ನಾನಾ ಗ್ರಾಮಗಳಲ್ಲಿನ ಚಿಕಿತ್ಸಾ ಕೇಂದ್ರಗಳಿಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಭೇಟಿ
ಡಿ ಡಿ ನ್ಯೂಸ್. ಕೊಪ್ಪಳ
ಡಿ ಡಿ ನ್ಯೂಸ್.
ಕೊಪ್ಪಳ: ಸಂಶಯಾಸ್ಪದ ವಾಂತಿ-ಭೇದಿ ಪ್ರಕರಣಗಳು ಕಂಡುಬಂದ ಹಿನ್ನಲೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಾದ ಡಾ.ನಂದಕುಮಾರ ಅವರು ಆರೋಗ್ಯ ಇಲಾಖೆಯ ತಂಡದೊಂದಿಗೆ ಕುಷ್ಟಗಿ ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ದೋಟಿಹಾಳ ವ್ಯಾಪ್ತಿಯ ಬಿಜಕಲ್, ಮುದೇನೂರು ವ್ಯಾಪ್ತಿಯ ಜುಮಲಾಪುರ ಗ್ರಾಮಗಳ ಸ.ಹಿ.ಪ್ರಾ ಶಾಲೆಗಳಲ್ಲಿ ತೆರೆದ ತುರ್ತು ಚಿಕಿತ್ಸಾ ಕೇಂದ್ರಗಳಿಗೆ ಜೂನ್ 13ರ ಸಂಜೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ತುರ್ತು ಚಿಕಿತ್ಸಾ ಕೇಂದ್ರಗಳಲ್ಲಿ ದಾಖಲಾದ ವಾಂತಿ-ಭೇದಿ ಪ್ರಕರಣಗಳು ಹಾಗೂ ಗ್ರಾಮದಲ್ಲಿ ಹೊಸದಾಗಿ ದಾಖಲಾದ ರೋಗಿಗಳ ಬಗ್ಗೆ ವೈದ್ಯಾಧಿಕಾರಿಗಳ ಜೊತೆ ಚರ್ಚಿಸಿ ಕೆಲವು ಸಲಹೆಗಳನ್ನು ನೀಡಿದರು. ತೀವ್ರ ರೀತಿಯ ವಾಂತಿ-ಭೇದಿ ಕಂಡುಬಂದ ರೋಗಿಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಮೇಲ್ಮಟ್ಟದ ಆಸ್ಪತ್ರೆಗೆ ನಿರ್ದೇಶನ ಮಾಡುವಂತೆ ತಿಳಿಸಿದರು. ಕೇಂದ್ರದಲ್ಲಿ ಸಾಕಷ್ಟು ಔಷಧಿ ಲಭ್ಯವಿರುವಂತೆ ನೋಡಿಕೊಳ್ಳಲು ಸಂಬಂಧಪಟ್ಟ ಸಂಸ್ಥೆಯ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಮತ್ತು ಕುಡಿಯುವ ನೀರಿನ ಮೂಲಗಳ ಸ್ಥಳ ಪರಿಶೀಲನೆ ಮಾಡಿದರು.
ಜನರು ಕುದಿಸಿ ಆರಿಸಿದ ಬಿಸಿ-ಬಿಸಿ ಆಹಾರ ಸೇವನೆ ಮಾಡುವ ಬಗ್ಗೆ, ಕಡ್ಡಾಯ ಎಲ್ಲರೂ ಶೌಚಾಲಯ ಬಳಸುವ ಬಗ್ಗೆ, ಆಹಾರ ತಯಾರಿಸುವ ಮುನ್ನ, ಶೌಚಾಲಯ ಬಳಸಿದ ನಂತರ ಹಾಗೂ ಮಕ್ಕಳ ಶೌಚ ಸ್ವಚ್ಚಗೊಳಿಸಿದ ನಂತರ ಕಡ್ಡಾಯ ಕೈಗಳಿಗೆ ಸೋಪು ಬಳಸಿ ತೊಳೆದುಕೊಳ್ಳುವಂತೆ, ಮನೆಯ ಆಹಾರ ಪದಾರ್ಥಗಳನ್ನು ಮುಚ್ಚಿಡುವ ಕುರಿತು ಪ್ರತಿ ದಿನ ಮನೆಮನೆಗೆ ಭೇಟಿ ನೀಡಿ ಅರಿವು ಮೂಡಿಸುವಂತೆ ಆಶಾ ಮತ್ತು ಆರೋಗ್ಯ ಸಿಬ್ಬಂದಿಗೆ ಸೂಚಿಸಿದರು.
ಪ್ರತಿ ದಿನ ದಿನವಹಿ ವರದಿಯನ್ನು ಜಿಲ್ಲಾ ಮಟ್ಟಕ್ಕೆ ಸಲ್ಲಿಸುವಂತೆ ಮೇಲ್ವಿಚಾರಕ ಸಿಬ್ಬಂದಿಗೆ ಸೂಚಿಸಿದರು. ಈ ವೇಳೆ ತಾಲೂಕು ಆರೋಗ್ಯ ಅಧಿಕಾರಿ ಡಾ.ಆನಂದ ಗೋಟೂರ, ಜಿಲ್ಲಾಮಟ್ಟದ ಮೇಲ್ವಿಚಾರಕ ಸಿಬ್ಬಂದಿ, ವೈದ್ಯಾಧಿಕಾರಿಗಳು, ಆಶಾ ಕಾಯಕರ್ತೆಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.