deshadoothanews

17ನೇ ಸಾಂಖ್ಯಿಕ ದಿನಾಚರಣೆ, ಪ್ರೋ. ಪಿ.ಸಿ.ಮಹಾಲನೋಬಿಸ್ ಜನ್ಮ ದಿನಾಚರಣೆ

ಡಿ ಡಿ ನ್ಯೂಸ್. ಕೊಪ್ಪಳ

0
ಡಿ ಡಿ ನ್ಯೂಸ್. ಕೊಪ್ಪಳ :
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಬೆಂಗಳೂರು ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಾರ್ಯಾಲಯ ಕೊಪ್ಪಳ ಇವರ ಸಹಯೋಗದಲ್ಲಿ 17ನೇ ಸಾಂಖ್ಯಿಕ ದಿನಾಚರಣೆ ಹಾಗೂ ಭಾರತದ ಖ್ಯಾತ ಸಂಖ್ಯಾ ಶಾಸ್ತ್ರಜ್ಞರಾದ ಪ್ರೊ. ಪಿ.ಸಿ.ಮಹಾಲನೋಬಿಸ್ ರವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ಜುಲೈ 25ರಂದು ನಡೆಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿ, ಅಂಕಿ-ಸಂಖ್ಯೆಗಳಿಲ್ಲದೇ ಯಾವುದೇ ಯೋಜನೆಯು ಸಫಲವಾಗಲು ಸಾಧ್ಯವಿಲ್ಲ. ಯೋಜನಾ ತಯಾರಿಕೆಗೆ ಅಂಕಿ-ಸಂಖ್ಯೆಗಳು ಅತ್ಯವಶ್ಯಕವಾಗಿವೆ. ಒಂದು ಹೊಸ ಯೋಜನೆ ಮಾಡಬೇಕು ಎಂದರೆ ಸರಿಯಾದ ಅಂಕಿ ಅಂಶಗಳು ಬೇಕಾಗುತ್ತದೆ. ಅಂಕಿ-ಅಂಶಗಳಲ್ಲಿ ವ್ಯತ್ಯಸವಾದಲ್ಲಿ ಯೋಜನೆಯು ಸಫಲವಾಗುವುದಿಲ್ಲ. ಸಮಸ್ಯೆಗಳನ್ನು ಗುರುತಿಸಲು, ಒಂದು ನಿರ್ಧಿಷ್ಟ ಗುರಿ ತಲುಪಬೇಕಾದರೆ, ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಲು, ಒಂದು ಯೋಜನೆ ಯಶಸ್ವಿಗೊಳ್ಳಬೇಕಾದರೆ ಅಂಕಿ-ಅಂಶಗಳು ಮುಖ್ಯವಾಗಿವೆ. ಈ ನಿಟ್ಟಿನಲ್ಲಿ ಅಂಕಿ-ಅಂಶಗಳನ್ನು ಸಮರ್ಪಕವಾಗಿ ಹೊಂದಾಣಿಕೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಪ್ರಭುರಾಜ ನಾಯಕ ಅವರು ವಿಶೇಷ ಉಪನ್ಯಾಸ ನೀಡಿ, ಸರಿಯಾದ ಅಂಕಿ-ಅಂಶಗಳು ದೇಶಕ್ಕೆ ದೂರದೃಷ್ಟಿಯಲ್ಲಿ ಕೊಂಡೊಯುತ್ತವೆ. ಅವಶ್ಯಕತೆಗಳನ್ನು, ಆದ್ಯತೆಗಳನ್ನು ಗುರುತಿಸಿ, ಅಗತ್ಯ ಯೋಜನೆಗಳನ್ನು ಸಿದ್ಧಪಡಿಸಲು, ಆದ್ಯತಾ ವಲಯಗಳನ್ನು ಗುರುತಿಸಲು, ಅಂಕಿ-ಸಂಖ್ಯೆ ಬಹಳಷ್ಟು ಪ್ರಮುಖ ಪಾತ್ರ ವಹಿಸುತ್ತವೆ. “ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಮೇಲ್ವಿಚಾರಣೆ ಮಾಡಲು ರಾಷ್ಟ್ರೀಯ ಸೂಚಕಗಳ ಚೌಕಟ್ಟಿನೊಂದಿಗೆ ರಾಜ್ಯ ಸೂಚಕಗಳ ಚೌಕಟ್ಟಿನ ಜೋಡಣೆ” ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ 17ನೇ ಸಾಂಖ್ಯಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಿತಿ ಮೀರಿದ ನಿಸರ್ಗದ ಶೋಷಣೆ ಅಂಕಿ-ಸಂಖ್ಯೆಗಳ ಕೊರತೆಯಿಂದ ದೊಡ್ಡಪ್ರಮಾಣದ ಸುಸ್ಥಿರ ಪ್ರಗತಿಗೆ ಧಕ್ಕೆ ಬರುತ್ತದೆ. ಮಾನವನ ಅಭಿವೃದ್ಧಿಗೆ ಬೇಕಾಗಯವ ಎಲ್ಲಾ ಸೌಲಭ್ಯಗಳನ್ನು ನಿಸರ್ಗ ಪೂರೈಸುತ್ತದೆ. ಆದರೆ, ಮನುಷ್ಯನ ದುರಾಸೆಗಳಿಗೆ ನಿಸರ್ಗ ಬಲಿಯಾಗುತ್ತಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ ಅವರು ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿಗಳಾದ ಡಿ.ಮಂಜುನಾಥ, ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್., ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳಾದ ಸುಧಾಕರ್ ಮಾನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
Leave A Reply

Your email address will not be published.