ಡಿ ಡಿ ನ್ಯೂಸ್. ಕೊಪ್ಪಳ : ಕೊಪ್ಪಳ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಕಾಯ್ದೆ ಅಡಿ ಜೂನ್ 21ರಂದು ವಿಶೇಷ ದಾಳಿ, ತಪಾಸಣೆ ಕೈಗೊಂಡು ನಾಲ್ಕು ಕಿಶೋರ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.
ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಬರುವ ಕೋಳಿ ಫಾರಂ, ಇಟ್ಟಂಗಿ ಭಟ್ಟಿ, ಫ್ಯಾಕ್ಟರಿ, ಹಾಗೂ ಇತರೆ ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿ ಬಾಲಕಾರ್ಮಿಕ, ಕಿಶೋರ ಕಾರ್ಮಿಕ ದಾಳಿ, ತಪಾಸಣೆ ಕಾರ್ಯವನ್ನು ಕೈಗೊಳ್ಳಲಾಯಿತು. ವಿವಿಧ ಗ್ರಾಮೀಣ ಸಂಸ್ಥೆಗಳನ್ನು ಪರಿಶೀಲಿಸಿದಾಗ, ಕೆ.ಪಿ.ಆರ್. ಫರ್ಟಿಲೈಜರ್ ಪ್ರೈವೆಟ್ ಲಿಮಿಟೆಡ್ ಹಾಲವರ್ತಿ, ಸಂಸ್ಥೆಯಲ್ಲಿ 4 ಕಿಶೋರ ಕಾರ್ಮಿಕ ಮಕ್ಕಳು ಪತ್ತೆಯಾಗಿದ್ದು, ಎಲ್ಲಾ ಮಕ್ಕಳನ್ನು ಪುನರ್ವಸತಿ ಮತ್ತು ಸೂಕ್ತ ಕ್ರಮಕ್ಕೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಲಾಗಿದೆ.
ಈ ತಪಾಸಣೆ ಕಾರ್ಯದಲ್ಲಿ ಕಾರ್ಮಿಕ ನಿರೀಕ್ಷಕರಾದ ಶಿವಶಂಕರ್ ತಳವಾರ, ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ಬಸವರಾಜ ಹಿರೇಗೌಡ್ರ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಧರ್ಮಪ್ಪ ಚೌಧರಿ, ಕೊಪ್ಪಳ ಗ್ರಾಮೀಣ ಪೋಲಿಸ್ ಠಾಣೆ ಆರಕ್ಷಕ ಉಪನಿರೀಕ್ಷಕರಾದ ಫಕೀರಪ್ಪ, ಮಕ್ಕಳ ಸಹಾಯವಾಣಿ,1098 ಸಿಬ್ಬಂದಿ ಬಸವರಾಜ ಗುಳೇದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.