ಡಿ ಡಿ ನ್ಯೂಸ್. ಕೊಪ್ಪಳ : ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು ಹಾಗೂ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ಕೊಪ್ಪಳ ತಹಶೀಲ್ದಾರರ ಕಚೇರಿ ಸಭಾಂಗಣದಲ್ಲಿ ಬಾಲ್ಯವಿವಾಹ ತಡೆ ಮತ್ತು ಸಮನ್ವಯ ಸಮಿತಿ ಸಭೆ ಜರುಗಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ತಹಶೀಲ್ದಾರರಾದ ಅಮರೇಶ ಬಿರಾದಾರ ಅವರು ಮಾತನಾಡಿ, ಬಾಲ್ಯ ವಿವಾಹವು ಅನಿಷ್ಟ ಪದ್ಧತಿಯಾಗಿದೆ. ಇದು ಶಿಕ್ಷರ್ಹ ಅಪರಾಧವಾಗಿದ್ದು, ರಾಜ್ಯವನ್ನು ಬಾಲ್ಯವಿವಾಹ ಮುಕ್ತವಾಗಿಸುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಬಾಲ್ಯವಿವಾಹ ನಿಷೇಧ ಕಾಯ್ದೆ-2006ಕ್ಕೆ ಕರ್ನಾಟಕ ತಿದ್ದುಪಡಿ-2016ನ್ನು ತಂದಿದ್ದು, ಇದು ದೇಶದಲ್ಲಿಯೇ ಪ್ರಥಮ ಪ್ರಯತ್ನವಾಗಿದೆ. ಈ ತಿದ್ದುಪಡಿ ಕಾಯ್ದೆಯನ್ವಯ 2018ರ ಮಾರ್ಚ್ 03ರ ನಂತರದ ಎಲ್ಲಾ ಬಾಲ್ಯವಿವಾಹಗಳು ಆಸಿಂಧು ವಿವಾಹಗಳಾಗಿರುತ್ತವೆ. ಅಪ್ರಾಪ್ತ ವಯಸಿನ ಬಾಲಕಿಯನ್ನು ಮದುವೆಯಾದವರ, ಮದುವೆಯನ್ನು ಮಾಡಿದವರ ಹಾಗೂ ಈ ಮದುವೆಗೆ ಸಹಕಾರ ಮತ್ತು ಪ್ರೊತ್ಸಾಹ ನೀಡಿದವರಿಗೆ ಕನಿಷ್ಟ 01 ವರ್ಷದಿಂದ 2 ವರ್ಷಗಳ ಜೈಲು ಶಿಕ್ಷೆ ಮತ್ತು ರೂ. 1 ಲಕ್ಷ ರೂಪಾಯಿ ದಂಡವನ್ನು ವಿಧಿಸಬಹುದಾಗಿದ್ದು, ಈ ಬಗ್ಗೆ ಜಾಗೃತಿ ಮೂಡಿಸಿ, ಬಾಲ್ಯವಿವಾಹ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮ ಸ್ವರಾಜ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕಾಯ್ದೆ-2015ರ ಅನ್ವಯ ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಕ್ಕಳ ಸಂರಕ್ಷಣೆ ಸ್ಥಳೀಯ ಸರಕಾರದಾಗಿದ್ದು, ಗ್ರಾ.ಪಂ ಮಟ್ಟದ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಗಳನ್ನು ರಚಿಸಲಾಗಿದೆ. ತಾಲೂಕಿನ ಎಲ್ಲಾ ಗ್ರಾಪಂ.ಗಳಲ್ಲಿ ಕನಿಷ್ಟ 3 ತಿಂಗಳಿಗೊಮ್ಮೆ ಸಭೆಯನ್ನು ಆಯೋಜಿಸಬೇಕು. ಮಕ್ಕಳಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದಲ್ಲಿ ಅದನ್ನು ಬಗೆಹರಿಸುವುದು, ಒಂದು ವೇಳೆ ಗ್ರಾಮ ಪಂಚಾಯತ್‌ದಿಂದ ಸಾಧ್ಯವಾಗದಿದ್ದಲ್ಲಿ ಅದನ್ನು ತಾಲೂಕು ಮಟ್ಟದ ಸಮಿತಿಗೆ ವರದಿ ಮಾಡಬೇಕಾಗಿರುವುದು ಕಡ್ಡಾಯವಾಗಿರುತ್ತದೆ.
ಗ್ರಾ.ಪಂ ಮಟ್ಟದ ಮಹಿಳೆಯರ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿಗಳ ಸಭೆ ಆಯೋಜನೆಯ ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳೆಂದು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನೇಮಿಸಲಾಗಿದ್ದು, ಯಾವುದೇ ಅಧಿಕಾರಿಗಳು ಈ ವಿಷಯಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯತೆ ತೂರಿದಲ್ಲಿ ಜಿಲ್ಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸಲಾಗುವುದು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ತಾಲೂಕು ಮಟ್ಟದ ಎಲ್ಲಾ ಬಾಲ್ಯ ವಿವಾಹ ನಿಷೇದ ಅಧಿಕಾರಿಗಳು, ಸ್ವಯಂಸೇವಾ ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.