ಡಿ ಡಿ ನ್ಯೂಸ್. ಕೊಪ್ಪಳ :
ಒನ್ ಸ್ಟೇಟ್ ಒನ್ ಜಿಪಿಎಸ್ ತಂತ್ರಾಂಶದಲ್ಲಿ ನೋದಾಯಿಸಿಕೊಂಡು ಸಂಯೋಜನೆ ಹೊಂದಿದ ವಾಹನಗಳಿಗೆ ಮಾತ್ರ ಖನಿಜ ಸಾಗಾಣಿಕೆ ಪರವಾನಗೆ ವಿತರಿಸಲಾಗುವುದು ಎಂದು ಕೊಪ್ಪಳ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ತಿಳಿಸಿದ್ದಾರೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯು ರಾಜ್ಯದಲ್ಲಿ ಅನಧಿಕೃತ ಖನಿಜ ಸಾಗಾಣಿಕೆ ಮಾಡುವ ವಾಹನಗಳನ್ನು ಪರಿಣಾಮಕಾರಿಯಾಗಿ ನಿರ್ಬಂದಿಸುವ ನಿಟ್ಟಿನಲ್ಲಿ ಖನಿಜ ಸಾಗಣೆ ವಾಹನಗಳ ನಿಗಾವಣೆ ಮಾಡಲು “ಒನ್ ಸ್ಟೇಟ್ ಒನ್ ಜಿಪಿಎಸ್” ತಂತ್ರಾಂಶ ಅಭಿವೃದ್ಧಿಪಡಿಸಿದ್ದು, ಕಾರ್ಯಾನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶನಾಲಯದಿಂದ ಈಗಾಗಲೇ ಮಾರ್ಗಸೂಚಿಗಳನ್ನು ನೀಡಲಾಗಿದೆ. ಒನ್ ಸ್ಟೇಟ್ ಒನ್ ಜಿಪಿಎಸ್ ತಂತ್ರಾಂಶದಲ್ಲಿ ನೋದಾಯಿಸಿಕೊಂಡು ಸಂಯೋಜನೆ ಹೊಂದಿದ ವಾಹನಗಳಿಗೆ ಮಾತ್ರ ಖನಿಜ ಸಾಗಾಣಿಕೆ ಪರವಾನಗೆ ವಿತರಿಸಲು ಸರ್ಕಾರವು ತೀರ್ಮಾನಿಸಿರುತ್ತದೆ.
ಇದಕ್ಕನುಗುಣವಾಗಿ, ಕೊಪ್ಪಳ ಜಿಲ್ಲಾ ವ್ಯಾಪ್ತಿಯಲ್ಲಿ ಎಲ್ಲಾ ಮುಖ್ಯ ಖನಿಜ, ಉಪ ಖನಿಜ ಗುತ್ತಿಗೆದಾರರು, ಪರವಾನಗೆದಾರರು, ಕ್ರಷರ್ ಮಾಲೀಕರು, ಗ್ರಾನೈಟ್ ಕಟಿಂಗ್ & ಪಾಲಿಷಿಂಗ್ ಘಟಕಗಳು ಮತ್ತು ಖನಿಜ ಆಧಾರಿತ ಕಾರ್ಖಾನೆಗಳು, ಸಂಸ್ಕರಣಾ ಘಟಕಗಳಿಂದ ಖನಿಜ ಸಾಗಾಣಿಕೆ ಮಾಡುವ ವಾಹನಗಳ ಮಾಲೀಕರು ಖನಿಜ ಸಾಗಾಣಿಕೆ ಮಾಡುವ ವಾಹನಗಳು, ಲಾರಿ, ಟಿಪ್ಪರ್‌ಗಳಿಗೆ ಎ.ಆರ್.ಎ.ಐ ಅಥವಾ ಐ.ಸಿ.ಎ.ಟಿ ಅನುಮೋದಿತ ಎಐಎಸ್-140-ಸರ್ಟಿಫೈಡ್ ಜಿಪಿಎಸ್ ಉಪಕರಣವನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಈ ಹಿನ್ನಲೆಯಲ್ಲಿ, ಮೆ: ವಿಜ್ಲೈಟ್ ಇನೋವೇಶನ್ ಸೆಂಟರ್‌ರವರು ಈ ಪ್ರಕ್ರಿಯೆಯ ಟೆಂಡರ್‌ನಲ್ಲಿ ಯಶಸ್ವಿ ಬಿಡ್ಡುದಾರರಾಗಿದ್ದು, ಟೆಂಡರ್ ಷರತ್ತುಗಳನ್ವಯ ಈಗಾಗಲೇ ತಂತ್ರಾಂಶ ಅಭಿವೃದ್ಧಿಪಡಿಸಿ ಕಾರ್ಯಾನುಷ್ಠಾನ ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಎಲ್ಲಾ ಜಿಲ್ಲಾ ಮಟ್ಟದ ಕಚೇರಿಗಳಲ್ಲಿನ ಕಂಟ್ರೋಲ್ ರೂಂಗಳಲ್ಲಿ ವಾಹನ ನೋಂದಾವಣೆಯನ್ನು ಪ್ರಾರಂಭಿಸಿರುತ್ತಾರೆ. ಈಗಾಗಲೇ ನಿರ್ದಿಷ್ಟ ಮಾನದಂಡದ ಜಿ.ಪಿ.ಎಸ್ ಹೊಂದಿರುವ ವಾಹನದ ಮಾಲೀಕರು, ಸಾಗಾಣಿಕೆದಾರರು ಸರಕಾರ ಮತ್ತು ಇಲಾಖೆಯಿಂದ ನಿಗದಿಪಡಿಸಲಾದ ವಾಹನ ನೋಂದಣಿ ಶುಲ್ಕ, ತಂತ್ರಾಂಶ ಅಭಿವೃದ್ಧಿ, ವಾರ್ಷಿಕ ನಿರ್ವಹಣೆ, ಮಾನವ ಸಂಪನ್ಮೂಲ ಒಳಗೊಂಡ ವಾರ್ಷಿಕ ವೆಚ್ಚವನ್ನು ಭರಿಸಬೇಕಾಗಿದ್ದು, ವಾಹನಗಳ ನೋಂದಣಿ ಸಮಯದಲ್ಲಿ ರೂ.100 (ಒಂದು ಬಾರಿ) ನೋಂದಣಿ ಶುಲ್ಕ, ವಾರ್ಷಿಕ ನಿರ್ವಹಣೆ ವೆಚ್ಚ ರೂ.500 ಸೇರಿದಂತೆ ಒಟ್ಟು ರೂ.600 ಶುಲ್ಕವನ್ನು ಇಲಾಖೆಯ ಹೆಸರಿನಲ್ಲಿ ತೆರೆಯಲಾದ “ಯೂನಿಯನ್ ಬ್ಯಾಂಕ್” ಖಾತೆಯ ಸಂಖ್ಯೆಗೆ ಇ-ಪಾವತಿ ಗೇಟ್‌ವೇ ಮೂಲಕ (ಆನ್‌ಲೈನ್ ಪೆಮೆಂಟ್) ಖಾತೆ ಸಂ: 309122010001204 ಕ್ಕೆ ವಾಹನ ಮಾಲೀಕರು ಪಾವತಿಸಬೇಕು. ನಿರ್ದಿಷ್ಟ ಮಾನದಂಡದ ಜಿಪಿಎಸ್ ಇಲ್ಲದ ಮಾಹನಗಳ ಮಾಲೀಕರು, ಸಾಗಾಣಿಕೆದಾರರು ಮಾರುಕಟ್ಟೆಯಲ್ಲಿ ಲಭ್ಯವಿರುವ ಎ.ಆರ್.ಎ.ಐ ಅಥವಾ ಐ.ಸಿ.ಎ.ಟಿ ಅನುಮೋದಿತ ಎಐಎಸ್-140-ಸರ್ಟಿಫೈಡ್ ಜಿಪಿಎಸ್ ಉಪಕರಣವನ್ನು ತಮ್ಮ ಸ್ವಂತ ವೆಚ್ಚದಲ್ಲಿ ಅಳವಡಿಸಿಕೊಳ್ಳಬಹುದಾಗಿರುತ್ತದೆ.
ಮುಖ್ಯ ಖನಿಜ, ಉಪಖನಿಜ ಗುತ್ತಿಗೆದಾರರು, ಪರವಾನಗೆದಾರರು ಇಲಾಖೆಯ “ಒನ್ ಸ್ಟೇಟ್ ಒನ್ ಜಿಪಿಎಸ್” ತಂತ್ರಾಶದಲ್ಲಿ ನೋಂದಾಯಿತ ವಾಹನಗಳಿಗೆ ಮಾತ್ರ ಖನಿಜ ಸಾಗಾಣಿಕೆ ಪರವಾನಗೆ ವಿತರಿಸುವುದು. ನೋಂದಣಿಯಾಗದಿರುವ ವಾಹನಗಳಿಗೆ ಖನಿಜ ಸಾಗಾಣಿಕೆ ಪರವಾನಗೆ ನೀಡಿದ್ದಲ್ಲಿ ಗುತ್ತಿಗೆದಾರರು, ಪರವಾನಗೆದಾರರು ವಿರುದ್ಧ ಕರ್ನಾಟಕ ಉಪಖನಿಜ ರಿಯಾಯತಿ ನಿಯಮಾವಳಿಗಳು 1994 ರ ನಿಯಮ 6(3) ಮತ್ತು ಕರ್ನಾಟಕ (ಖನಿಜಗಳ ಕಾನೂನುಬಾಹಿರ ಗಣಿಗಾರಿಕೆ, ಸಾಗಾಣಿಕೆ ಮತ್ತು ಸಂಗ್ರಹಣೆ ನಿರ್ಬಂಧ) ನಿಯಮಗಳು, 2011 ರ ಅಧ್ಯಾಯ II (7) ರಂತೆ ಕಾನೂನು ಕ್ರಮ ವಹಿಸಲಾಗುವುದು ಹಾಗೂ ಅಂತಹ ವಾಹನಗಳಿಗೆ ಸರ್ಕಾರದ ಮಾರ್ಗಸೂಚಿಯಂತೆ ದಂಡ ವಿಧಿಸಲಾಗುವುದು ಎಂದು ಕೊಪ್ಪಳ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿಗಳ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.