ಜಂಜಾತೀಯ ಖೇಲ್ ಮಹೋತ್ಸವದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಕೊಪ್ಪಳ ಜಿಲ್ಲೆಯ ಅಂಜಲಿ, ಇಂದುಮತಿ, ಶಿಲ್ಪಾ, ಶಿವಕುಮಾರ, ಮಂಜುನಾಥ ಅಶೋಕ
ಡಿ ಡಿ ನ್ಯೂಸ್. ಕೊಪ್ಪಳ
(ವಿಶೇಷ ವರದಿ)
ಡಿ ಡಿ ನ್ಯೂಸ್. ಕೊಪ್ಪಳ:
ಒರಿಸ್ಸಾದ ಭುವನೇಶ್ವರ ಕ್ರೀಡಾಂಗಣದಲ್ಲಿ ಜೂನ್ 09 ರಿಂದ 12ರವರೆಗೆ ಜರುಗಿದ “ಜಂಜಾತೀಯ ಖೇಲ್ ಮಹೋತ್ಸವ-2023″ರ ಮಹಿಳಾ ಹಾಗೂ ಪುರುಷರ ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕೊಪ್ಪಳ ಜಿಲ್ಲೆಯ ಕ್ರೀಡಾಪಟುಗಳು ಉತ್ತಮ ಸಾಧನೆ ತೋರಿದ್ದಾರೆ.
ಪುರುಷರ ಮತ್ತು ಮಹಿಳೆಯರ
ವಾಲಿಬಾಲ್ ಪಂದ್ಯಗಳಲ್ಲಿ
ಪ್ರಥಮ ಸ್ಥಾನ ಗಿಟ್ಟಿಸುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ.
ಮಹಿಳೆಯರ ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ತಂಡವನ್ನು ಪ್ರತಿನಿಧಿಸಿದ ಕ್ರೀಡಾಪಟುಗಳಾದ
ಕೊಪ್ಪಳ ಜಿಲ್ಲೆಯ ತಿಗರಿ ಗ್ರಾಮದ ಅಂಜಲಿ ರಾಮಣ್ಣ ಕರಡಿ, ಹಿರೆಸಿಂದೋಗಿಯ ಇಂದುಮತಿ ಯಂಕಪ್ಪ ತಳವಾರ ಹಾಗೂ ಲಿಂಗನಬಂಡಿಯ ಶಿಲ್ಪಾ ದೇವಪ್ಪ ಭಾಗವಹಿಸಿ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಅದೇ ರೀತಿ ಪುರುಷರ ವಾಲಿಬಾಲ್ ಪಂದ್ಯದಲ್ಲಿ ಕರ್ನಾಟಕ ರಾಜ್ಯ ತಂಡ ಪ್ರತಿನಿಧಿಸಿದ ಕೊಪ್ಪಳ ಜಿಲ್ಲೆಯ ಹೊಸಜೂರಟಗಿ ಗ್ರಾಮದ ಶಿವಕುಮಾರ, ಹುಲಗಿಯ ಮಂಜುನಾಥ ಮತ್ತು ಅಶೋಕ ಅವರು ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಇವರು ವಸತಿ ಶಾಲೆಯ ವಿದ್ಯಾರ್ಥಿಗಳು:
ಈ ಕ್ರೀಡಾಪಟುಗಳು ವಸತಿ ಶಾಲೆಯ ವಿದ್ಯಾರ್ಥಿಗಳು ಅನ್ನುವುದು ವಿಶೇಷ.
ಕೊಪ್ಪಳ ಜಿಲ್ಲಾ ಕ್ರೀಡಾ ವಸತಿ ಶಾಲೆಯಲ್ಲಿ ಇವರಿಗೆ ನುರಿತ ತರಬೇತುದಾರರಿಂದ ಕ್ರೀಡಾ ತರಬೇತಿ ಸಿಕ್ಕಿದ್ದು ಅಭಿನಂದನಾರ್ಹ ಸಂಗತಿಯಾಗಿದೆ.
ಜಿಲ್ಲೆಗೆ ಹೆಮ್ಮೆಯ ಸಂಗತಿ: ಬಯಲು ಸೀಮೆಯ ಕೊಪ್ಪಳ ಜಿಲ್ಲೆಯು ಶೈಕ್ಷಣಿಕವಾಗಿ ದಿನೇದಿನೆ ಅಭಿವೃದ್ದಿ ಕಾಣುತ್ತಿದೆ. ಅಧ್ಯಯನದ ಜೊತೆಗೆ ಕೆಲವು ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಸಹ ಉತ್ತಮ ಸಾಧನೆ ತೋರಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಇಡೀ ಕೊಪ್ಪಳ ಜಿಲ್ಲೆಯ ಜನರು ಹೆಮ್ಮೆ ಪಡುವಂತಾಗಿದೆ ಎಂದು
ಕ್ರೀಡಾಪಟುಗಳ ಸಾಧನೆಗೆ ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಕೆ.ಗ್ರೇಸಿ ಹಾಗೂ
ಕಚೇರಿಯ ಅಧೀಕ್ಷಕರಾದ ಹೆಚ್.ನಾಗರಾಜ ಅವರು
ಅಭಿನಂದನೆ ತಿಳಿಸಿದ್ದಾರೆ.
ಸಹಕಾರ, ಪ್ರೇರಣೆ ದೊಡ್ಡದು: ಇಲಾಖೆಯಲ್ಲಿ ಎಲ್ಲ ತರಬೇತುದಾರರ ಬಗ್ಗೆ ಗೌರವ ಭಾವನೆ ಇದೆ. ಕ್ರೀಡಾ ಇಲಾಖೆಯ ಅಧಿಕಾರಿಗಳು, ಅಧೀಕ್ಷಕರು ಸೇರಿದಂತೆ ಕಮಲ್ ಸಿಂಗ್ ಬಿಶ್ಟ್, ತುಕಾರಾಮ ರಂಜಪಲ್ಲಿ, ಹನುಮೇಶ ಪೂಜಾರ ಇನ್ನೀತರರ ನೀಡುವ ಸಹಕಾರ ಸ್ಮರಣೀಯವಾಗಿದೆ. ಸಹ ತರಬೇತುದಾರರಾದ ಎ.ಎನ್.ಯತಿರಾಜು ಅವರ ಪ್ರೇರಣೆ ಹಾಗೂ ಇನ್ನೂ ಅನೇಕರ ಉತ್ತಮ ಸಲಹೆಗಳಿಂದಾಗಿ ವಿದ್ಯಾರ್ಥಿಗಳಿಗೆ ಉತ್ತಮವಾಗಿ ತರಬೇತಿ ಕೊಡಲು ಸಾಧ್ಯವಾಗುತ್ತಿದೆ. ಜಿಲ್ಲೆಯಲ್ಲಿ ಇಂತಹ ಕ್ರೀಡಾಸಕ್ತ ವಿದ್ಯಾರ್ಥಿಗಳ ಸಂಖ್ಯೆ ದೊಡ್ಡದಿದ್ದು ಅವರನ್ನು ಗುರುತಿಸಿ ತರಬೇತಿ ನೀಡುತ್ತೇವೆ ಎಂದು ವಾಲಿಬಾಲ್ ತರಬೇತುದಾರರಾದ ಸುರೇಶ ಯಾದವ ಅವರು ಪ್ರತಿಕ್ರಿಯಿಸಿದರು.