ಬಾಲಕಾರ್ಮಿಕ-ಕಿಶೋರ ಕಾರ್ಮಿಕ ಕಾಯ್ದೆ ಅಡಿ ವಿಶೇಷ ದಾಳಿ, ತಪಾಸಣೆ: ಟಾಸ್ಕ್ ಫೋರ್ಸ್ ಸಮಿತಿ ಸಭೆ
ಡಿ ಡಿ ನ್ಯೂಸ್. ಕೊಪ್ಪಳ
ಡಿ ಡಿ ನ್ಯೂಸ್. ಕೊಪ್ಪಳ :
ಜಿಲ್ಲೆಯಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಕಾಯ್ದೆ ಅಡಿ ವಿಶೇಷ ದಾಳಿ, ತಪಾಸಣೆ ಮತ್ತು ತಾಲೂಕ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯು ಜೂನ್ 19ರಂದು ನಡೆಯಿತು.
ಆರಂಭದಲ್ಲಿ ಕೊಪ್ಪಳ ತಹಶೀಲ್ದಾರರ ಕಚೇರಿಯಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯಿಂದ ಹಮ್ಮಿಕೊಂಡ ತಾಲೂಕ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರೇಡ್-2 ತಹಶೀಲ್ದಾರರಾದ ಗವಿಸಿದ್ದಪ್ಪ ಮನ್ನೂರ ಅವರು ಮಾತನಾಡಿ, ಕೊಪ್ಪಳ ನಗರದಲ್ಲಿ ಬಾಲಕಾರ್ಮಿಕ/ಕಿಶೋರ ಕಾರ್ಮಿಕರು ಕಂಡು ಬರುವ ಸ್ಥಳಗಳನ್ನು ಭೇಟಿ ನೀಡಿ ದಾಳಿ/ತಪಾಸಣೆ ನಡೆಸಿ ಬಾಲಕಾರ್ಮಿಕರನ್ನು ರಕ್ಷಿಸಿ ಅವರನ್ನು ಪುನರ್ವಸತಿಗೊಳಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ವಿಶೇಷ ದಾಳಿ, ತಪಾಸಣೆ: ಸಭೆಯ ಬಳಿಕ ಕೊಪ್ಪಳ ನಗರದಲ್ಲಿ ಬಾಲಕಾರ್ಮಿಕ, ಕಿಶೋರ ಕಾರ್ಮಿಕ ದಾಳಿ, ತಪಾಸಣೆ ಕಾರ್ಯ ಜಿಲ್ಲಾ ಪೋಲಿಸ್ ಉಪ ವರಿಷ್ಠಾಧಿಕಾರಿಗಳಾದ ಶರಣಪ್ಪ ಸುಬೇದಾರ ಅವರ ನೇತೃತ್ವದಲ್ಲಿ ನಡೆಸಲಾಯಿತು. ಈ ತಪಾಸಣೆ ಕಾರ್ಯದಲ್ಲಿ ಕಾರ್ಮಿಕ ನಿರೀಕ್ಷಕರಾದ ಶಿವಶಂಕರ್ ತಳವಾರ, ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ಬಸವರಾಜ ಹಿರೇಗೌಡ್ರ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಜಯಶ್ರೀ ಆರ್, ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಾದ ಪ್ರಕಾಶ ಬಿ., ತಾಲೂಕು ಹಿಂದುಳಿದ ವರ್ಗಗಳ ವಿಸ್ತಿರ್ಣಾಧಿಕಾರಿಗಳಾದ ವಿಜಯಲಕ್ಷ್ಮೀ, ಮಹಿಳಾ ಪೋಲಿಸ್ ಠಾಣೆಯ ಪೋಲಿಸ್ ನಿರೀಕ್ಷಕರಾದ ಉಮೇರ ಬಾನು ಸೇರಿದಂತೆ ಮಕ್ಕಳ ಸಹಾಯವಾಣಿ-1098 ಸಿಬ್ಬಂದಿಗಳು, ಎಸ್.ಜೆ.ಪಿ.ಯು ಸಿಬ್ಬಂದಿಗಳು ಹಾಗೂ ಇನ್ನಿತರೆ ತಾಲೂಕು ಮಟ್ಟದ ಸಿಬ್ಬಂದಿಗಳು/ಅಧಿಕಾರಿಗಳು ಹಾಜರಿದ್ದರು.
ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು: ತಪಾಸಣೆಯಲ್ಲಿ ವಿವಿಧ ವಾಣಿಜ್ಯ ಸಂಸ್ಥೆಗಳನ್ನು ಪರಿಶೀಲಿಸಿದಾಗ, ಪ್ರೀತಂ ಸರ್ವಿಸ್ ಸೆಂಟರ್, ಹಸೀನ ಫ್ಯಾನ್ಸಿ ಸ್ಟೋರ್, ತರಕಾರಿ ವ್ಯಾಪಾರ ಅಂಗಡಿ ಹಾಗೂ ಮಾಜಿಸಾ ಕಿರಾಣಿ ಸ್ಟೋರ್ ಎಂಬ ಸಂಸ್ಥೆಯಲ್ಲಿ ತಲಾ ಒಂದು ಬಾಲಕಾರ್ಮಿಕರು ಪತ್ತೆಯಾಗಿದ್ದು, ಈ ನಾಲ್ಕು ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗಿದೆ.