ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವ ಗೆಲ್ಲಿಸಿ: ರಾಹುಲ್ ರತ್ನಂ ಪಾಂಡೆ
ಡಿ ಡಿ ನ್ಯೂಸ್. ಕುಷ್ಟಗಿ
ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳ್ಳಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆ ಅವರು ಏಪ್ರಿಲ್ 27ರಂದು ಭೇಟಿ ನೀಡಿದರು.
*ಕೆರೆ ಹೂಳೆತ್ತುವ ಕಾಮಗಾರಿ ವೀಕ್ಷಣೆ:* ಹೀರೆನಂದಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಣ್ಣೆಗುಡ್ಡ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ವೀಕ್ಷಣೆ ಮಾಡಿದ ಸಿಇಓ ಅವರ ಅಧ್ಯಕ್ಷತೆಯಲ್ಲಿ ಸ್ವೀಪ್ ಕಾರ್ಯಕ್ರಮದಡಿ ಮತದಾನ ಜಾಗೃತಿ ಅಭಿಯಾನ ನಡೆಯಿತು.
ಸಿಇಓ ಅವರು ಮತದಾನ ಜಾಗೃತಿ ಕುರಿತು ಕೂಲಿಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಬೇಕು. ವಿಶೇಷ ಚೇತನರಿಗೆ ಮತಗಟ್ಟೆಗೆ ಬಂದು ಮತ ಹಾಕಿ ಹೋಗುವುದಕ್ಕೆ ವಾಹನದ ವ್ಯವಸ್ಥೆ ಕೂಡ ಮಾಡಲಾಗಿದೆ ಹಾಗೂ ಮತಗಟ್ಟೆ ಕೇಂದ್ರದಲ್ಲಿ 60 ವರ್ಷ ಮೇಲ್ಪಟ್ಟಂತವರು ಹಾಗೂ ವಿಶೇಷ ಚೇತನರಿಗೆ ನೆರಳು ಗಾಳಿ ಕುಡಿಯಲು ನೀರಿನ ವ್ಯವಸ್ಥೆ ಕೂಡ ಮಾಡಲಾಗಿರುತ್ತದೆ. ಹಿರಿಯ ನಾಗರಿಕರಿಗೆ ಮತದಾನ ಮಾಡಲು ಪ್ರತ್ಯೇಕವಾದ ವ್ಯವಸ್ಥೆ ಮತಗಟ್ಟೆ ಕೇಂದ್ರದಲ್ಲಿ ಮಾಡಲಾಗಿದ್ದು, ಶೇ. 100 ರಷ್ಟು ಮತ ಚಲಾಯಿಸಿ ಪ್ರಜಾಪ್ರಭುತ್ವ ಗೆಲ್ಲಿಸಬೇಕು. ದೇಶ, ನಾಡು ಕಟ್ಟುವಲ್ಲಿ ಪ್ರತಿಯೊಬ್ಬರ ಮತ ಮುಖ್ಯವಾಗಿರುತ್ತದ್ದು, ಯಾರೊಬ್ಬರೂ ಮತದಾನ ಮಾಡಲು ನಿಷ್ಕಾಳಜಿ ತೋರಬಾರದು. ಚುನಾವಣೆ ಎಂಬುದು ಪ್ರಜಾತಂತ್ರದ ಹಬ್ಬವಾಗಿದೆ ಎಂದರು.
*ವಿವಿಧ ಯೋಜನೆಗಳ ಕುರಿತು ಚರ್ಚೆ:* ಎಲ್ಲಾ ಕೂಲಿಕಾರರೊಂದಿಗೆ ನರೇಗಾ, ಜೆಜೆಎಂ, ಎಸ್.ಬಿ.ಎಂ., ಹೌಸಿಂಗ್ ಯೋಜನೆಗಳ ಕುರಿತು ಸಿಇಓ ಅವರು ಸುದೀರ್ಘವಾಗಿ ಚರ್ಚಿಸಿದರು.
*ಪ್ರತಿಜ್ಞಾ ವಿಧಿ ಸ್ವೀಕಾರ, ಆರೋಗ್ಯ ತಪಾಸಣೆ:* ಕಾರ್ಯಕ್ರಮದಲ್ಲಿ ಮತದಾನ ಜಾಗೃತಿಯ ಪ್ರತಿಜ್ಞಾವಿಧಿ ಸ್ವೀಕರಿಸಲಾಯಿತು ಹಾಗೂ ಎಲ್ಲಾ ಕೂಲಿಕಾರ್ಮಿಕರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಲಾಯಿತು.
*ಮತಗಟ್ಟೆ ಕೇಂದ್ರ ವೀಕ್ಷಣೆ:* ತಳವಗೇರ ಗ್ರಾಮ ಪಂಚಾಯತಿ ವ್ಯಾಪ್ತಿಯ ವಣಗೇರಿ ಗ್ರಾಮಕ್ಕೆ ಭೇಟಿ ನೀಡಿದ ಸಿಇಓ ಅವರು ಯುವ ಮತಗಟ್ಟೆ ಕೇಂದ್ರ ವೀಕ್ಷಣೆ ಮಾಡಿ, ಮೂಲಭೂತ ಸೌಕರ್ಯಗಳನ್ನೂ ಪರಿಶೀಲಿಸಿದರು.
*ಚೆಕ್ ಪೋಸ್ಟಗೆ ಭೇಟಿ:* ಕ್ಯಾದಗುಂಪಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕ್ಯಾದಗುಂಪಿ ತಪಾಸಣಾ ಕೇಂದ್ರಕ್ಕೆ (ಚೆಕ್ ಪೋಸ್ಟ್) ಸಿಇಓ ಅವರು ಭೇಟಿ ನೀಡಿ, ವಾಹನ ತಪಾಸಣೆಗಾಗಿ ನಿರ್ಮಿಸಿರುವ ನೆರಳನ್ನು ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಕುಷ್ಟಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹನುಮಂತಗೌಡ ಪಾಟೀಲ್, ಎಇಇ ಸಂಜಯ್ ಕುಮಾರ್, ತಾಪಂ ಸಹಾಯಕ ನಿರ್ದೇಶಕರಾದ ನಿಂಗನಗೌಡ ವಿ.ಎಚ್., ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಪ್ರಶಾಂತ್ ಹಿರೇಮಠ್, ಶ್ರೀಶೈಲ್ ಪಿ., ಅಂಬಮ್ಮ ಪಾಟೀಲ್, ಆರೋಗ್ಯ ಇಲಾಖೆ ಸಿಬ್ಬಂದಿ, ತಾಲೂಕ ನರೇಗಾ ಸಿಬ್ಬಂದಿಗಳಾದ ಚಂದ್ರಶೇಖರ್ ಹಿರೇಮಠ್, ಬಸವರಾಜ್, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಹಾಗೂ ಇತರರು ಇದ್ದರು.