಳು ಕಾಳಜಿಯಿಂದ ಕಾರ್ಯನಿರ್ವಹಿಸಬೇಕು. ನೀರಾವರಿ ಮತ್ತು ಒಣಬೇಸಾಯ ಪ್ರದೇಶದ ವಿವರಗಳನ್ನು ಸರಿಯಾಗಿ ನಮೂದಿಸಬೇಕು. ಬೆಳೆವಿಮೆ ನೋಂದಾವಣೆ ವೇಳೆ ರೈತರ ಸರಿಯಾದ ಆಧಾರ್ ಮತ್ತು ಮೊಬೈಲ್ ಸಂಖ್ಯೆಯ ವಿವರಗಳನ್ನು ಸರಿಯಾಗಿ ನಮೂದಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಪ್ರದರ್ಶಿಸಿ ಬೆಳೆವಿಮೆಯ ಪ್ರಚಾರವನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಪ್ರತಿ ಹಂಗಾಮಿನಲ್ಲಿ ಅಧಿಸೂಚಿಸಲಾಗುವ ಬೆಳೆಗಳು ಮತ್ತು ಕ್ಷೇತ್ರಗಳ ಮಾಹಿತಿ ಒದಗಿಸಬೇಕು. ಬೆಳೆ ಕಟಾವು ಪ್ರಯೋಗಗಳನ್ನು ಯೋಜಿಸಬೇಕು. ಇತರೆ ಇಲಾಖೆಗಳ ಸಹಕಾರೊಂದಿಗೆ ಬೆಳೆ ಕಟಾವು ಪ್ರಯೋಗಗಳನ್ನು ನಡೆಸಿ ಇಳುವರಿ ಮಾಹಿತಿಯನ್ನು ವಿಮಾ ಸಂಸ್ಥೆಗೆ ಒದಗಿಸಬೇಕು ಎಂದು ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
*ರೈತರಲ್ಲಿ ಮನವಿ*:
ಬೆಳೆ ವಿಮಾ ಯೋಜನೆಯಲ್ಲಿ ಆಹಾರ ಬೆಳೆಗಳು, ಎಣ್ಣೆಕಾಳು ಬೆಳೆಗಳು ಮತ್ತು ವಾರ್ಷಿಕ ವಾಣಿಜ್ಯ ಮತ್ತು ತೋಟಗಾರಿಕಾ ಬೆಳೆಗಳನ್ನು ಅಳವಡಿಸಲಾಗಿದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರ ವಿಮಾ ಕಂತಿನ ದರ ಕಡಿಮೆಯಾಗಲಿದ್ದು ಆದ್ದರಿಂದ ಜಿಲ್ಲೆಯ ರೈತರು ಇದರ ಸದುಪಯೋಗ ಪಡೆಯಬೇಕು. ಅಧಿಸೂಚಿತ ಬೆಳೆಗಳಿಗೆ ನೋಂದಾಯಿಸಲು ಜುಲೈ 31 ಕೊನೆಯ ದಿನವಾಗಿದ್ದು, ಕೊನೆಯ ದಿನಾಂಕದವರೆಗೆ ಕಾಯದೇ ಬೇಗನೆ ಬೆಳೆವಿಮಾಗೆ ನೋಂದಣಿ ಮಾಡಿಸಬೇಕು. ಆಧಾರ್, ಮೊಬೈಲ್ ಸಂಖ್ಯೆ ಸೇರಿದಂತೆ ಸರಿಯಾದ ಮಾಹಿತಿ ಒದಗಿಸಿ ಸಹಕರಿಸಬೇಕು ಎಂದು ಸಭೆಯ ಮೂಲಕ ಜಿಲ್ಲಾಧಿಕಾರಿಗಳು ಜಿಲ್ಲೆಯ ರೈತರಲ್ಲಿ ಮನವಿ ಮಾಡಿದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಲ್ಲಿ ನಿರ್ದಿಷ್ಟ ಪ್ರಕೃತಿ ವಿಕೋಪಗಳಾದ ಆಳಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ, ಮೇಘಸ್ಪೋಟ ಮತ್ತು ಗುಡುಗು ಮಿಂಚುಗಳಿಂದ ಉಂಟಾಗುವ ಬೆಂಕಿ ಅವಘಡಗಳಿಂದ ಉಂಟಾಗುವ ನಷ್ಟದ ವಿರುದ್ಧ ವಿಮಾ ವ್ಯಾಪ್ತಿ ಒದಗಿಸಲಾಗುವುದು. ಈ ಯೋಜನೆಯಲ್ಲಿ ರೈತರು ಪೂರ್ಣ ವಿಮಾ ಮೊತ್ತವನ್ನು ಯಾವುದೇ ಕಡಿತವಿಲ್ಲದೆ ಪಡೆಯುತ್ತಾರೆ. ಬೆಳೆ ಕಟಾವಿನ ನಂತರದಲ್ಲಿ ಸಂಭವಿಸುವ ಬೆಳೆನಷ್ಟಕ್ಕೆ ಪರಿಹಾರ ನೀಡಲಾಗುವುದು, ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ಅಧಿಸೂಚಿತ ಘಟಕದಲ್ಲಿ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಟ ಶೇ.25ರಷ್ಟು ಪರಿಹಾರವನ್ನು ವಿಮಾ ಸಂಸ್ಥೆಯು ವಿಮಾ ಮಾಡಿಸಿದ ರೈತರಿಗೆ ಒದಗಿಸಲು ಅವಕಾಶವಿರುತ್ತದೆ. ಮೊಬೈಲ್ ಆಧಾರಿತ ತಂತ್ರಜ್ಞಾನ ಬಳಸಿಕೊಂಡು ಬೆಳೆ ಕಟಾವು ಪ್ರಯೋಗಗಳ ಮೂಲಕ ವಾಸ್ತವಿಕ ಇಳುವರಿಯನ್ನು ಕಂಡು ಹಿಡಿಯಲಾಗುವುದು. 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಧಿಸೂಚಿಸಿದ ಬೆಳೆಗಳಾದ ಭತ್ತ (ನೀರಾವರಿ ಮತ್ತು ಮಳೆ ಆಶ್ರಿತ)., ಮೆಕ್ಕೆಜೋಳ (ನೀರಾವರಿ ಮತ್ತು ಮಳೆ ಆಶ್ರಿತ), ಜೋಳ (ನೀರಾವರಿ ಮತ್ತು ಮಳೆ ಆಶ್ರಿತ)., ಸಜ್ಜೆ (ನೀರಾವರಿ ಮತ್ತು ಮಳೆ ಆಶ್ರಿತ), ನವಣೆ (ಮಳೆ ಆಶ್ರಿತ)., ತೊಗರಿ (ನೀರಾವರಿ ಮತ್ತು ಮಳೆ ಆಶ್ರಿತ)., ಹುರುಳಿ (ಮಳೆ ಆಶ್ರಿತ)., ಸೂರ್ಯಕಾಂತಿ (ನೀರಾವರಿ ಮತ್ತು ಮಳೆ ಆಶ್ರಿತ)., ಎಳ್ಳು (ಮಳೆ ಆಶ್ರಿತ)., ಶೇಂಗಾ (ನೀರಾವರಿ ಮತ್ತು ಮಳೆ ಆಶ್ರಿತ)., ಅಲಸಂದಿ (ಮಳೆ ಆಶ್ರಿತ)., ಹತ್ತಿ (ನೀರಾವರಿ ಮತ್ತು ಮಳೆ ಆಶ್ರಿತ)., ಟೊಮ್ಯಾಟೊ., ಈರುಳ್ಳಿ (ನೀರಾವರಿ ಮತ್ತು ಮಳೆ ಆಶ್ರಿತ)ಗಳಿಗೆ ಬೆಳೆವಿಮೆ ನೋಂದಾಯಿಸಲು ಜುಲೈ 31 ಹಾಗೂ ಹೆಸರು (ಮಳೆ ಆಶ್ರಿತ)ಗೆ ಬೆಳೆವಿಮೆ ಮಾಡಿಸಲು ಜುಲೈ 15 ಕೊನೆಯ ದಿನಾಂಕವಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್. ಅವರು ತಿಳಿಸಿದರು.
*ಅನುಷ್ಠಾನ ಸಂಸ್ಥೆಗೆ ಸೂಚನೆ:*
ಕೊಪ್ಪಳ ಜಿಲ್ಲೆಗೆ ಪ್ಯೂಚರ್ ಜನರಲಿ ಇಂಡಿಯಾ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಸಂಸ್ಥೆಯು ಆಯ್ಕೆಯಾಗಿದೆ. ಕೃಷಿ ಇಲಾಖೆಯಿಂದ ಇಳುವರಿ ಮಾಹಿತಿ ಪಡೆದು ಬೆಳೆವಿಮಾ ನಷ್ಟ ಪರಿಹಾರ ಲೆಕ್ಕ ಹಾಕಲು ಮತ್ತು ಅಂತಿಮಗೊಳಿಸಲು ಸೂಚಿಸಲಾಗಿದೆ. ಜಿಲ್ಲಾ ಹಾಗೂ ತಾಲೂಕುಮಟ್ಟದಲ್ಲಿ ಯೋಜನೆಯನ್ನು ಉತ್ತಮವಾಗಿ ಅನುಷ್ಠಾನಗೊಳಿಸಲು ಮತ್ತು ರೈತರ ಬೆಳೆ ವಿಮಾ ಸಮಸ್ಯೆ ಬಗೆಹರಿಸಲು ಕೃಷಿ ಪದವೀಧರರನ್ನು ನೇಮಿಸಲು ತಿಳಿಸಲಾಗಿದೆ. ಬೆಳೆ ಕಟಾವು ಪ್ರಯೋಗಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಮತ್ತು ಜಿಲ್ಲಾ ಹಾಗೂ ತಾಲೂಕುಮಟ್ಟದಲ್ಲಿ ಕಚೇರಿಗಳನ್ನು ಸ್ಥಾಪಿಸಲು ಸಂಬಂಧಿಸಿದ ಪ್ಯೂಚರ್ ಜನರಲಿ ಇಂಡಿಯಾ ಇನ್ಸೂರೆನ್ಸ್ ಕಂಪನಿಗೆ ಸೂಚಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಸಭೆಗೆ ತಿಳಿಸಿದರು.
*ಪೋಸ್ಟರ್ ಬಿಡುಗಡೆ:*
2023-24ನೇ ಸಾಲಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯನ್ನು ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಜಂಟಿ ನಿರ್ದೇಶಕರು ಕೊಪ್ಪಳ ಇವರು ಮುದ್ರಿಸಿದ ಗ್ರಾಪಂ ಮಟ್ಟದಲ್ಲಿ ಅಧಿಸೂಚಿತ ಬೆಳೆಗಳ ವಿವರ, ರೈತರು ಬೆಳೆ ವಿಮೆ ಮಾಡಿಸಬೇಕಾದ ಕ್ರಮಗಳು ಸೇರಿದಂತೆ ಇನ್ನೀತರ ಮಾಹಿತಿಯ ಪೋಸ್ಟರನ್ನು ಇದೆ ವೇಳೆ ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು.
ಸಭೆಯಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು, ಸಹಕಾರ ಇಲಾಖೆಯ ಉಪ ನಿಬಂಧಕರು, ಲೀಡ್ ಬ್ಯಾಂಕ್ ಮ್ಯಾನೇಜರ್, ತೋಟಗಾರಿಕೆ, ರೇಷ್ಮೆ ಇಲಾಖೆಯ ಉಪ ನಿರ್ದೇಶಕರು, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು, ಜಿಲ್ಲಾ ವಾರ್ತಾಧಿಕಾರಿಗಳು, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು, ಸಾಮಾನ್ಯ ಸೇವಾ ಕೇಂದ್ರ ಮತ್ತು ಗ್ರಾಮ ಒನ್‌ದ ಜಿಲ್ಲಾ ವ್ಯವಸ್ಥಾಪಕರು, ಪ್ಯೂಚರ್ ಜನರಲ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯ ಪ್ರತಿನಿಧಿಗಳು ಹಾಗೂ ಕೃಷಿ ಇಲಾಖೆಯ ವಿವಿಧ ತಾಲೂಕುಗಳ ಸಹಾಯಕ ನಿರ್ದೇಶಕರು ಮತ್ತು ಇನ್ನಿತರರು ಇದ್ದರು.