deshadoothanews

ಡಿಎಚ್‌ಓ ಅವರಿಂದ ಮುಂದುವರೆದ ಕ್ಷೇತ್ರ ಭೇಟಿ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್.
ಕೊಪ್ಪಳ : ಯಲಬುರ್ಗಾ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ವಜ್ರಬಂಡಿ ವ್ಯಾಪ್ತಿಯ ಸಾಲಬಾವಿ ಗ್ರಾಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಅಲಕನಂದಾ ಮಳಗಿ ಮತ್ತು ಅವರ ತಂಡವರು ಜೂನ್ 13ರ ಸಂಜೆ ಭೇಟಿ ನೀಡಿ ಶಂಕಿತ ವಾಂತಿ ಬೇಧಿ ಪ್ರಕರಣಗಳ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚಿಸಿದರು.

ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದ ಆರೋಗ್ಯ ಕೆಡುತ್ತದೆ. ಜನರು ಸ್ವಚ್ಚತೆ ಕಡೆ ಹೆಚ್ಚು ಗಮನ ಹರಿಸಬೇಕು. ಮನೆಯಲ್ಲಿ ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳಬೇಕು. ಕುದಿಸಿ ಆರಿಸಿದ ನೀರು, ಬಿಸಿ-ಬಿಸಿ ಆಹಾರ ಸೇವನೆ ಮಾಡಬೇಕು. ಕಡ್ಡಾಯ ಎಲ್ಲರೂ ಶೌಚಾಲಯ ಬಳಸಬೇಕು. ಆಹಾರ ತಯಾರಿಸುವ ಮುನ್ನ, ಶೌಚಾಲಯ ಬಳಸಿದ ನಂತರ ಹಾಗೂ ಮಕ್ಕಳ ಶೌಚ ಸ್ವಚ್ಚಗೊಳಿಸಿದ ನಂತರ ಕಡ್ಡಾಯ ಕೈಗಳಿಗೆ ಸೋಪು ಬಳಸಿ ತೊಳೆದುಕೊಳ್ಳಬೇಕು. ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳ ಮೇಲೆ ಪಾತ್ರೆಗಳನ್ನು ಮುಚ್ಚಿಡಬೇಕೆಂದು ಮಾಹಿತಿ ನೀಡಿದರು.


ಶಾಲೆಯಲ್ಲಿ ಸಂಶಯಾಸ್ಪದ ವಾಂತಿ-ಬೇಧಿ ಪ್ರಕರಣಗಳಿಗೆ ಚಿಕಿತ್ಸೆ ನೀಡಲು ತುರ್ತು ಚಿಕಿತ್ಸಾ ಕೇಂದ್ರ ಪ್ರಾರಂಭಿಸಲಾಗಿದ್ದು, ಯಾರಿಗಾದರು ವಾಂತಿ-ಬೇಧಿಯಾದರೆ ನಿರ್ಲಕ್ಷö್ಯ ಮಾಡದೆ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿ ಔಷಧಿ ತೆಗೆದುಕೊಳ್ಳುವಂತೆ ತಿಳಿಸಿದರು. ಯಾರು ಭಯಪಡದಂತೆ ಮುಂಜಾಗ್ರತೆ ವಹಿಸಲು ಸಲಹೆ ಮಾಡಿದರು.

ಪ್ರತಿಯೊಂದು ತುರ್ತು ಚಿಕಿತ್ಸಾ ಕೇಂದ್ರಕ್ಕೆ ಒಂದು ಆಂಬ್ಯುಲೆನ್ಸ್ ವಾಹನ ಹಾಗೂ ವೈದ್ಯಾಧಿಕಾರಿಗಳ ಮತ್ತು ಇತರೆ ಸಿಬ್ಬಂದಿಯನ್ನು ನೀಯೋಜಿಸಿ ಮುಂಜಾಗ್ರತೆ ಕ್ರಮಕೈಗೊಳ್ಳಲು ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಜೊತೆ ಕುಡಿಯುವ ನೀರಿನ ಪೈಪ್‌ಲೈನ್ ಸೋರಿಕೆ ಬಗ್ಗೆ ಚರ್ಚಿಸಿ ದುರಸ್ಥಿಗೊಳಿಸಿ ಶುದ್ಧ ಕುಡಿಯುವ ನೀರು ಪೂರೈಸುವಂತೆ ತಿಳಿಸಿದರು.

ತಹಸೀಲ್ದಾರರಾದ ವಿಠ್ಠಲ್ ಚೌಗಲೆ, ತಾಪಂ ಅಧಿಕಾರಿಗಳಾದ ಸಂತೋಷ ಪಾಟೀಲ್, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಸುಮಾ ಪಾಟೀಲ್, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Leave A Reply

Your email address will not be published.