*ಅಧಿಕಾರಿಗಳಿಗೆ ಶಾಸಕ ಜನಾರ್ಧನ ರೆಡ್ಡಿ ತಾಕೀತು*
*ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ವಿಪತ್ತು ನಿರ್ವಹಣೆ ಸಭೆ*
ಗಂಗಾವತಿ ಬೇಸಿಗೆ ಕಾಲದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ತ್ವರಿತವಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕ ಜನಾರ್ಧನ ರೆಡ್ಡಿ ಸೂಚನೆ ನೀಡಿದರು.
ತಾಲೂಕು ಪಂಚಾಯತ್ ಮಂಥನ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಶನಿವಾರ ನಡೆದ ಕುಡಿವ ನೀರಿನ ಸಮಸ್ಯೆ ಕುರಿತು ನಡೆದ ತಾಲೂಕು ವಿಪತ್ತು ನಿರ್ವಹಣೆ ಸಭೆಯ ಅಧ್ಯಕ್ಷತೆಯ ವಹಿಸಿ ಮಾತನಾಡಿದರು.
ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಫ್ತಿಯಲ್ಲಿ ಯಾವುದೇ ಗ್ರಾಮ, ವಾರ್ಡ್ , ಕಾಲೋನಿಗಳಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ಸಮನ್ವಯತೆಯೊಂದಿಗೆ ಕೆಲಸ ಮಾಡಬೇಕು. ಆರಂಭಿಸಿರುವ ಸಹಾಯವಾಣಿ ಸಂಖ್ಯೆಗೆ ಬರುವ ದೂರುಗಳಿಗೆ ಸ್ಪಂದಿಸಿ ತ್ವರಿತವಾಗಿ ಬಗೆಹರಿಸಬೇಕು. ಈ ಬೇಸಿಗೆ ಮುಗಿಯುವ ವರೆಗೂ ನಿರಂತರವಾಗಿ ನೀರಿನ ಸಮಸ್ಯೆ ಬರದಂತೆ ಕ್ರಮವಹಿಸಬೇಕು. ಪ್ರತಿ 15 ದಿನಗಳಿಗೊಮ್ಮೆ ನೀರಿನ ಪರೀಕ್ಷೆ ಕಡ್ಡಾಯವಾಗಿ ಮಾಡಬೇಕು ಎಂದರು.
ಬೇಸಿಗೆ ಆರಂಭದಲ್ಲಿ 19 ಗ್ರಾಮಗಳಲ್ಲಿ ಮಾತ್ರ ನೀರಿನ ಸಮಸ್ಯೆ ಉಲ್ಬಣಗೊಂಡಿತ್ತು. ಇದೀಗ 37 ಗ್ರಾಮಗಳನ್ನು ನೀರಿನ ಸಮಸ್ಯಾತ್ಮಕ ಗ್ರಾಮಗಳನ್ನಾಗಿ ಗುರುತಿಸಲಾಗಿದೆ. 40 ಖಾಸಗಿ ಬೋರ್ ವೆಲ್ ಗಳಿಂದ ನೀರು ಪೂರೈಸುವ ಕೆಲಸ ಮಾಡಲಾಗುತ್ತಿದೆ. ಆರ್ ಓ ಪ್ಲಾಂಟ್ ಗಳನ್ನು ಸಹ ರಿಪೇರಿ ಮಾಡಿಸಿ ಸಾರ್ವಜನಿಕರಿಗೆ ಶುದ್ಧ ಕುಡಿವ ನೀರು ಒದಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕ ಜನಾರ್ಧನ ರೆಡ್ಡಿ ಸೂಚನೆ ನೀಡಿದರು.
ಗಂಗಾವತಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮರೆಡ್ಡಿ ಪಾಟೀಲ್ ಅವರು ಮಾತನಾಡಿ, ಕುಡಿವ ನೀರಿನ ಸಮಸ್ಯೆಗಾಗಿ ಸ್ಪಂದಿಸಲು ಸಹಾಯವಾಣಿ ಆರಂಭಿಸಿದ್ದು, ಈಗಾಗಲೇ 30 ದೂರುಗಳು ಬಂದಿದ್ದು, ತ್ವರಿತವಾಗಿ ಸ್ಥಾನಿಕ ಪರಿಶೀಲನೆ ಮಾಡಿ ಬಗೆಹರಿಸಲಾಗಿದೆ. ನೀರಿನ ಸಮಸ್ಯೆ ಇರುವ 37 ಗ್ರಾಮಗಳಲ್ಲಿಸಮಸ್ಯೆ ಇದ್ದು, 40 ಖಾಸಗಿ ಬೋರ್ ವೆಲ್ ಗಳಿಂದ ನೀರು ಪೂರೈಸಲಾಗುತ್ತಿದೆ. ಇದರಲ್ಲಿ 22 ಬೋರ್ ವೆಲ್ ಗಳು ದಾನಿಗಳು ನೀಡಿದ್ದು, 18 ಬೋರ್ ವೆಲ್ ಗಳು ಬಾಡಿಗೆ ಪಡೆಯಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಕೊಪ್ಪಳ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ದುಂಡಪ್ಪ ತುರಾದಿ ಅವರು, ಗಂಗಾವತಿ ವಿಧಾನಸಭಾ ಕ್ಷೇತ್ರದ ಕೊಪ್ಪಳ ತಾಲೂಕಿಗೆ ಸಂಬಂಧಿಸಿದ ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇರುವ ಗ್ರಾಮಗಳು ಹಾಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಈ ವೇಳೆ ಆರ್ ಡಬ್ಲ್ಯೂ ಎಸ್ ಇಇಗಳಾದ ಮಹೇಶ ಶಾಸ್ತ್ರಿ, ಎಇಇ ದೇವಣ್ಣ ಕಟ್ಟಿ, ಹೊನ್ನಪ್ಪ ಬಿ., ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಪಾಟೀಲ್, ತಾ.ಪಂ. ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್, ಗಂಗಾವತಿ ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯತ್ ಗಳ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಸೇರಿ ಇತರರಿದ್ದರು.
