ಜಿಲ್ಲಾಧಿಕಾರಿಗಳಿಂದ ಮುಂದುವರೆದ ಗ್ರಾಮೀಣ ಪ್ರವಾಸ: ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಸಭೆ —

ಡಿ ಡಿ ನ್ಯೂಸ್. ಕೊಪ್ಪಳ
ಡಿ ಡಿ ನ್ಯೂಸ್. ಕೊಪ್ಪಳ : ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಪ್ರವಾಸ ಮುಂದುವರೆಸಿರುವ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಜೂನ್ 20ರಂದು ಸಹ ಯಲಬುರ್ಗಾ ಮತ್ತು ಕುಕನೂರು ತಾಲೂಕುಗಳಲ್ಲಿ ಸಂಚರಿಸಿದರು.
ಯಲಬುರ್ಗಾ ತಾಲೂಕಿಗೆ ಭೇಟಿ ನೀಡಿದ ವೇಳೆಯಲ್ಲಿ ಯಲಬುರ್ಗಾ ಮತ್ತು ಕುಕನೂರ ಪಟ್ಟಣಗಳಲ್ಲಿನ ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಅಲ್ಲಿನ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳೊಂದಿಗೆ ಮಾತನಾಡಿ ಖುದ್ದು ಪರಿಶೀಲಿಸಿದರು.
ಆಧಾರ್ ಕೇಂದ್ರಕ್ಕೆ ಭೇಟಿ ನೀಡಿದ ವೇಳೆ ಜಿಲ್ಲಾಧಿಕಾರಿಗಳು ಅಲ್ಲಿದ್ದ ವಿದ್ಯಾರ್ಥಿಗಳು, ನಾಗರಿಕರು ಮತ್ತು ಮಹಿಳೆಯರೊಂದಿಗೆ ಆಪ್ತವಾಗಿ ಮಾತನಾಡಿ ಅಲ್ಲಿನ ಸೇವೆಗಳ ಬಗ್ಗೆ ಖುದ್ದು ಅವಲೋಕನ ನಡೆಸಿದರು. ಬಳಿಕ ರೈತ ಸಂಪರ್ಕ ಕೇಂದ್ರಕ್ಕೆ ಸಹ ಭೇಟಿ ನೀಡಿ ವಿವಿಧ ಬಿತ್ತನೆ ಬೀಜಗಳ ದಾಸ್ತಾನು, ಮಾರಾಟದ ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆದರು.
ಬಳಿಕ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ತಹಸೀಲ್ದಾರರು ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸೇರಿದಂತೆ ಇನ್ನೀತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಾನಾ ವಿಷಯಗಳ ಬಗ್ಗೆ ಚರ್ಚಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಮಳೆಯಿಂದಾಗಿ ಬೆಳೆಹಾನಿ ಮತ್ತು ಮನೆ ಹಾನಿಗೆ ಬಗ್ಗೆ ವರದಿಯಾದಲ್ಲಿ ವಿಳಂಬವಾಗದ ಹಾಗೆ ಸಂಬಂಧಿಸಿದ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ ಪರಿಹಾರಕ್ಕಾಗಿ ತಹಸೀಲ್ದಾರ ಅವರಿಗೆ ವರದಿ ಮಾಡಬೇಕು. ಮಾನವ ಜೀವ ಹಾನಿ ಹಾಗೂ ಜಾನುವಾರ ಪ್ರಾಣಹಾನಿ ಪ್ರಕರಣಗಳಿಗೆ ಕಾಲಮಿತಿಯೊಳಗೆ ಪರಿಹಾರಕ್ಕೆ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ವಾಡಿಕೆಯಂತೆ ಮಳೆಗಳು ಸುರಿಯದ ಕಾರಣ ವಾತಾವರಣದಲ್ಲಿ ಅಸಮತೋಲನ ಕಾಣಿಸಿದ್ದು ಸಾರ್ವಜನಿಕರ ಆರೋಗ್ಯ ಬಗ್ಗೆ ಕಾಳಜಿ ವಹಿಸಲು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು.
ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರಿ ಪೂರೈಸುವ ನಿಟ್ಟಿನಲ್ಲಿ ಮೇಲ್ಮಟ್ಟದ ಜಲಾಗಾರ, ಕೆರೆ, ಕೊಳವೆಬಾವಿ ನೀರನ್ನು ಪರೀಕ್ಷಿಸಿ ಜನರಿಗೆ ಪೂರೈಸಬೇಕು. ಯಾವುದೇ ಸಮಯದಲ್ಲಿ ಮಳೆಗಳು ಬೀಳಬಹುದಾಗಿದ್ದು, ಕಾಲಕಾಲಕ್ಕೆ ತಾಲೂಕುಮಟ್ಟದದಲ್ಲಿ ಸಹ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿ ಮುಂಜಾಗ್ರತೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಳೆಗಾಲ ಸಂದರ್ಭದಲ್ಲಿ ನೀರು ನಿಲ್ಲದಂತೆ ತಗ್ಗು ಗುಂಡಿ ಪ್ರದೇಶಗಳನ್ನು ಸಮತಟ್ಟುಗೊಳಿಸಬೇಕು. ಡೆಂಗೆ, ಚಿಕೂನ್‌ಗುನ್ಯ ಹರಡದಂತೆ ಸೊಳ್ಳೆಗಳ ನಿಯಂತ್ರಣಕ್ಕೆ ವ್ಯವಸ್ಥೆ ಮಾಡಬೇಕು. ಪ್ರತಿಯೊಂದು ಹಳ್ಳಿಗಳಲ್ಲಿ ಮತ್ತು ಪಟ್ಟಣ ಪ್ರದೇಶದ ಎಲ್ಲಾ ಕಡೆಗಳಲ್ಲಿ ಶುಚಿತ್ವ ಕಾಯ್ದುಕೊಳ್ಳಲು ಕ್ರಮ ವಹಿಸಲು ಸಂಬಂಧಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ತಾಲೂಕು ಪಂಚಾಯತ್ ಇಓಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಹವಾಮಾನ ಆಧಾರಿತ ಬೆಳೆ, ಬೀಜೋಪಚಾರದ ಬಗ್ಗೆ ರೈತರಿಗೆ ಕಾಲಕಾಲಕ್ಕೆ ಸಲಹೆ ಮಾಡಿಬೇಕು. ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಮತ್ತು ಕೃಷಿ ಅಧಿಕಾರಿಗಳು ರೈತರೊಂದಿಗೆ ಸಾವಧಾನದಿಂದ ವರ್ತಿಸಬೇಕು ಎಂದು ಜಿಲ್ಲಾಧಿಕಾರಿಗಳು ತಾಲೂಕುಮಟ್ಟದ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ಯಲಬುರ್ಗಾ ತಾಲೂಕಿನಲ್ಲಿ ಒಬ್ಬರು ಮತ್ತು ಕುಕನೂರ ತಾಲೂಕಿನಲ್ಲಿ ಒಬ್ಬರು ಸಿಡಿಲಿನಿಂದಾಗಿ ಮೃತಪಟ್ಟಿದ್ದು, ಮೃತರ ಕುಟುಂದವರಿಗೆ ಈಗಾಗಲೇ ತಲಾ 5 ಲಕ್ಷ ರೂ.ಗಳಂತೆ 10 ಲಕ್ಷ ರೂ.ಪರಿಹಾರ ನೀಡಲಾಗಿದೆ. ಕೂಕನೂರ ತಾಲೂಕಿನಲ್ಲಿ ವರದಿಯಾದ 4 ಜಾನುವಾರು ಪ್ರಾಣಹಾನಿ ಪ್ರಕರಣಗಳಿಗೆ 16.000 ರೂ. ಪರಿಹಾರ ಮತ್ತು ಯಲಬುರ್ಗಾ ತಾಲೂಕಿನಲ್ಲಿ ವರದಿಯಾದ 5 ಜಾನುವಾರು ಪ್ರಾಣ ಹಾನಿ ಪ್ರಕರಣಗಳಿಗೆ 1,25,500 ರೂ. ಪರಿಹಾರ ನೀಡಲಾಗಿದೆ. ಕೂಕನೂರ ತಾಲೂಕಿನಲ್ಲಿ ಇದುವರೆಗೆ ವರದಿಯಾದ 9 ಮನೆ ಹಾನಿ ಪ್ರಕರಣಗಳಿಗೆ ಮತ್ತು ಯಲಬುರ್ಗಾ ತಾಲೂಕಿನಲ್ಲಿ ವರದಿಯಾದ 22 ಮನೆ ಹಾನಿ ಪ್ರಕರಣಗಳಿಗೆ ಸಹ ಪರಿಹಾರ ವಿತರಿಸಲಾಗಿದೆ ಎಂದು ಸಹಾಯಕ ಆಯುಕ್ತರಾದ ಬಸವಣ್ಣೆಪ್ಪ ಕಲಶೆಟ್ಟಿ ಸಭೆಗೆ ಮಾಹಿತಿ ನೀಡಿದರು ಅವರು ತಿಳಿಸಿದರು.
ಜೂನ್ 19ರವರೆಗೆ ಕುಕನೂರ ತಾಲೂಕು ಸೇರಿದಂತೆ ಯಲಬುರ್ಗಾ ತಾಲೂಕಿನಲ್ಲಿ 1288.15 ಕ್ವಿಂಟಲ್ ಮೆಕ್ಕೆಜೋಳದ ಬೀಜಗಳು ಮಾರಾಟವಾಗಿದ್ದು 811.53 ಕ್ವಿಂಟಲ್ ದಾಸ್ತಾನು ಇದೆ. 61.47 ಕ್ವಿಂಟಲ್ ಸಜ್ಜೆ ಮಾರಾಟವಾಗಿದ್ದು 61.08 ಕ್ವಿಂಟಲ್ ದಾಸ್ತಾನು ಇದೆ. 108.29 ಕ್ವಿಂಟಲ್ ಹೆಸರು ಬೀಜಗಳು ಮಾರಾಟವಾಗಿದ್ದು 21.71 ಕ್ವಿಂಟಲ್ ದಾಸ್ತಾನು ಇದೆ. 18.98 ಕ್ವಿಂಟಲ್ ತೊಗರಿ ಮಾರಾಟವಾಗಿದ್ದು 55.82 ಕ್ವಿಂಟಲ್ ದಾಸ್ತಾನು ಇದೆ. 4.97 ಕ್ವಿಂಟಲ್ ಸೂರ್ಯಕಾಂತಿ ಮಾರಾಟವಾಗಿದ್ದು 34.91 ಕ್ವಿಂಟಲ್ ಬೀಜಗಳ ದಾಸ್ತಾನು ಇದೆ. ಪ್ರಸಕ್ತ
ಮುಂಗಾರು ಹಂಗಾಮಿನಲ್ಲಿ ಮಾರ್ಚ 1ರಿಂದ ಮೇ 31ರವರೆಗೆ ಯಲಬುರ್ಗಾ ತಾಲೂಕಿನಲ್ಲಿ ವಾಡಿಕೆ ಮಳೆ 83 ಮಿಮಿ ಇದ್ದು ವಾಸ್ತವವಾಗಿ 72 ಮಿಮಿ ಸುರಿದು ಶೇ.13ರಷ್ಟು ಮಳೆ ಕೊರತೆಯಾಗಿದೆ. ಅದೆ ರೀತಿ ಕುಕನೂರ ತಾಲೂಕಿನಲ್ಲಿ ವಾಡಿಕೆ ಮಳೆ 116 ಮಿಮಿ ಇದ್ದು ವಾಸ್ತವವಾಗಿ 84 ಮಿಮಿ ಸುರಿದು ಶೇ.28 ಮಳೆ ಕೊರತೆಯಾಗಿದೆ ಎಂದು ಕೃಷಿ ಅಧಿಕಾರಿಗಳು ವರದಿ ನೀಡಿದ್ದಾರೆ ಎಂದು ತಹಸೀಲ್ದಾರ ಅವರು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಯಲಬುರ್ಗಾ ತಹಸೀಲ್ದಾರ ವಿಠ್ಠಲ ಚೌಗಲೆ, ಯಲಬುಗಾ ತಾಪಂ ಇಓ ಸಂತೋಷ ಬಿರಾದಾರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಕಾಶ ಮಠದ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.
Comments (0)
Add Comment