ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ

ಡಿ ಡಿ ನ್ಯೂಸ್. ಕೊಪ್ಪಳ

ಡಿ ಡಿ ನ್ಯೂಸ್.

ಕೊಪ್ಪಳ  (ಕರ್ನಾಟಕ ವಾರ್ತೆ):  ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ವರದಿಯಾದ ಶಂಕಿತ ವಾಂತಿ ಬೇಧಿ ಪ್ರಕರಣಗಳ ಬಗ್ಗೆ ತೀವ್ರ ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಸುದರೇಶಬಾಬು ಅವರು ಸಂಬಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.

ಜಿಲ್ಲಾಡಳಿತ ಭವನದಲ್ಲಿನ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಜೂನ್ 13ರಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಆಯಾ ಕಡೆಗಳಲ್ಲಿ ಅಂಬುಲೆನ್ಸಗಳನ್ನು ಸುಸಜ್ಜಿತ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಯಾವುದೇ ಗ್ರಾಮಗಳಲ್ಲಿ ಯಾರಿಗಾದರು ವಾಂತಿ ಬೇಧಿ ಕಂಡು ಬಂದಿದೆ ಎನ್ನುವ ಮಾಹಿತಿ ಬಂದ ಕೂಡಲೇ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯು ತಕ್ಷಣ ಸ್ಥಳಕ್ಕೆ ದಾವಿಸಿ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಬೇಕು. ವಾಂತಿ ಬೇಧಿಯಾದಾಗ ತೀರಾ ಅಸ್ತವ್ಯಸ್ತವಾಗುವ ಮಕ್ಕಳ ಆರೋಗ್ಯ ಬಗ್ಗೆ ವಿಶೇಷ ನಿಗಾವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಆಯಾ ಹಳ್ಳಿಗಳಲ್ಲಿ ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರು ಪ್ರತಿ ದಿನ ಮನೆಮನೆಗೆ ಭೇಟಿ ನೀಡಿ ಯಾರಿಗಾದರು ವಾಂತಿ ಬೇಧಿ ಆಗುತ್ತಿದ್ದರೆ ಅಂತಹವರನ್ನು ಕೂಡಲೇ ಚಿಕಿತ್ಸೆಗೆ ದಾಖಲಿಸಲು ದವಾಖಾನೆಗೆ ಕಳುಹಿಸುವ ಸಂಬಧ ಮಾಹಿತಿ ನೀಡಬೇಕು. ಕಾಯಿಸಿ ಆರಿಸಿದ ನೀರನ್ನು ಕುಡಿಯಲು ಜನತೆಗೆ ತಿಳಿ ಹೇಳಬೇಕು. ಆರೋಗ್ಯ ಜಾಗೃತಿ ಮೂಡಿಸುವ ಬಗ್ಗೆ ಎಲ್ಲಾ ಆಶಾಗಳಿಗೆ ಕಾಲಕಾಲಕ್ಕೆ ವಿಶೇಷ ತರಬೇತಿಗೆ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಆಯಾ ತಾಲೂಕು ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಆರೋಗ್ಯ ಇಲಾಖೆ ಮಾತ್ರ ನೋಡಿಕೊಳ್ಳಲಿ ಎನ್ನುವ ಸಂಕುಚಿತ ಮನೋಭಾವ ಯಾರಲ್ಲೂ ಬರಕೂಡದು. ಗ್ರಾಮ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ತಾಲೂಕು ಪಂಚಾಯತ್ ಸೇರಿದಂತೆ ಇನ್ನೀತರ ಬೇರೆ ಬೇರೆ ಇಲಾಖೆಗಳು ಸೇರಿ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ತಹಸೀಲ್ದಾರರು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ಸೂಕ್ತ ಮೇಲ್ವಿಚಾರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.

ನಿರಂತರವಾಗಿ ಯಾವುದೇ ಒಂದು ನಿರ್ದಿಷ್ಟ ಪ್ರದೇಶಗಳಲ್ಲಿ ವಾಂತಿ ಬೇಧಿ ಪ್ರಕರಣಗಳು ಮರುಕಳಿಸುತ್ತಿದ್ದರೆ ಅದಕ್ಕೆ ವಿಶೇಷ ಕಾರಣಗಳು ಏನಿರಬಹುದು ಎಂಬುದರ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸಬೇಕು. ಗ್ರಾಮಗಳಲ್ಲಿ ಚರಂಡಿ ಶುಚಿತ್ವಕ್ಕೆ ಆದ್ಯತೆ ಕೊಡಬೇಕು. ಎಲ್ಲಿಯೂ ನೀರು ನಿಲ್ಲದ ಹಾಗೆ ನೋಡಿಕೊಳ್ಳಬೇಕು. ಕಲುಷಿತ ನೀರು ಕುಡಿಯುವ ನೀರು ಸರಬರಾಜಿನ ಪೈಪುಗಳಲ್ಲಿ ಸೇರದ ಹಾಗೆ ಮುಂಜಾಗ್ರತೆ ವಹಿಸಬೇಕು. ಕುಡಿಯುವ ನೀರು ಪೂರೈಸುವ ಮೊದಲು ಕಡ್ಡಾಯ ನೀರನ್ನು ಪರೀಕ್ಷೆಗೊಳಪಡಿಸಬೇಕು. ಟ್ಯಾಂಕರ್ ಸೇರಿದಂತೆ ಯಾವುದೇ ಬಗೆಯ ನೀರಿನ ಸಂಗ್ರಹಗಳನ್ನು ಕಾಲಕಾಲಕ್ಕೆ ವೈಜ್ಞಾನಿಕ ರೀತಿಯಲ್ಲಿ ಶುಚಿಗೊಳಿಸಬೇಕು. ಈ ಕಾರ್ಯವು ಎಲ್ಲಾ ಕಡೆಗಳಲ್ಲಿ ಆಯಾ ಗ್ರಾಮ ಪಂಚಾಯತಗಳು ಮತ್ತು ಇನ್ನೀತರ ಇಲಾಖೆಯ ಸಹಯೋಗದೊಂದಿಗೆ ನಿಯಮಿತವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಗ್ರಾಮಮಟ್ಟದ ಎಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಿದರು. ಈ ಬಗ್ಗೆ ಜಿಲ್ಲಾಮಟ್ಟದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮತ್ತು ತಾಲೂಕು ಮಟ್ಟದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳು ಸೂಕ್ತವಾದ ಮೇಲ್ವಿಚಾರಣೆ ಮಾಡಬೇಕು ಎಂದು ಅವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿನ ಶಂಕಿತ ವಾಂತಿ ಬೇಧಿ ಪ್ರಕರಣಗಳ ನಿಯಂತ್ರಣಕ್ಕೆ ವಿಶೇಷ ನಿಗಾವಹಿಸಲಾಗಿದೆ. ಎಲ್ಲಾ ತಾಲೂಕು ಆರೋಗ್ಯಾಧಿಕಾರಿಗಳು, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು ಸೂಕ್ತ ಮಾರ್ಗದರ್ಶನ ಮಾಡಲಾಗುತ್ತಿದೆ. ವಾಂತಿ ಬೇಧಿ ವರದಿಯಾದ ಗ್ರಾಮಗಳಲ್ಲಿ ಚಿಕಿತ್ಸಾ ಕೇಂದ್ರಗಳನ್ನು ಮುಂದುವರೆಸಲಾಗಿದೆ. ಅಗತ್ಯ ಪ್ರಮಾಣದಲ್ಲಿ ಔಷಧಿ ಲಭ್ಯತೆಗೆ ಒತ್ತು ನೀಡಲಾಗಿದೆ. ತಾವು ಸಹ ಖುದ್ದು ಭೇಟಿ ನೀಡಿ ಚಿಕಿತ್ಸಾ ಕೇಂದ್ರಗಳಲ್ಲಿನ ವ್ಯವಸ್ಥೆ ಮತ್ತು ಚಿಕಿತ್ಸಾ ಕೇಂದ್ರಗಳಲ್ಲಿ ದಾಖಲಾದ ರೋಗಿಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡು ಮೇಲ್ವಿಚಾರಣೆ ಮಾಡುತ್ತಿದ್ದು ಚಿಕಿತ್ಸಾ ಕೇಂದ್ರಗಳಿಗೆ ದಾಖಲಾದವರು ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ, ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಇನ್ನಿತರರು ಇದ್ದರು.

Comments (0)
Add Comment