ಸಂಶಯಾಸ್ಪದ ವಾಂತಿ ಬೇಧಿ ಪ್ರಕರಣ: ಮೈಲಾಪುರ ಗ್ರಾಮಕ್ಕೆ ಡಿ.ಹೆಚ್.ಓ ಭೇಟಿ

ಡಿ ಡಿ ನ್ಯೂಸ್. ಕೊಪ್ಪಳ
ಡಿ ಡಿ ನ್ಯೂಸ್. ಕಾರಟಗಿ ಕೊಪ್ಪಳ : ಕಾರಟಗಿ ತಾಲೂಕಿನ ನವಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಮೈಲಾಪುರ ಗ್ರಾಮದಲ್ಲಿ ಸಂಶಯಾಸ್ಪದ ವಾಂತಿ ಬೇಧಿ ಪ್ರಕರಣ ಕಂಡು ಬಂದ ಪ್ರಯುಕ್ತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ.ಅಲಕನಂದಾ ಡಿ ಮಳಗಿ ಅವರು ತಂಡದೊಂದಿಗೆ ಮೈಲಾಪುರ ಗ್ರಾಮಕ್ಕೆ ಜೂನ್ 22ರಂದು ಭೇಟಿ ನೀಡಿ, ಕುಡಿಯುವ ನೀರಿನ ಮೂಲಗಳ ಪರಿಶೀಲನೆ ಮಾಡಿದರು.

 

ಇದೇ ವೇಳೆ ವೈದ್ಯಾಧಿಕಾರಿಗಳು ಮತ್ತು ಕ್ಷೇತ್ರ ಸಿಬ್ಬಂದಿಗಳ ಜೊತೆ ಕುಡಿಯುವ ನೀರಿನ ಮೂಲಗಳ ಪರೀಕ್ಷೆ ಬಗ್ಗೆ ಚರ್ಚಿಸಿ, ನೀರು ಕುಡಿಯಲು ಯೋಗ್ಯವಾಗಿದ್ದರೆ ಮಾತ್ರ ಪೂರೈಸುವಂತೆ ಹಾಗೂ ಕುಡಿಯಲು ಯೊಗ್ಯವಾಗಿಲ್ಲದಿದ್ದರೆ ಶುದ್ಧಿಕರಿಸಿ (ಕ್ಲೋರಿನೇಶನ್) ಪೂರೈಸುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

 

 

*ಸಾರ್ವಜನಿಕರಿಗೆ ಮಾಹಿತಿ:* ಗ್ರಾಮದ ಸಾರ್ವಜನಿಕರೊಂದಿಗೆ ಮಾತನಾಡಿ, ಕಲುಷಿತ ನೀರು ಹಾಗೂ ಆಹಾರ ಸೇವನೆಯಿಂದ ವಾಂತಿ-ಬೇಧಿ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಕುದಿಸಿ ಆರಿಸಿ ನೀರು ಕುಡಿಯಬೇಕು. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವುದು, ಎಲ್ಲರೂ ಕಡ್ಡಾಯವಾಗಿ ಶೌಚಾಲಯ ಬಳಸಬೇಕು. ಶೌಚಾಲಯಕ್ಕೆ ಹೋಗಿಬಂದ ನಂತರ ಆಹಾರ ತಯಾರಿಸುವ ಮುನ್ನ ಕೈಗಳನ್ನು ಸೋಪು ಬಳಸಿ ತೊಳೆದುಕೊಳ್ಳುವಂತೆ ಮಾಹಿತಿ ನೀಡಿದರು.

 

ಬಳಿಕ ಗ್ರಾಮದಲ್ಲಿ ಸಂಚರಿಸಿ, ಸ್ವಚ್ಛತೆ ಕಾಪಾಡುವಂತೆ ಹಾಗೂ ಬ್ಲಿಚಿಂಗ್ ಪೌಡರ್ ಸಿಂಪರಣೆ ಮಾಡುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಆಶಾ ಮತ್ತು ಆರೋಗ್ಯ ಸಿಬ್ಬಂದಿಗಳು ಗ್ರಾಮದ ಮನೆ ಮತ್ತು ಶಾಲೆಗಳಿಗೆ ಭೇಟಿ ನೀಡಿ, ಮುಂಜಾಗೃತೆ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಡಿ.ಹೆಚ್.ಓ ಅವರು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ.ಶರಣಪ್ಪ ಸಿ., ಕಾರಟಗಿ ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಶಕುಂತಲಾ ಪಾಟೀಲ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ವಿಜಯ ಪ್ರಸಾದ ಸೇರಿದಂತೆ ವೈದ್ಯಾಧಿಕಾರಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
Comments (0)
Add Comment