deshadoothanews

ಜಿಲ್ಲೆಯಲ್ಲಿ ಡ್ರೋನ್, ಯುಎವಿ ಮೂಲಕ ಮರು ಭೂಮಾಪನ ಕಾರ್ಯ

ಡಿ ಡಿ ನ್ಯೂಸ್. ಕೊಪ್ಪಳ

0

ಡಿ ಡಿ ನ್ಯೂಸ್. ಕೊಪ್ಪಳ :

ಜಿಲ್ಲೆಯಲ್ಲಿ ಡ್ರೋನ್, ಯುಎವಿ ಮೂಲಕ ಮರು ಭೂಮಾಪನ ಕಾರ್ಯ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರು ತಿಳಿಸಿದ್ದಾರೆ.

ಸರ್ಕಾರದ ಆದೇಶದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಡ್ರೋನ್/ ಯುಎವಿ ಮೂಲಕ ಸರ್ವೇ ಮಾಡಿ ಗ್ರಾಮೀಣ ವಸತಿ ಆಸ್ತಿ, ಕೃಷಿ ಭೂಮಿಯ ಹಕ್ಕುದಾಖಲೆ ಮತ್ತು ನಗರ ಆಸ್ತಿಗಳನ್ನು ಸಿದ್ದಪಡಿಸುವ ಯೋಜನೆ ಅನುಷ್ಠಾನಗೊಳಿಸಲು ಅನುಮೋದಿಸಲಾಗಿದ್ದು, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಆಯುಕ್ತರಿಂದ 2023ರ ಜನವರಿ 21ರಂದು ಕೊಪ್ಪಳ ಜಿಲ್ಲೆಯ ಸಂಪೂರ್ಣ ಡ್ರೋನ್/ ಯುಎವಿ ಮೂಲಕ ಸರ್ವೇ ಮಾಡಲು ಎಂಎಸ್ ಆಲ್‌ಟೆಟ್ಟಾ ಎಲ್‌ಎಲ್‌ಪಿ ಸಂಸ್ಥೆಯವರಿಗೆ ಕಾರ್ಯಾದೇಶ ನೀಡಲಾಗಿದೆ.

ಡ್ರೋನ್/ ಯುಎವಿ ಮೂಲಕ ಸರ್ವೇ ಮಾಡಿ, ಗ್ರಾಮೀಣ ವಸತಿ ಆಸ್ತಿ, ಕೃಷಿ ಭೂಮಿಯ ಹಕ್ಕುದಾಖಲೆ ಮತ್ತು ನಗರ ಆಸ್ತಿಗಳನ್ನು, ಸಂಪೂರ್ಣ ದಾಖಲೆಗಳನ್ನು ಡಿಜಿಟಲ್ ತಂತ್ರಜ್ಞಾನ ಬಳಸಿಕೊಂಡು ತಯಾರಿಸಿರುವುದರಿಂದ ಸಾರ್ವಜನಿಕರಿಗೆ, ಜಿಲ್ಲೆಯ ರೈತಾಪಿ ವರ್ಗದ ಜನರಿಗೆ ಅವರ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡಲು ಮತ್ತು ಅಳತೆ ಮಾಡಲು, ತ್ವರಿತವಾಗಿ ಹಾಗೂ ನಿಖರವಾಗಿ ಅಳತೆ ಮಾಡಲು ಉಪಯೋಗವಾಗುತ್ತದೆ.

ಅಲ್ಲದೇ ಸರ್ಕಾರಿ ಭೂಮಿಯನ್ನು ಸಂರಕ್ಷಿಸಲು ಮತ್ತು ತಂತ್ರಜ್ಞಾನದ ಮೂಲಕ ಕ್ಷಣ ಮಾತ್ರದಲ್ಲಿ ಮಾಹಿತಿ ಪಡೆಯಲು ಸಹಾಯವಾಗುತ್ತದೆ.

ಈಗಾಗಲೇ ಜಿಲ್ಲೆಯಲ್ಲಿ 74 ಗ್ರಾಮಗಳಲ್ಲಿ ಡ್ರೋನ್ ಹಾರಾಟ ಪೂರ್ಣಗೊಂಡಿದ್ದು, ಉಳಿದ ಗ್ರಾಮಗಳಲ್ಲಿಯೂ ಹಂತ ಹಂತವಾಗಿ ಮಿನಿಸ್ಟ್ರಿ ಆಫ್ ಸಿವಿಲ್ ಏವಿಯೇಷನ್ ರವರ “ದಿ ಡ್ರೋನ್ ರೂಲ್ 2021”ರ ಪ್ರಕಾರ ಅನುಮತಿ ಅವಶ್ಯವಿಲ್ಲದ ಭೂಮಿಯಿಂದ 120 ಮೀಟರ್ ಎತ್ತರದಲ್ಲಿ ಹಾರಾಟ ಪ್ರಕ್ರಿಯೆ ಮುಂದುವರೆಯುತ್ತದೆ.

ಈ ಕಾರ್ಯಕ್ಕೆ ಸಾರ್ವಜನಿಕರು, ರೈತರು ಯಾವುದೇ ರೀತಿಯ ಆತಂಕ ಪಡುವ ಅವಶ್ಯಕತೆ ಇರುವುದಿಲ್ಲ. ಇದು ರೈತರ ಅನುಕೂಲಕ್ಕಾಗಿ ಸರ್ಕಾರದಿಂದ ತಂತ್ರಜ್ಞಾನದ ಮೂಲಕ ಜಾರಿಯಾಗುತ್ತಿರುವ ಮರು ಭೂಮಾಪನ ಕಾರ್ಯವಾಗಿರುತ್ತದೆ.

ಭೂ ಹಿಡುವಳಿದಾರರು (ರೈತರು) ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Leave A Reply

Your email address will not be published.